
ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ದೂರು ದಾಖಲಿಸಿದ ಕಾಂಗ್ರೆಸ್
ಅನುರಾಗ್ ಠಾಕೂರ್ ಮಾಡಿದ ಭಾಷಣವನ್ನು 'ಕೇಳಲೇಬೇಕು' ಎಂದು ಪ್ರಧಾನಿ ಎಕ್ಸ್ ನಲ್ಲಿ ಬಣ್ಣಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಚರಣ್‌ಜಿತ್ ಸಿಂಗ್ ಚನ್ನಿ ದೂರು ನೀಡಿದ್ದಾರೆ.
ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಅವರಿಂದ ಜಾತಿ ಟೀಕೆಯನ್ನು ಪ್ರಧಾನಿ ಬೆಂಬಲಿಸಿದರು ಎಂದು ಅವರ ವಿರುದ್ಧ ಕಾಂಗ್ರೆಸ್, ಲೋಕಸಭೆ ಸ್ಪೀಕರ್‌ಗೆ ಹಕ್ಕುಚ್ಯುತಿ ದೂರು ಸಲ್ಲಿಸಿದೆ.
ಎಕ್ಸ್ ನಲ್ಲಿ ಠಾಕೂರ್ ಮಾಡಿದ ಭಾಷಣವನ್ನು 'ಕೇಳಲೇಬೇಕು' ಎಂದು ಪ್ರಧಾನಿ ಬಣ್ಣಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಚರಣ್‌ಜಿತ್ ಸಿಂಗ್ ಚನ್ನಿ ದೂರು ದಾಖಲಿಸಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿ ಸಂಸದ ಠಾಕೂರ್ ಅವರು ರಾಹುಲ್ ಅವರ ಜಾತಿ ಬಗ್ಗೆ ಗೇಲಿ ಮಾಡಿದ್ದರು. ಪ್ರಧಾನಿ ಮೋದಿ ಅವರು ನಿನ್ನೆ ಸಂಜೆ (ಜುಲೈ 30) ಎಕ್ಸ್ ನಲ್ಲಿ ಠಾಕೂರ್ ಅವರ ಭಾಷಣದ ವಿಡಿಯೋ ಹಂಚಿಕೊಂಡಿದ್ದಾರೆ.
ʻನನ್ನ ಯುವ ಸಹೋದ್ಯೋಗಿ @ianuragthakur ಅವರ ಈ ಭಾಷಣವನ್ನು ಕೇಳಲೇಬೇಕು. ಸತ್ಯ ಮತ್ತು ಹಾಸ್ಯದ ಪರಿಪೂರ್ಣ ಮಿಶ್ರಣವಾದ ಈ ಭಾಷಣವು ಇಂಡಿಯ ಒಕ್ಕೂಟದ ಕೊಳಕು ರಾಜಕೀಯವನ್ನು ಬಹಿರಂಗಪಡಿಸುತ್ತದೆ,ʼ ಎಂದು ಹೇಳಿದರು.
ಸಂಸತ್ತಿನ ವಿಶೇಷಾಧಿಕಾರದ ಉಲ್ಲಂಘನೆ: ಠಾಕೂರ್ ಅವರ ಭಾಷಣದ ವಿಡಿಯೋ ಹಂಚಿಕೊಂಡಿರುವ ಪ್ರಧಾನಿ, ಸಂಸದೀಯ ಸವಲತ್ತುಗಳ ಗಂಭೀರ ಉಲ್ಲಂಘನೆಯನ್ನು ಪ್ರೋತ್ಸಾಹಿಸಿದ್ದಾರೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ಇದು ʼಅತ್ಯಂತ ನಿಂದನೀಯ ಮತ್ತು ಅಸಾಂವಿಧಾನಿಕ ಹಲ್ಲೆʼ ಎಂದು ಪಕ್ಷ ಹೇಳಿದೆ.
ಜುಲೈ 30 ರಂದು ಲೋಕಸಭೆಯ ಅಧಿವೇಶನದ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಮತ್ತು ಐದು ಬಾರಿ ಸಂಸದ ಅನುರಾಗ್ ಠಾಕೂರ್ ಅವರು ಜಾತಿ ಆಧಾರಿತ ಜನಗಣತಿ ಬೇಡಿಕೆ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ತೀವ್ರ ಟೀಕೆ ಮಾಡಿದ್ದರು- ʻಜಿಸ್ಕಿ ಜಾತ್ ಕಾ ಪತಾ ನಹೀಂ, ವೋ ಗನಾನಾ ಕಿ ಬಾತ್ ಕರ್ತಾ ಹೈ (ಜಾತಿ ಗೊತ್ತಿಲ್ಲದ ವ್ಯಕ್ತಿ ಜನಗಣತಿಯ ಬಗ್ಗೆ ಮಾತನಾಡುತ್ತಾರೆ)ʼ ಎಂದು ಲೇವಡಿ ಮಾಡಿದ್ದರು.
