ಸೆಬಿ ಅಧ್ಯಕ್ಷೆಯಿಂದ ಚೀನಾದ ಕಂಪನಿಗಳಲ್ಲಿ ಹೂಡಿಕೆ: ಕಾಂಗ್ರೆಸ್‌
x

ಸೆಬಿ ಅಧ್ಯಕ್ಷೆಯಿಂದ ಚೀನಾದ ಕಂಪನಿಗಳಲ್ಲಿ ಹೂಡಿಕೆ: ಕಾಂಗ್ರೆಸ್‌

ʻದೇಶ ಮತ್ತು ಚೀನಾದ ಸಂಬಂಧದಲ್ಲಿ ಬಿಕ್ಕಟ್ಟು ಇದ್ದಾಗ ಸೆಬಿ ಅಧ್ಯಕ್ಷೆ ಚೀನಾದ ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬುದು ಪ್ರಧಾನಿ ಅವರಿಗೆ ತಿಳಿದಿತ್ತೇ?ʼ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರು ಚೀನಾದ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದೆ.

ʻದೇಶ ಚೀನಾ ಸಂಬಂಧ ಬಿಕ್ಕಟ್ಟು ಎದುರಿಸುತ್ತಿದ್ದಾಗ ಸೆಬಿ ಅಧ್ಯಕ್ಷೆ ಚೀನಾದ ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬುದು ಪ್ರಧಾನಿ ಅವರಿಗೆ ತಿಳಿದಿತ್ತೇ?ʼ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಸೆಬಿ ಸದಸ್ಯೆ-ಅಧ್ಯಕ್ಷರಾಗಿ 2017 ಮತ್ತು 2023 ರ ನಡುವೆ 36.9 ಕೋಟಿ ಮೌಲ್ಯದ ಪಟ್ಟಿಮಾಡಿದ ಸೆಕ್ಯುರಿಟಿಗಳಲ್ಲಿ ವಹಿವಾಟು ನಡೆಸಿದ್ದಾರೆ. ಮಾಧಬಿ ಬುಚ್ ದೇಶದ ಹೊರಗೆ ಹೂಡಿಕೆ ಮಾಡಿದ್ದಾರೆ ಎನ್ನುವುದು ಪ್ರಧಾನಿಗೆ ತಿಳಿದಿದೆಯೇ? ಹೌದು ಎಂದಾದರೆ, ಈ ಹೂಡಿಕೆಯ ದಿನಾಂಕ ಮತ್ತು ಬಹಿರಂಗಪಡಿಸುವಿಕೆಯ ದಿನಾಂಕ ಯಾವುದು?ʼ ಎಂದು ರಮೇಶ್ ಪ್ರಶ್ನಿಸಿದರು.

ಖೇರಾ ಆರೋಪ ಪಟ್ಟಿ:ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಕೂಡ ಇದೇ ಪ್ರಶ್ನೆಗಳನ್ನು ಎತ್ತಿದ್ದಾರೆ.

ʻ36.9 ಕೋಟಿ ರೂ. ಹೂಡಿಕೆಯು ಸೆಬಿಯ ಕೋಡ್‌ನ ಸೆಕ್ಷನ್ 6 ಅನ್ನು ಉಲ್ಲಂಘಿಸುತ್ತದೆʼ ಎಂದು ಹೇಳಿದರು. ʻ2017 ಮತ್ತು 2021 ರ ನಡುವೆ ಮಾಧಬಿ ಬುಚ್ ವಿದೇಶಿ ಆಸ್ತಿ ಹೊಂದಿದ್ದರು ಎಂಬ ಮಾಹಿತಿ ಇದೆ. ಅವರು ಮೊದಲ ಬಾರಿಗೆ ವಿದೇಶಿ ಆಸ್ತಿಯನ್ನು ಯಾವಾಗ ಘೋಷಿಸಿದರು ಮತ್ತು ಸರ್ಕಾರದ ಯಾವ ಏಜೆನ್ಸಿಗೆ ಘೋಷಿಸಿದರು? ಅಗೋರಾ ಪಾರ್ಟ್‌ನರ್ಸ್‌ ಪಿಟಿಇ (ಸಿಂಗಪುರ) ದಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂಬುದು ನಿಜವೇ?,ʼ ಎಂದು ಕೇಳಿದರು.

