ನೀಟ್ ಪರೀಕ್ಷೆ ಅಕ್ರಮ: ಸುಪ್ರೀಂ ಕೋರ್ಟ್‌  ಮೇಲ್ವಿಚಾರಣೆಯಲ್ಲಿ ತನಿಖೆಗೆ ಕಾಂಗ್ರೆಸ್ ಆಗ್ರಹ
x

ನೀಟ್ ಪರೀಕ್ಷೆ ಅಕ್ರಮ: ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಗೆ ಕಾಂಗ್ರೆಸ್ ಆಗ್ರಹ

ನೀಟ್ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಪೇಪರ್ ಸೋರಿಕೆ, ರಿಗ್ಗಿಂಗ್ ಮತ್ತು ಭ್ರಷ್ಟಾಚಾರ ಅವಿಭಾಜ್ಯ ಅಂಗವಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.


ʻವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್‌ನಲ್ಲಿನ ಅಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕುʼ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ʻಬಿಜೆಪಿ ಯುವಜನರನ್ನು ವಂಚಿಸಿ ಅವರ ಭವಿಷ್ಯದ ಜೊತೆ ಆಟವಾಡುತ್ತಿದೆ. ನೀಟ್ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಪೇಪರ್ ಸೋರಿಕೆ, ರಿಗ್ಗಿಂಗ್ ಮತ್ತು ಭ್ರಷ್ಟಾಚಾರ ಅವಿಭಾಜ್ಯ ಅಂಗವಾಗಿದೆ,ʼ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ʻಇದಕ್ಕೆ ಮೋದಿ ಸರಕಾರವೇ ನೇರ ಹೊಣೆ. ನೇಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅಕ್ರಮ, ಪೇಪರ್ ಸೋರಿಕೆ ಚಕ್ರವ್ಯೂಹಕ್ಕೆ ಸಿಲುಕುತ್ತಾರೆ. ಬಿಜೆಪಿ ದೇಶದ ಯುವಜನರಿಗೆ ಮೋಸ ಮಾಡಿದೆ,ʼ ಎಕ್ಸ್‌ ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ʻರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅಕ್ರಮ ನಡೆದಿಲ್ಲ ಎಂದಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳು ಮತ್ತು ಗ್ರೇಸ್‌ಮಾರ್ಕ್‌ಗಳು ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಕೆಗೆ ಕಾರಣʼ ಎಂದು ಹೇಳಿದರು.

ʻಲಕ್ಷಗಟ್ಟಲೆ ಅಭ್ಯರ್ಥಿಗಳನ್ನು ಒಳಗೊಂಡ ಹಗರಣ ಸ್ವೀಕಾರಾರ್ಹವಲ್ಲ ಮತ್ತು ಅಕ್ಷಮ್ಯ,ʼ ಎಂದು ಸಂವಹನ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ʻಇದು ಲಕ್ಷಾಂತರ ಯುವಜನರ ಭವಿಷ್ಯದ ಜೊತೆಗಿನ ಜೂಜಾಟ. ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು,ʼ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ʻಈ ವರ್ಷ ಪೇಪರ್ ಸೋರಿಕೆ ಸುದ್ದಿಯನ್ನು ಮುಚ್ಚಿಡಲಾಗಿದೆ. ಈಗ ವಿದ್ಯಾರ್ಥಿಗಳ ಅಂಕಗಳನ್ನು ಹೆಚ್ಚಿಸಲಾಗಿದೆ. ಈ ಬಾರಿ ದಾಖಲೆಯ 67 ಅಭ್ಯರ್ಥಿಗಳು ಅಗ್ರ ಶ್ರೇಯಾಂಕ ಗಳಿಸಿದ್ದು, ಇವರಲ್ಲಿ 6 ಮಂದಿ ಒಂದೇ ಪರೀಕ್ಷಾ ಕೇಂದ್ರದಲ್ಲಿ ಇದ್ದರು ಎಂದು ವಿದ್ಯಾರ್ಥಿಗಳು ಹೇಳುತ್ತಾರೆ,ʼ ಎಂದು ಹೇಳಿದರು. ʻಚುನಾವಣೆ ಫಲಿತಾಂಶಗಳ ಗದ್ದಲದ ನಡುವೆ ಜೂ.4 ರಂದು ಉದ್ದೇಶಪೂರ್ವಕವಾಗಿ ಈ ಫಲಿತಾಂಶವನ್ನು ಏಕೆ ಘೋಷಿಸಲಾಯಿತು? ಫಲಿತಾಂಶವನ್ನು ಜೂನ್ 14 ರಂದು ಪ್ರಕಟಿಸಬೇಕಿತ್ತುʼ ಎಂದು ಪ್ರಶ್ನಿಸಿದರು.