ಪ್ರತಿಪಕ್ಷಗಳ ಸದಸ್ಯರು ಸದನದ ಮುಂಭಾಗಕ್ಕೆ ನುಗ್ಗಿ ಪ್ರತಿಭಟನೆಗೆ ಮುಂದಾದರು. ಎಸ್‌ಪಿಯ ಅಖಿಲೇಶ್ ಯಾದವ್ ಕೂಡ ʻಸದನದಲ್ಲಿ ವ್ಯಕ್ತಿಯ ಜಾತಿ ಬಗ್ಗೆ ಹೇಗೆ ಕೇಳುತ್ತಾರೆ? ಎಂದು ಪ್ರಶ್ನಿಸಿದರು.
ಠಾಕೂರ್‌ಗೆ ಪ್ರತಿಕ್ರಿಯಿಸಿದ ರಾಹುಲ್, ʻನೀವು ನನ್ನನ್ನು ಎಷ್ಟು ಬೇಕಾದರೂ ಅವಮಾನಿಸಬಹುದು. ಪ್ರತಿದಿನವೂ ಅದನ್ನು ಮಾಡಿ.ಆದರೆ, ನಾವು (ಪ್ರತಿಪಕ್ಷಗಳು) ಇಲ್ಲಿ (ಸಂಸತ್ತಿನಲ್ಲಿ) ಜನಗಣತಿ ಮಸೂದೆಯನ್ನು ಅಂಗೀಕರಿಸುತ್ತೇವೆ ಎಂಬುದನ್ನು ಮರೆಯಬೇಡಿ,ʼ ಎಂದು ಹೇಳಿದ್ದರು.
ಸ್ಪೀಕರ್ ಸ್ಥಾನದಲ್ಲಿದ್ದ ಹಿರಿಯ ಕಾಂಗ್ರೆಸ್ ಸಂಸದ ಜಗದಾಂಬಿಕಾ ಪಾಲ್ ಅವರು ಟೀಕೆಗಳನ್ನು ತೆಗೆದುಹಾಕುವುದಾಗಿ ಕಾಂಗ್ರೆಸ್ ಸಂಸದರಿಗೆ ಭರವಸೆ ನೀಡಿದರು.
ಆದರೆ, ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋಗಳಿಂದ ಟೀಕೆಯನ್ನು ತೆಗೆಯಲಾಗಿದೆ. ಸಂಸದ್ ಟಿವಿ ಈ ಸಂದರ್ಭದಲ್ಲಿ ಎಡಿಟ್ ಮಾಡದ ಭಾಷಣವನ್ನು ಅಪ್‌ಲೋಡ್ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
ಪ್ರಧಾನಿ ಅವರು ಠಾಕೂರ್ ಅವರ ಭಾಷಣದ ಎಡಿಟ್ ಮಾಡದ ಆವೃತ್ತಿಯನ್ನು ಹಂಚಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ಆಕ್ಷೇಪಿಸಿದೆ. ಅದರಲ್ಲಿ ತೆಗೆದುಹಾಕಿದ ಟೀಕೆಗಳು ಸೇರಿವೆ. ಜೊತೆಗೆ, ಪ್ರಧಾನಿ ವಿಡಿಯೋ ಎಲ್ಲರೂ ಕೇಳಲು ಒತ್ತಾಯಿಸಿದರು ಎಂದು ಹೇಳಿದೆ.
ʻದೇಶದ ಸಂಸದೀಯ ಇತಿಹಾಸದಲ್ಲಿ ಅತ್ಯಂತ ನಾಚಿಕೆಗೇಡಿನ ವಿಷಯ. ಇದು ಬಿಜೆಪಿ-ಆರ್‌ಎಸ್‌ಎಸ್ ಮತ್ತು ಮೋದಿ ಅವರ ಆಳವಾಗಿ ಬೇರೂರಿರುವ ಜಾತೀಯತೆಯನ್ನು ಪ್ರತಿಬಿಂಬಿಸುತ್ತದೆ,ʼ ಎಂದು ರಮೇಶ್ ಆರೋಪಿಸಿದ್ದಾರೆ.
ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಸಂಬಿತ್ ಪಾತ್ರಾ, ʻನಿಮ್ಮ ಜಾತಿಯನ್ನು ಕೇಳುವುದು ಏಕೆ ಆಕ್ಷೇಪಾರ್ಹ? ರಾಹುಲ್ ಗಾಂಧಿ ಪತ್ರಕರ್ತರು, ನ್ಯಾಯಾಧೀಶರು, ಸೈನಿಕರ ಜಾತಿ ಕೇಳುತ್ತಾರೆ. ಆದರೆ, ಯಾರಾದರೂ ಅವರ ಜಾತಿ ಕೇಳಿದರೆ ಅವರಿಗೆ ನೋವಾಗುತ್ತದೆ,ʼ ಎಂದಿದ್ದಾರೆ.