Jai Hind Sabha: 10 ದಿನ 15 ರಾಜ್ಯಗಳಲ್ಲಿ ಕಾಂಗ್ರೆಸ್‌ನಿಂದ ಜೈಹಿಂದ್ ಸಭೆ
x

Jai Hind Sabha: 10 ದಿನ 15 ರಾಜ್ಯಗಳಲ್ಲಿ ಕಾಂಗ್ರೆಸ್‌ನಿಂದ ಜೈಹಿಂದ್ ಸಭೆ

ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸುವುದರ ಜೊತೆಗೆ, ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ಸರ್ಕಾರದ ನಿಲುವನ್ನು ಪ್ರಶ್ನಿಸುವುದು ಈ ಸಭೆಗಳ ಉದ್ದೇಶ ಎಂದು ಕಾಂಗ್ರೆಸ್​ ನಾಯಕರು ಬುಧವಾರ ದೆಹಲಿಯಲ್ಲಿ ಪ್ರಕಟಿಸಿದ್ದಾರೆ.


ಮೇ 20ರಿಂದ 30 ರವರೆಗೆ ದೇಶಾದ್ಯಂತ 15 ರಾಜ್ಯಗಳಲ್ಲಿ 'ಜೈ ಹಿಂದ್' ಸಭೆಗಳನ್ನು ಆಯೋಜಿಸಲು ಕಾಂಗ್ರೆಸ್ ನಿರ್ಧರಿಸಿದೆ. ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸುವುದರ ಜೊತೆಗೆ, ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ಸರ್ಕಾರದ ನಿಲುವನ್ನು ಪ್ರಶ್ನಿಸುವುದು ಈ ಸಭೆಗಳ ಉದ್ದೇಶ ಎಂದು ಕಾಂಗ್ರೆಸ್​ ನಾಯಕರು ಬುಧವಾರ ದೆಹಲಿಯಲ್ಲಿ ಪ್ರಕಟಿಸಿದ್ದಾರೆ. ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಅಮೆರಿಕದ ಪಾತ್ರದ ಬಗ್ಗೆ ಸರ್ಕಾರದ ಮೌನವನ್ನು ಈ ಸಭೆಗಳಲ್ಲಿ ಟೀಕಿಸಲಾಗುವುದು ಎಂದು ಕಾಂಗ್ರೆಸ್​ ಹೇಳಿದೆ.

ಈ ಸಭೆಗಳ ಮೂಲಕ ದೇಶದ ಸಶಸ್ತ್ರ ಪಡೆಗಳ ಧೈರ್ಯವನ್ನು ಶ್ಲಾಘಿಸಲು ಮತ್ತು ಇತ್ತೀಚಿನ ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಸಂದರ್ಭದಲ್ಲಿ ನಡೆದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂಬ ಅಂಶವನ್ನು ಮುಂದಿಡಲು ಬಯಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

ಉಗ್ರರ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಮರ್ಥ್ಯ ಬಯಲಾಗಿದ್ದು ಅದರನ್ನು ಜನರ ಮುಂದಿಡಲಾಗುವುದು. ಅದೇ ರೀತಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಸರ್ಕಾರದ ಮೌನವನ್ನು ಕಟುವಾಗಿ ಪ್ರಶ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಸಭೆಗಳಲ್ಲಿ ನಿವೃತ್ತ ಸೇನಾ ಸೈನಿಕರು, ಪಕ್ಷದ ನಾಯಕರು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿ, ಬಾರ್ಮರ್, ಶಿಮ್ಲಾ, ಹಲ್ದವಾನಿ, ಪಟ್ನಾ, ಜಬಲ್‌ಪುರ, ಪುಣೆ, ಗೋವಾ, ಬೆಂಗಳೂರು, ಕೊಚ್ಚಿ, ಗುವಾಹಟಿ, ಕೋಲ್ಕತ್ತ, ಹೈದರಾಬಾದ್, ಭುವನೇಶ್ವರ ಮತ್ತು ಪಠಾಣ್‌ಕೋಟ್ ಸೇರಿದಂತೆ 15 ರಾಜ್ಯಗಳ ಪ್ರಮುಖ ನಗರಗಳಲ್ಲಿ ಈ ಸಭೆಗಳು ನಡೆಯಲಿವೆ.

ಬಿಜೆಪಿಯಿಂದ ರಾಜಕೀಯ ಲಾಭದ ಆರೋಪ

ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ನಂತರ, 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಉಗ್ರಗಾಮಿ ಕೇಂದ್ರಗಳ ಮೇಲೆ ಯಶಸ್ವಿ ದಾಳಿ ನಡೆಸಿತ್ತು. ಈ ಯಶಸ್ಸನ್ನು ಆಚರಿಸಲು ಬಿಜೆಪಿ ಶಿಮ್ಲಾದಲ್ಲಿ ತಿರಂಗಾ ಯಾತ್ರೆಯನ್ನು ಆಯೋಜಿಸಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಈ ಕಾರ್ಯಾಚರಣೆಯನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಮೇ 10 ರಂದು ಭಾರತವು ಪಾಕಿಸ್ತಾನದ ವಿರುದ್ಧದ ಪ್ರತೀಕಾರದ ದಾಳಿಗಳನ್ನು ಏಕಾಏಕಿ ಕೊನೆಗೊಳಿಸಿದ್ದೇಕೆ ಎಂಬ ಪ್ರಶ್ನೆಯನ್ನು ಸಹ ಕಾಂಗ್ರೆಸ್ ಎತ್ತಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ತಾವು ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸರ್ಕಾರದ ಮೌನವನ್ನು ಕಾಂಗ್ರೆಸ್ ಟೀಕಿಸಿದೆ. ಈ ವಿಷಯವನ್ನು ಜನರ ಮುಂದೆ ತರಲು ಮತ್ತು ಸರ್ಕಾರದ ಮೇಲೆ ಒತ್ತಡ ಹೇರಲು 'ಜೈ ಹಿಂದ್' ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಭೆಗಳು ಕೇವಲ ಸಶಸ್ತ್ರ ಪಡೆಗಳ ಗೌರವಾರ್ಥವಾಗಿ ಮಾತ್ರವಲ್ಲದೆ, ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ನೀತಿಯ ಸವಾಲುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿವೆ. ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಅಮೆರಿಕದ ಪಾತ್ರ ಮತ್ತು ಸರ್ಕಾರದ ಪ್ರತಿಕ್ರಿಯೆಯ ಕೊರತೆಯ ಬಗ್ಗೆ ಸಾರ್ವಜನಿಕ ಚರ್ಚೆಗೆ ಈ ಸಭೆಗಳು ವೇದಿಕೆಯಾಗಲಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Read More
Next Story