ಸೆಬಿ ಅಧ್ಯಕ್ಷೆ ರಾಜೀನಾಮೆ, ಜೆಪಿಸಿ ತನಿಖೆಗೆ ಕಾಂಗ್ರೆಸ್ ಒತ್ತಾಯ
x

ಸೆಬಿ ಅಧ್ಯಕ್ಷೆ ರಾಜೀನಾಮೆ, ಜೆಪಿಸಿ ತನಿಖೆಗೆ ಕಾಂಗ್ರೆಸ್ ಒತ್ತಾಯ


ಅದಾನಿ ತನಿಖೆಯನ್ನು ಸಿಬಿಐ ಅಥವಾ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಬೇಕು. ಈ ವಿಷಯದಲ್ಲಿ ಸೆಬಿ ರಾಜಿ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಸೋಮವಾರ (ಆಗಸ್ಟ್ 12) ಒತ್ತಾಯಿಸಿದೆ.

ʻಸ್ವಯಂ ಅಭಿಷಿಕ್ತ ಅಜೈವಿಕ ಪ್ರಧಾನಮಂತ್ರಿ ಮತ್ತು ಪರಿಪೂರ್ಣ ಜೈವಿಕ ಉದ್ಯಮಿʼಯನ್ನು ಒಳಗೊಂಡ ʻಮೊದಾನಿ ಮೆಗಾ ಹಗರಣʼದ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಯನ್ನು ರಚಿಸಬೇಕು. ಹಿಂಡೆನ್‌ಬರ್ಗ್ ರಿಸರ್ಚ್ ಆರೋಪಗಳ ಹಿನ್ನೆಲೆಯಲ್ಲಿ ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಅವರು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಒತ್ತಾಯಿಸಿದರು.

ಸೆಬಿ ಹೇಳಿಕೆಗೆ ಪ್ರತಿಕ್ರಿಯೆ: ʻಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲಾಗಿದೆ. ಅದಾನಿ ವಿಷಯ ಬಂದಾಗ ಬುಚ್ ಅವರು ಹೊರಗೆ ಉಳಿಯುತ್ತಿದ್ದರು,ʼ ಎಂದು ಸೆಬಿ ಸಮರ್ಥಿಸಿಕೊಂಡ ಒಂದು ದಿನದ ನಂತರ ಕಾಂಗ್ರೆಸ್ ಹೇಳಿಕೆ ಬಂದಿದೆ.

ʻ100 ಸಮನ್ಸ್, 1,100 ಪತ್ರಗಳು-ಇಮೇಲ್‌ ಕಳಿಸಿದೆ ಮತ್ತು 12,000 ಪುಟಗಳನ್ನು ಒಳಗೊಂಡಿರುವ 300 ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಸೆಬಿ ಹೇಳಿಕೊಂಡಿತ್ತು. ಅದಾನಿ ಗುಂಪಿನ ಹಣಕಾಸು ವಹಿವಾಟಿನ ತನಿಖೆಯಲ್ಲಿ ಸೆಬಿ(ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ತೀವ್ರ ಕ್ರಿಯಾಶೀಲತೆಯ ಚಿತ್ರಣ ನೀಡಲು ಪ್ರಯತ್ನಿಸಿದೆ ಎಂದು ರಮೇಶ್ ಹೇಳಿದ್ದಾರೆ.

ರಮೇಶ್ ಅವರ ಪತ್ರಕ್ಕೆ ಉತ್ತರವಿಲ್ಲ: ದೇಶದ ಹಣಕಾಸು ಮಾರುಕಟ್ಟೆಗಳ ನ್ಯಾಯೋಚಿತತೆಯಲ್ಲಿ ನಂಬಿಕೆಯಿರುವ ಕೋಟ್ಯಂತರ ಭಾರತೀಯರ ಸಂರಕ್ಷಕನಂತೆ ಸೆಬಿ ಕಾರ್ಯ ನಿರ್ವಹಿಸಬೇಕು ಎಂದು ಒತ್ತಾಯಿಸಿ ನಾನು ಸೆಬಿ ಅಧ್ಯಕ್ಷರಿಗೆ ಫೆಬ್ರವರಿ 14, 2023 ರಂದು ಪತ್ರ ಬರೆದಿದ್ದೆ. ಆದರೆ, ಇವರೆಗೆ ಉತ್ತರ ಬಂದಿಲ್ಲ ಎಂದು ಹೇಳಿದರು.

ʻಮಾರ್ಚ್ 3, 2023 ರಂದು ಅದಾನಿ ಗ್ರೂಪ್ ವಿರುದ್ಧದ ಸ್ಟಾಕ್ ಕೈಚಳಕ ಮತ್ತು ಲೆಕ್ಕಪತ್ರ ವಂಚನೆ ಆರೋಪ ಕುರಿತು ಎರಡು ತಿಂಗಳೊಳಗೆ ತನಿಖೆ ಮುಕ್ತಾಯಗೊಳಿಸುವಂತೆ ಸುಪ್ರೀಂ ಕೋರ್ಟ್, ಸೆಬಿಗೆ ನಿರ್ದೇಶನ ನೀಡಿತ್ತು. 18 ತಿಂಗಳ ನಂತರ, ಸಾರ್ವಜನಿಕ ಷೇರುದಾರರಿಗೆ ಸಂಬಂಧಿಸಿದ ನಿಯಮ 19 ಎ ಅನ್ನು ಅದಾನಿ ಉಲ್ಲಂಘಿಸಿದ್ದಾರೆಯೇ ಎಂಬ ನಿರ್ಣಾಯಕ ತನಿಖೆ ಅಪೂರ್ಣವಾಗಿ ಉಳಿದಿದೆ ಎಂದು ಸೆಬಿ ಬಹಿರಂಗಪಡಿಸಿದೆ,ʼ ಎಂದು ಅವರು ಹೇಳಿದರು.

