
ಸಾಂದರ್ಭಿಕ ಚಿತ್ರ
ನರೇಗಾ ಹೆಸರು ಬದಲಾವಣೆಗೆ ಕಾಂಗ್ರೆಸ್ ಕಿಡಿ: "ಬಿಜೆಪಿಗೆ ಮಹಾತ್ಮ ಗಾಂಧಿಯವರ ಮೇಲೂ ದ್ವೇಷವೇಕೆ?"
"ಮೋದಿ ಜೀ, ನೀವು ಏನೇ ಹೆಸರಿಟ್ಟರೂ, ಈ ಪರಿವರ್ತನಾಕಾರಿ ಯೋಜನೆಯನ್ನು ಭಾರತದ ಪ್ರತಿ ಹಳ್ಳಿಗೆ ತಲುಪಿಸಿದ್ದು ಡಾ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರು ಎಂಬುದು ಜನರಿಗೆ ತಿಳಿದಿದೆ," ಎಂದು ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಗ್ರಾಮೀಣ ಜನರ ಜೀವನಾಡಿಯಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (MGNREGA) ಹೊಸ ಹೆಸರಿಡಲು ಮುಂದಾಗಿದ್ದು, ಇದಕ್ಕೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. "ಬಿಜೆಪಿ ಸರ್ಕಾರಕ್ಕೆ ನೆಹರೂ ಅವರನ್ನು ಕಂಡರೆ ದ್ವೇಷವಿತ್ತು, ಈಗ ಮಹಾತ್ಮ ಗಾಂಧಿಯವರ ಹೆಸರಿನ ಮೇಲೂ ದ್ವೇಷ ಹುಟ್ಟಿದಂತಿದೆ," ಎಂದು ಕಾಂಗ್ರೆಸ್ ಟೀಕಿಸಿದೆ.
ಶುಕ್ರವಾರ (ಡಿಸೆಂಬರ್ 12) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾಯ್ದೆಯ ಹೆಸರನ್ನು ಬದಲಾಯಿಸುವ ಮಸೂದೆಗೆ ಅನುಮೋದನೆ ನೀಡಲಾಗಿದೆ. ಮೂಲಗಳ ಪ್ರಕಾರ, ಈ ಯೋಜನೆಯನ್ನು ಇನ್ಮುಂದೆ 'ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನಾ' ಎಂದು ಕರೆಯಲಾಗುವುದು. ಹೆಸರಿನ ಬದಲಾವಣೆಯ ಜೊತೆಗೆ, ಅಸ್ತಿತ್ವದಲ್ಲಿರುವ 100 ದಿನಗಳ ಖಾತ್ರಿ ಕೆಲಸದ ಅವಧಿಯನ್ನು 125 ದಿನಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಹೆಸರು ಬದಲಾವಣೆಯಲ್ಲಿ ಮೋದಿ ಸರ್ಕಾರ ನಿಸ್ಸೀಮ
ಈ ಬೆಳವಣಿಗೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ಮೋದಿ ಸರ್ಕಾರವು ಯೋಜನೆಗಳು ಮತ್ತು ಕಾನೂನುಗಳ ಹೆಸರನ್ನು ಬದಲಾಯಿಸುವುದರಲ್ಲಿ "ಮಾಸ್ಟರ್" (ನಿಸ್ಸೀಮ) ಎಂದು ವ್ಯಂಗ್ಯವಾಡಿದ್ದಾರೆ.
