
ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಂಚು: ಅತಿಶಿ
ಏಪ್ರಿಲ್ 12- ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಚು ರೂಪಿಸುತ್ತಿದೆ ಎಂದು ದೆಹಲಿ ಸಂಪುಟ ಸಚಿವ ಅತಿಶಿ ಶುಕ್ರವಾರ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʻಅರವಿಂದ್ ಕೇಜ್ರಿವಾಲ್ ಅವರ ಬಂಧನ ಸರ್ಕಾರವನ್ನು ಉರುಳಿಸುವ ರಾಜಕೀಯ ಪಿತೂರಿ. ದೆಹಲಿ ಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ ಎಂದು ತಿಳಿದುಬಂದಿದೆ. ಆದರೆ, ರಾಷ್ಟ್ರಪತಿ ಆಳ್ವಿಕೆ ಹೇರುವಿಕೆ ಅಕ್ರಮ ಮತ್ತು ಜನಾದೇಶದ ವಿರುದ್ಧ,ʼ ಎಂದು ಹೇಳಿದರು.
ʻರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆಯನ್ನು ಸೂಚಿಸುವ ಅನೇಕ ಘಟನೆಗಳು ಸಂಭವಿಸಿವೆ. ದೆಹಲಿಯಲ್ಲಿ ಕೆಲವು ತಿಂಗಳುಗಳಿಂದ ಐಎಎಸ್ ಅಧಿಕಾರಿಯನ್ನು ನಿಯೋಜಿಸಿಲ್ಲ. ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಮಾದರಿ ನೀತಿ ಸಂಹಿತೆಯನ್ನು ಉಲ್ಲೇಖಿಸಿ ಸಚಿವರ ಸಭೆಗಳಿಗೆ ಅಧಿಕಾರಿಗಳು ಹಾಜರಾಗುತ್ತಿಲ್ಲ. ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಎಂಎಚ್‌ಎಗೆ ಪತ್ರ ಬರೆದಿದ್ದಾರೆ. ರಾಜಧಾನಿಯಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿಗೆ ಈಗಾಗಲೇ ತಿಳಿದಿದೆʼ ಎಂದು ಹೇಳಿದರು.
ʻಎಎಪಿ 2015 ಮತ್ತು 2020 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದೆ. ಹೀಗಾಗಿ, ಅವರು ಸರ್ಕಾರವನ್ನು ಉರುಳಿಸಲು ಬಯಸುತ್ತಾರೆ. ಆದರೆ, ರಾಷ್ಟ್ರಪತಿ ಆಳ್ವಿಕೆ ಹೇರುವುದು ಕಾನೂನುಬಾಹಿರವಾಗುತ್ತದೆ. ನಾವು ಫೆ.17ರಂದು ಬಹುಮತವನ್ನು ಸಾಬೀತುಪಡಿಸಿದ್ದೇವೆ,ʼ ಎಂದು ಹೇಳಿದರು.
ರಾಷ್ಟ್ರಪತಿ ಆಳ್ವಿಕೆ ಭಯ ಆಶ್ಚರ್ಯಕರ: ಎಎಪಿ ನಾಯಕನ ಆರೋಪಕ್ಕೆ ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ, ʻವಿಧಾನಸಭೆಯಲ್ಲಿ 62 ಶಾಸಕರನ್ನು ಹೊಂದಿರುವ ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರಪತಿ ಆಳ್ವಿಕೆಯ ಭಯ ಕಾಡುತ್ತಿರುವುದು ಆಶ್ಚರ್ಯಕರ. ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕುʼ ಎಂದು ಒತ್ತಾಯಿಸಿದರು.
ʻಕೇಜ್ರಿವಾಲ್ ದೆಹಲಿ ಹೈಕೋರ್ಟ್‌ನ ಛೀಮಾರಿಯ ಬಿಸಿ ಅನುಭವಿಸುತ್ತಿದ್ದಾರೆ. ಆಪರೇಷನ್ ಕಮಲ ನಡೆಯಲಿದೆ ಎಂದಿದ್ದ ಅತಿಶಿ ಈಗ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಕೇಜ್ರಿವಾಲ್ ರಾಜೀನಾಮೆ ನೀಡುವುದು ಉತ್ತಮʼ ಎಂದು ಸಚ್‌ದೇವ ಹೇಳಿದರು.