ʻ67 ಟಾಪರ್‌ಗಳು 720/720 ಅಂಕ ಹೇಗೆ ಪಡೆದರು? ಒಂದೇ ಕೇಂದ್ರದ ಎಂಟು ವಿದ್ಯಾರ್ಥಿಗಳು 720/720 ಅಂಕ ಹೇಗೆ ಪಡೆದರು? ಪ್ರತಿ ಪ್ರಶ್ನೆ ನಾಲ್ಕು ಅಂಕಗಳ ಮೌಲ್ಯದ್ದಾಗಿತ್ತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದ ನಂತರ ಬಿಡುಗಡೆಯಾದ ಫಲಿತಾಂಶದಲ್ಲಿ 67 ವಿದ್ಯಾರ್ಥಿಗಳಿಗೆ 720 ಅಂಕಗಳಿಗೆ 718-719 ಅಂಕಗಳು ಹೇಗೆ ಬಂದಿತು? ಫಲಿತಾಂಶಗಳ ಬಗ್ಗೆ ಕೋಲಾಹಲದ ನಂತರ ಎನ್‌ಟಿಎ ಸ್ಪಷ್ಟೀಕರಣ ನೀಡಿತು. ವಿದ್ಯಾರ್ಥಿಗಳು ಈ ವಿವರಣೆ ತೋರಿಕೆಯದು ಮತ್ತು ವಿಶ್ವಾಸಾರ್ಹವಲ್ಲ ಎಂದಿದ್ದಾರೆ,ʼ ಎಂದು ಹೇಳಿದರು.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ವಿದ್ಯಾರ್ಥಿಗಳ ಕಾನೂನುಬದ್ಧ ದೂರುಗಳನ್ನುತನಿಖೆ ಮೂಲಕ ಪರಿಹರಿಸಬೇಕು ಎಂದು ಹೇಳಿದರು.

ಸಂಸದ ರಾಹುಲ್‌ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ʻಮೊದಲು ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆಯಾಯಿತು. ಫಲಿತಾಂಶದಲ್ಲೂ ಹಗರಣ ನಡೆದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಲಕ್ಷಗಟ್ಟಲೆ ವಿದ್ಯಾರ್ಥಿಗಳ ಧ್ವನಿ ಯನ್ನು ಸರ್ಕಾರ ಏಕೆ ನಿರ್ಲಕ್ಷಿಸುತ್ತಿದೆ? ನೀಟ್ ಪರೀಕ್ಷೆಯ ಫಲಿತಾಂಶಗಳಲ್ಲಿನ ಅನ್ಯಾಯ ಕುರಿತು ವಿದ್ಯಾರ್ಥಿಗಳಿಗೆ ಉತ್ತರ ನೀಡಬೇಕು,ʼ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೆವಾಲಾ, ಕನ್ಹಯ್ಯ ಕುಮಾರ್‌ ʻಅಕ್ರಮಗಳು ಸುಮಾರು 24 ಲಕ್ಷ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ,ʼ ಎಂದು ಹೇಳಿದರು. ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್‌ಎಸ್‌ ಯುಐ)ದ ಉಸ್ತುವಾರಿ ಕುಮಾರ್, ಎನ್‌ಎಸ್‌ಯುಐ ಮುಖ್ಯಸ್ಥ ವರುಣ್ ಚೌಧರಿ, ʻದೇಶದಲ್ಲಿ ರಿಗ್ಗಿಂಗ್ ಮುಕ್ತ ಪರೀಕ್ಷೆ ಇಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ, ಭವಿಷ್ಯದಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಸಹ ಸರಿಯಾಗಿ ನಡೆಸಲು ಆಗುವುದಿಲ್ಲ,ʼ ಎಂದು ಹೇಳಿದ್ದಾರೆ.

Read More
Next Story