ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ತಾರತಮ್ಯ ಮಾಡುವ ಸಿಎಎ ಷರತ್ತನ್ನು ರದ್ದುಪಡಿಸುತ್ತೇವೆ: ಶಶಿ ತರೂರ್
ಸಿಎಎ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್‌ಗೆ ತೆರಳುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್‌ಗೆ ತೆರಳುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಮಂಗಳವಾರ (ಮಾರ್ಚ್ 12) ಹೇಳಿದ್ದಾರೆ.
ಮುಸ್ಲಿಮರನ್ನು ಫಲಾನುಭವಿಗಳ ಪಟ್ಟಿಯಿಂದ ಹೊರಗಿಡುವ ಕಾಯಿದೆಯು "ನೈತಿಕವಾಗಿ ಮತ್ತು ಸಾಂವಿಧಾನಿಕವಾಗಿ ತಪ್ಪು" ಕಾಂಗ್ರೆಸ್ ಪಕ್ಷ ಅಥವಾ INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕಾನೂನಿನಲ್ಲಿರುವ ನಿರ್ದಿಷ್ಟ ನಿಬಂಧನೆಯನ್ನು ಹಿಂಪಡೆಯಲಾಗುವುದು ಎಂದು ಅವರು ಹೇಳಿದರು.
“ನಾನು ಇದನ್ನು ನೈತಿಕವಾಗಿ ಮತ್ತು ಸಾಂವಿಧಾನಿಕವಾಗಿ ತಪ್ಪು ಎಂದು ಹೇಳಲಿಚ್ಚಿಸುತ್ತೇನೆ. ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಲು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಿರ್ಧಾರವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. INDIA ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ನಾವು ಈ ಕಾನೂನಿನ ನಿಬಂಧನೆಯನ್ನು ಯಾವುದೇ ಸಂದೇಹವಿಲ್ಲದೆ ಹಿಂಪಡೆಯುತ್ತೇವೆ. ಅದು ನಮ್ಮ ಪ್ರಣಾಳಿಕೆಯಲ್ಲಿಯೂ ಇರಲಿದೆ.
ನಮ್ಮ ಪೌರತ್ವ ಮತ್ತು ನಮ್ಮ ರಾಷ್ಟ್ರದ ವ್ಯವಸ್ಥೆಯಲ್ಲಿ ಧರ್ಮ ಪರಿಚಯಿಸುವುದನ್ನು ನಾವು ಬೆಂಬಲಿಸುವುದಿಲ್ಲ ಎಂದು ತರೂರ್ ಸುದ್ದಿಗಾರರಿಗೆ ತಿಳಿಸಿದರು.
“ಒಂದು ಪ್ರಮುಖ ಧರ್ಮವನ್ನು ಹೊರತುಪಡಿಸಿ ಇನ್ನುಳಿದ ಧರ್ಮಗಳಿಗೆ ತ್ವರಿತ ಪೌರತ್ವ ನೀಡುವುದಾಗಿ ಹೇಳುವ ಎನ್‌ಡಿಎ ಸರ್ಕಾರದ ಪ್ರಯತ್ನವು ಸಂಪೂರ್ಣವಾಗಿ ಕೋಮುವಾದಿಯಾಗಿದ್ದು, ಅದು ದೇಶವನ್ನು ಹಾನಿಗೊಳಿಸುವುದಲ್ಲದೇ, ವಿಭಜಿಸುತ್ತದೆ ಎಂದು ತರೂರ್ ಹೇಳಿದರು.
ಈ ಶಾಸನವು ಕೆಟ್ಟದ್ದಲ್ಲ, ಇದು ದೀರ್ಘಕಾಲದವರೆಗೆ ಭಾರತದಲ್ಲಿ ಆಶ್ರಯ ಪಡೆಯುತ್ತಿರುವ ನೆರೆಯ ರಾಷ್ಟ್ರಗಳ ಜನರಿಗೆ ತ್ವರಿತ ಪೌರತ್ವವನ್ನು ನೀಡಲು ಸಹಾಯ ಮಾಡುತ್ತದೆ. "ಸಿಎಎ ಕಾಯಿದೆಯಡಿಯಲ್ಲಿ ನೆರೆಯ ದೇಶಗಳಿಂದ ಆಶ್ರಯ ಪಡೆಯುವವರಿಗೆ ತ್ವರಿತ ಪೌರತ್ವ ಇರುತ್ತದೆ. ಅದು ತುಂಬಾ ಒಳ್ಳೆಯ ತತ್ವ. ಅಕ್ಕಪಕ್ಕದ ದೇಶಗಳಿಂದ ಪಲಾಯನ ಮಾಡುತ್ತಿರುವವರು, ಅಲ್ಲಿ ಕಿರುಕುಳಕ್ಕೋ ಅಥವಾ ಯಾವುದೋ ಕಾರಣಕ್ಕೆ ಹೆದರಿ ಬಂದವರಿಗೆ ನಮ್ಮ ದೇಶದಲ್ಲಿ ಆಶ್ರಯ ನೀಡಬೇಕು. ನಾನು ಈ ಕಾನೂನನ್ನು ಸ್ವಾಗತಿಸುತ್ತಿದ್ದೆ. ಆದರೆ ಒಂದು ಧರ್ಮದ ಜನರನ್ನು ಹೊರಗಿಡಲಾಗಿದೆ. ಇದರ ಅರ್ಥವೇನು? ನೀವು ಮೂಲಭೂತವಾಗಿ ಕಿರುಕುಳದ ಕಾರಣದಿಂದ ಭಾರತೀಯರಾಗಲು ಬಯಸುವ ಜನರನ್ನು ಬಿಟ್ಟುಬಿಡುತ್ತಿದ್ದೀರಿ. ಪಾಕಿಸ್ತಾನದಿಂದ ಬಂದವರು ಮುಸ್ಲಿಮರಾಗಿ ಹುಟ್ಟಿರಬಹುದು ಆದರೆ ಆ ದೇಶವನ್ನು ತಿರಸ್ಕರಿಸಿದ ಮತ್ತು ಆ ದೇಶದಲ್ಲಿ ಕಿರುಕುಳಕ್ಕೊಳಗಾದವರ ಬಗ್ಗೆ ಏನು ಹೇಳುತ್ತೀರಿ? ಅವರು ಹೇಳಿದರು.
2019ರಲ್ಲಿ ಪ್ರಸ್ತಾಪಿಸಿದ ಸಿಎಎ, ಎನ್‌ಆರ್‌ಸಿ ಕಾನೂನಿಗೆ ಕೇಂದ್ರವು ಸೋಮವಾರ ನಿಯಮಗಳನ್ನು ಸೂಚಿಸಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಡಿಸೆಂಬರ್ 31, 2014 ಅಥವಾ ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವವನ್ನು ಒದಗಿಸಲು ಕಾನೂನು ಭರವಸೆ ನೀಡುತ್ತದೆ.
ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಭಾರತೀಯ ಪೌರತ್ವವನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾದ ವೆಬ್‌ಸೈಟ್ ಅನ್ನು ಕೇಂದ್ರ ಗೃಹ ಸಚಿವಾಲಯ ಪ್ರಾರಂಭಿಸಿದೆ.