Election Commission | ಚುನಾವಣಾ ನಿಯಮ ಬದಲಾವಣೆ: ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಕಾಂಗ್ರೆಸ್‌
x
Election Commission

Election Commission | ಚುನಾವಣಾ ನಿಯಮ ಬದಲಾವಣೆ: ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಕಾಂಗ್ರೆಸ್‌

Election Commission: ಈ ಕ್ರಮವನ್ನು ಕಾನೂನಾತ್ಮಕವಾಗಿ ಪ್ರಶ್ನಿಸಲೇಬೇಕು. ಚುನಾವಣಾ ಆಯೋಗವು ಪಾರದರ್ಶಕತೆಗೆ ಏಕೆ ಹೆದರುತ್ತಿದೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.


ಕೇಂದ್ರ ಸರ್ಕಾರ ಚುನಾವಣಾ ಪ್ರಕ್ರಿಯೆಯ ನಡಾವಳಿಗಳಿಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ರಿಟ್‌ ಅರ್ಜಿ ಸಲ್ಲಿಸಿದೆ. 1961ರ ಚುನಾವಣಾ ನೀತಿ ಸಂಹಿತೆಯ ತಿದ್ದುಪಡಿ ತರುವ ಮೂಲಕ ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ಧಕ್ಕೆ ತರಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕೆಲವು ಎಲೆಕ್ಟ್ರಾನಿಕ್ ದಾಖಲೆಗಳು ಮತ್ತು ವೀಡಿಯೊ ರೆಕಾರ್ಡಿಂಗ್‌ಗಳನ್ನು ಸಾರ್ವಜನಿಕರ ಪರಿಶೀಲನೆಗೆ ನೀಡದಂತೆ ಹೊಸ ತಿದ್ದುಪಡಿ ತರಲಾಗಿದೆ. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದಾರೆ.

'1961ರ ಚುನಾವಣಾ ನೀತಿ ಸಂಹಿತೆಗೆ ಇತ್ತೀಚೆಗೆ ತಂದಿರುವ ತಿದ್ದುಪಡಿಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಹೊಂದಿರುವ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು ಏಕಪಕ್ಷೀಯವಾಗಿ ಮತ್ತು ಸಾರ್ವಜನಿಕ ಚರ್ಚೆ ನಡೆಸದೇ ತಿದ್ದು ಮಾಡಲು ಶಿಫಾರಸು ಮಾಡಿದೆ. ಈ ತಿದ್ದುಪಡಿಯು ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕವಾಗಿ ಮಾಡಲು ಸಾರ್ವಜನಿಕರು ಭಾಗಿಯಾಗುವುದನ್ನು ತಪ್ಪಿಸುತ್ತದೆ. ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಧಕ್ಕೆ ಬರುತ್ತಿದೆ. ಸುಪ್ರೀಂ ಕೋರ್ಟ್ ಅದರ ಪುನರ್‌ಸ್ಥಾಪನೆಗೆ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ ಎಂದು ರಮೇಶ್ ಎಕ್ಸ್‌ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುವ ಚುನಾವಣಾ ಆಯೋಗಕ್ಕೆ, ಇಂತಹ ಅಗತ್ಯ ಕಾನೂನನ್ನು ಏಕಪಕ್ಷೀಯವಾಗಿ, "ನಾಚಿಕೆಗೇಡಿನ ರೀತಿಯಲ್ಲಿ" ತಿದ್ದುಪಡಿ ಮಾಡಲು ಬಿಡುವುದಿಲ್ಲ ಎಂದು ಪಕ್ಷದ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.

ಚುನಾವಣಾ ಆಯೋಗದ ಶಿಫಾರಸಿನ ಆಧಾರದ ಮೇಲೆ ಕೇಂದ್ರ ಕಾನೂನು ಸಚಿವಾಲಯವು ಡಿಸೆಂಬರ್ 20ರಂದು ಚುನಾವಣಾ ನಡಾವಳಿಗಳ ನಿಯಮ 1961ರ ನಿಯಮ 93 (2) (ಎ) ಅನ್ನು ತಿದ್ದುಪಡಿ ಮಾಡಿದೆ. ಇದುವರೆಗೆ, ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರುವ "ಕಾಗದಗಳು" ಅಥವಾ ʼʼದಾಖಲೆಗಳನ್ನುʼʼ ನಿರ್ಬಂಧಿಸಲಾಗಿದೆ.

ಚುನಾವಣಾ ಆಯೋಗದ ನಿಯಮ ಏನು ಹೇಳುತ್ತದೆ?

ಮತಗಟ್ಟೆಯೊಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಅದರ ದುರುಪಯೋಗವಾಗಬಹುದು. ಮತದಾರರ ಗೌಪ್ಯತೆಗೆ ಧಕ್ಕೆ ತರಬಹುದು ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಇದು ಸಂಪೂರ್ಣ ರದ್ದು ಅಲ್ಲ. ಚುನಾವಣಾ ಪ್ರಕ್ರಿಯೆಯ ತುಣುಕುಗಳು ಸೇರಿದಂತೆ ಎಲ್ಲಾ ವಸ್ತುಗಳು ಅಭ್ಯರ್ಥಿಗಳಿಗೆ ಲಭ್ಯವಿದೆ. ಸಾರ್ವಜನಿಕರು ಅಂತಹ ಎಲೆಕ್ಟ್ರಾನಿಕ್ ದಾಖಲೆಗಳನ್ನು ಪಡೆಯಲು ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ತಿದ್ದುಪಡಿ ಬಗ್ಗೆ ಆಯೋಗ ಹೇಳಿದೆ .

ಈ ಕ್ರಮವನ್ನು ಕಾನೂನಾತ್ಮಕವಾಗಿ ಪ್ರಶ್ನಿಸಲೇಬೇಕು. ಚುನಾವಣಾ ಆಯೋಗವು ಪಾರದರ್ಶಕತೆಗೆ ಏಕೆ ಹೆದರುತ್ತಿದೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. "ಇದು ಭಾರತದ ಚುನಾವಣಾ ವ್ಯವಸ್ಥೆಯ ಸಮಗ್ರತೆ ನಾಶಪಡಿಸುವ ವ್ಯವಸ್ಥಿತ ಪಿತೂರಿಯ ಭಾಗ" ಎಂದು ಕಾಂಗ್ರೆಸ್‌ ಹೇಳಿದರೆ. ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಎಡ ಪಕ್ಷಗಳು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸದೆ "ಏಕಪಕ್ಷೀಯ" ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಚುನಾವಣಾ ಆಯೋಗವು "ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ" ಎಂದು ಆರೋಪಿಸಿವೆ.

ಡಿಸೆಂಬರ್ 9 ರಂದು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2024 ರ ಹರಿಯಾಣ ವಿಧಾನಸಭಾ ಚುನಾವಣೆಯ ವೀಡಿಯೊಗ್ರಫಿ ಮತ್ತು ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ದಾಖಲೆಗಳನ್ನು ಒದಗಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿದ್ದನ್ನುಇಲ್ಲಿ ಸ್ಮರಿಸಬಹುದು. ವಕೀಲ ಮೆಹಮೂದ್‌ ಪರ್ಚಾ ಈ ಕುರಿತು ಅರ್ಜಿ ಸಲ್ಲಿಸಿದ್ದರು.

Read More
Next Story