ʻಸೆಬಿ 24 ತನಿಖೆಗಳಲ್ಲಿ ಎರಡನ್ನು ಅಂತ್ಯಗೊಳಿಸಲು ಅಸಮರ್ಥವಾಗಿದ್ದು, ತನಿಖೆಯ ಫಲಿತಾಂಶವನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ವಿಳಂಬಗೊಳಿಸಿತು.ಇದು ಪ್ರಧಾನಿ ಅವರಿಗೆ ತಮ್ಮ ಆಪ್ತ ಸ್ನೇಹಿತನ ಅಕ್ರಮ ಚಟುವಟಿಕೆಗಳನ್ನು ಸುಗಮಗೊಳಿಸುವಲ್ಲಿ ಅವಕಾಶ ಮಾಡಿಕೊಟ್ಟಿತು,ʼ ಎಂದು ರಮೇಶ್ ಹೇಳಿದರು.

ಅದಾನಿ ಸಂಸ್ಥೆಗಳಿಗೆ ಸೆಬಿ ನೋಟಿಸ್:‌ ಅದಾನಿ ಗುಂಪು ಕ್ಲೀನ್ ಚಿಟ್ ಪಡೆದಿದ್ದರೂ, ಈ ಆರೋಪಗಳಿಗೆ ಸಂಬಂಧಿಸಿದಂತೆ ಸೆಬಿ ಹಲವಾರು ಅದಾನಿ ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಆದರೆ, ಪ್ರಧಾನಿಯವರ ತನಿಖಾ ಸಂಸ್ಥೆಗಳು ವಿರೋಧ ಪಕ್ಷದ ನಾಯಕರಿಗೆ ನೀಡುವ ತ್ವರಿತ 'ನ್ಯಾಯ'ಕ್ಕೆ ಹೋಲಿಸಿದರೆ, ಈ ತನಿಖೆಗಳ ನಿಧಾನಗತಿಯನ್ನು ವಿವರಿಸಲು ಆಗುವುದಿಲ್ಲ. ಇತ್ತೀಚಿನ ಬಹಿರಂಗಪಡಿಸುವಿಕೆಗಳು ಸೆಬಿಯ ಸಮಗ್ರತೆ ಮತ್ತು ನಡವಳಿಕೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ,ʼ ಎಂದು ಹೇಳಿದರು.

ಸೆಬಿ ಅಧ್ಯಕ್ಷೆ ಮತ್ತು ಅವರ ಪತಿ, ಬರ್ಮುಡಾ ಮತ್ತು ಮಾರಿಷಸ್ ಮೂಲದ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವುದು ಆಘಾತಕಾರಿ. ಅಲ್ಲಿ ವಿನೋದ್ ಅದಾನಿ ಮತ್ತು ಅವರ ನಿಕಟ ಸಹವರ್ತಿ ಚಾಂಗ್ ಚುಂಗ್ ಲಿಂಗ್ ಮತ್ತು ನಾಸರ್ ಅಲಿ ಶಬಾನ್ ಅಹ್ಲಿ ಕೂಡ ಹೂಡಿಕೆ ಮಾಡಿದ್ದಾರೆ. ಈ ನಿಧಿಗಳನ್ನು ಬುಚ್‌ ಕುಟುಂಬದ ಆತ್ಮೀಯ ಸ್ನೇಹಿತ ಮತ್ತು ಅದಾನಿ ಎಂಟರ್‌ಪ್ರೈಸಸ್‌ನ ಸ್ವತಂತ್ರ ನಿರ್ದೇಶಕರಾದ ಅನಿಲ್ ಅಹುಜಾ ಅವರು ಮೇ 31, 2017 ರವರೆಗೆ ನಿರ್ವಹಿಸುತ್ತಿದ್ದರು,ʼ ಎಂದು ಹೇಳಿದರು.

ಹಿತಾಸಕ್ತಿ ಸಂಘರ್ಷ?: 'ಅಮೃತ ಕಾಲ'ದಲ್ಲಿ ಯಾವುದೇ ಸಂಸ್ಥೆಯೂ ಪವಿತ್ರವಾಗಿ ಉಳಿದಿಲ್ಲ. ಸುಪ್ರೀಂ ಕೋರ್ಟ್ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ ಅಥವಾ ಎಸ್‌ಐಟಿಗೆ ವರ್ಗಾಯಿಸಬೇಕು. ಸೆಬಿಯ ಸಮಗ್ರತೆಯನ್ನು ಪುನಃಸ್ಥಾಪಿಸಲು ಸೆಬಿ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ರಮೇಶ್ ಹೇಳಿದರು.

ʻನಿರ್ಣಾಯಕ ಮೂಲಸೌಕರ್ಯ ಕ್ಷೇತ್ರದಲ್ಲಿ ಅದಾನಿ ಗುಂಪಿಗೆ ಏಕಸ್ವಾಮ್ಯವನ್ನು ನೀಡಲಾಗುತ್ತಿದೆ. ನೆರೆಯ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಅದಾನಿ ಆಸ್ತಿಗಳನ್ನು ಭದ್ರಪಡಿಸಿಕೊಳ್ಳಲು ಭಾರತೀಯ ವಿದೇಶಾಂಗ ಇಲಾಖೆಯನ್ನು ಬಳಸಿಕೊಳ್ಳಲಾಗಿದೆʼ ಎಂದು ದೂರಿದರು.





Read More
Next Story