2021 ಮತ್ತು 2024 ರ ನಡುವೆ ಅಮೆರಿಕದಲ್ಲಿ ವ್ಯಾನ್‌ಗಾರ್ಡ್ ಟೋಟಲ್ ಸ್ಟಾಕ್ ಮಾರ್ಕೆಟ್ ಇಟಿಎಫ್ (ವಿಟಿಐ), ಎಆರ್‌ಕೆ ಇನ್ನೋವೇಶನ್ ಇಟಿಎಫ್ (ಎಆರ್‌ಕೆಕೆ), ಗ್ಲೋಬಲ್ ಎಕ್ಸ್ ಎಂಎಸ್‌ಸಿಐ ಚೀನಾ ಕನ್ಸ್ಯೂಮರ್ (ಸಿಎಚ್‌ಐಕ್ಯೂ) ಮತ್ತು ಇನ್ವೆಸ್ಕೊ ಚೀನಾ ಟೆಕ್ನಾಲಜಿ ಇಟಿಎಫ್‌ನಲ್ಲಿ ಹೂಡಿಕೆ ಮಾಡಿದ್ದಾರೆ.ಸೆಬಿ ಅಧ್ಯಕ್ಷೆ ಚೀನೀ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವುದು ಕಳವಳಕಾರಿ,ʼ ಎಂದು ಖೇರಾ ಹೇಳಿದರು.

ʻಸೆಬಿ ಅಧ್ಯಕ್ಷೆ ಐಸಿಐಸಿಐ ಬ್ಯಾಂಕ್ ಮತ್ತು ಐಸಿಐಸಿಐ ಪ್ರುಡೆನ್ಶಿಯಲ್‌ನಿಂದ ಸಂಬಳ, ಇಎಸ್‌ಒಪಿಎಸ್, ಟಿಡಿಎಸ್ ರೂಪದಲ್ಲಿ ಇಎಸ್‌ಒಪಿಎಸ್, ಸೆಬಿಯಿಂದ ಸಂಬಳದ ಮೂಲಕ 16.8 ಕೋಟಿ ರೂ. ಪಡೆದಿದ್ದಾರೆ. ಈ ಅವಧಿಯಲ್ಲಿ ಐಸಿಐಸಿಐ ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧದ ದೂರುಗಳನ್ನು ಸೆಬಿ ವಿಚಾರಿಸುತ್ತಿದೆ,ʼ ಎಂದರು.

ʻಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯು ಧವಲ್ ಬುಚ್‌ಗೆ ವೈಯಕ್ತಿಕವಾಗಿ ಮತ್ತು ಅವರ ಜಂಟಿ ಸಲಹಾ ಸಂಸ್ಥೆಯಾದ ಅಗೋರಾ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್‌ಗೆ ದೊಡ್ಡ ಮೊತ್ತವನ್ನು ಪಾವತಿಸಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಇದರಲ್ಲಿ ಮಾಧಬಿ ಬುಚ್ ಶೇ.99 ಪಾಲು ಹೊಂದಿದ್ದಾರೆ. ಹೌದು ಎಂದಾದರೆ, ಸಾರ್ವಜನಿಕ ನಿಧಿಯನ್ನು ಅಗೋರಾ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್‌ಗೆ ವರ್ಗಾಯಿಸುವ ಮೊದಲು ಕೆವೈಸಿ ಮತ್ತಿತರ ವಿವರ ನೀಡುವಲ್ಲಿ ಮಹೀಂದ್ರಾ ವಿಫಲವಾಗಿದೆಯೇ?ʼ ಎಂದು ಕೇಳಿದರು.

Read More
Next Story