"ಅವರು 'ನಿರ್ಮಲ್ ಭಾರತ್ ಅಭಿಯಾನ'ವನ್ನು 'ಸ್ವಚ್ಛ ಭಾರತ್ ಅಭಿಯಾನ' ಎಂದು ಬದಲಾಯಿಸಿದರು. ಗ್ರಾಮೀಣ ಎಲ್‌ಪಿಜಿ ವಿತರಣಾ ಕಾರ್ಯಕ್ರಮಕ್ಕೆ 'ಉಜ್ವಲ' ಎಂದು ಮರುನಾಮಕರಣ ಮಾಡಿದರು. ಇದೀಗ ಮಹಾತ್ಮ ಗಾಂಧಿಯವರ ಹೆಸರಿಗೇ ಕೈಹಾಕಿದ್ದಾರೆ. ಯೋಜನೆಗಳ ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಮಾಡುವುದರಲ್ಲಿ ಇವರು ಎತ್ತಿದ ಕೈ," ಎಂದು ಜೈರಾಮ್ ರಮೇಶ್ ಪಿಟಿಐಗೆ ತಿಳಿಸಿದ್ದಾರೆ. "ಮಹಾತ್ಮ ಗಾಂಧಿ ಎಂಬ ಹೆಸರಿನಲ್ಲಿ ತಪ್ಪೇನಿದೆ? ಅದನ್ನು ಬದಲಾಯಿಸುವ ಅಗತ್ಯವೇನಿತ್ತು?" ಎಂದು ಅವರು ಪ್ರಶ್ನಿಸಿದ್ದಾರೆ.
ಯೋಜನೆಯನ್ನು ಕೊಲ್ಲುವ ಹುನ್ನಾರ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸಾಮಾಜಿಕ ಜಾಲತಾಣ 'X' ನಲ್ಲಿ ಪ್ರತಿಕ್ರಿಯಿಸಿ, "ಒಂದು ಕಾಲದಲ್ಲಿ ನರೇಗಾ ಯೋಜನೆಯನ್ನು 'ವೈಫಲ್ಯದ ಸ್ಮಾರಕ' ಎಂದು ಕರೆದಿದ್ದ ಪ್ರಧಾನಿಯವರು, ಈಗ ಅದೇ ಕ್ರಾಂತಿಕಾರಿ ಯೋಜನೆಗೆ ಹೊಸ ಹೆಸರಿಟ್ಟು ಅದರ ಶ್ರೇಯಸ್ಸು ಪಡೆಯಲು ಹವಣಿಸುತ್ತಿದ್ದಾರೆ. ಇದು ಭಾರತದ ಹಳ್ಳಿಗಳಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಅಳಿಸಿಹಾಕುವ ಪ್ರಯತ್ನವಲ್ಲದೆ ಮತ್ತೇನಲ್ಲ," ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ವರ್ಷದಿಂದ ವರ್ಷಕ್ಕೆ ನರೇಗಾ ಯೋಜನೆಗೆ ಅನುದಾನವನ್ನು ಕಡಿತಗೊಳಿಸುತ್ತಿದೆ ಮತ್ತು ಕಾರ್ಮಿಕರ ವೇತನ ಪಾವತಿಯಲ್ಲಿ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. "ಯೋಜನೆಯನ್ನು ವ್ಯವಸ್ಥಿತವಾಗಿ ಸಾಯಿಸಲು ತಂತ್ರ ರೂಪಿಸಿರುವ ಸರ್ಕಾರ, ಕೇವಲ ಮೇಲ್ನೋಟಕ್ಕೆ ಕಾಳಜಿ ಇರುವಂತೆ ತೋರಿಸಿಕೊಳ್ಳಲು ಈ ಹೆಸರು ಬದಲಾವಣೆಯ ನಾಟಕವಾಡುತ್ತಿದೆ," ಎಂದು ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಮೋದಿ ಜೀ, ನೀವು ಏನೇ ಹೆಸರಿಟ್ಟರೂ, ಈ ಪರಿವರ್ತನಾಕಾರಿ ಯೋಜನೆಯನ್ನು ಭಾರತದ ಪ್ರತಿ ಹಳ್ಳಿಗೆ ತಲುಪಿಸಿದ್ದು ಡಾ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರು ಎಂಬುದು ಜನರಿಗೆ ತಿಳಿದಿದೆ," ಎಂದು ಅವರು ಹೇಳಿದ್ದಾರೆ.

