ಕನ್ಯಾಕುಮಾರಿಯಲ್ಲಿ ಪ್ರಧಾನಿ ಧ್ಯಾನ: ಚುನಾವಣೆ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್
ಪ್ರಧಾನಿ ಅವರು ಪ್ರಚಾರವನ್ನು ಮುಂದುವರಿಸಲು ಅಥವಾ ತನ್ನನ್ನು ಮುನ್ನೆಲೆಯಲ್ಲಿ ಇರಿಸಿಕೊಳ್ಳಲು ಮಾಡಿದ ತಂತ್ರವಾಗಿದೆ ಎಂದು ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.
ಪ್ರಧಾನಿ ಮೋದಿ ಅವರು ಮೇ 30 ರ ಮಧ್ಯಾಹ್ನ ಕನ್ಯಾಕುಮಾರಿಗೆ ಆಗಮಿಸಿ, ವಿವೇಕಾನಂದ ಸ್ಮಾರಕಕ್ಕೆ ತೆರಳುವ ನಿರೀಕ್ಷೆಯಿದೆ. ಆನಂತರ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕದಲ್ಲಿ ಮೋದಿ ಅವರು ಧ್ಯಾನ ಮಾಡಲಿದ್ದಾರೆ. ಅವರ ಧ್ಯಾನವು ಜೂನ್ 1 ರವರೆಗೆ ನಡೆಯಲಿದೆ; ಅದೇ ದಿನ ಅವರು ಸ್ಪರ್ಧಿಸಿರುವ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮತದಾನ ನಡೆಯಲಿದೆ.
ಅವರ ರಕ್ಷಣೆಗೆ ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಭದ್ರತಾ ಗುಂಪು ಸನ್ನದ್ಧವಾಗಿರುತ್ತದೆ. ಮೇ 30 ರಂದು ಲೋಕಸಭೆ ಚುನಾವಣೆ ಪ್ರಚಾರ ಮುಕ್ತಾಯಗೊಳ್ಳಲಿದೆ.
ನೀತಿ ಸಂಹಿತೆಯ ಉಲ್ಲಂಘನೆ: ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಿತ ಧ್ಯಾನ ಕಾರ್ಯಕ್ರಮ ಚುನಾವಣೆಯ ಮಾದರಿ ನೀತಿ ಸಂಹಿತೆ (ಎಂಸಿಸಿ) ಯಲ್ಲಿನ ʻಮೌನ ಅವಧಿʼಯ ಉಲ್ಲಂಘನೆ ಎಂದು ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಚಾರ ಮಾಡಲು ಅನುಮತಿ ಇಲ್ಲದ 48 ಗಂಟೆಗಳ ಅವಧಿಯನ್ನು 'ಮೌನ ಅವಧಿ' ಎಂದು ಕರೆಯಲಾಗುತ್ತದೆ.
ʻಮೋದಿ ಅವರು ಮೇ 30 ರ ಸಂಜೆಯಿಂದ 'ಮೌನ ವ್ರತ' ಮಾಡುವುದಾಗಿ ಘೋಷಿಸಿದ್ದಾರೆ. ಮೌನ ಅವಧಿ ಮೇ 30 ರಿಂದ ಜೂನ್ 1 ರವರೆಗೆ ಇರುತ್ತದೆ. ಈ ಸಮಯದಲ್ಲಿ ಇಂಥ ಆಚರಣೆ ಮಾದರಿ ಸಂಹಿತೆಯ ಉಲ್ಲಂಘನೆ,ʼ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.
ವಾರಣಾಸಿ ಮತದಾನ: ʻಪ್ರಧಾನಿ ಪ್ರಚಾರವನ್ನು ಮುಂದುವರಿಸಲು ಅಥವಾ ತನ್ನನ್ನು ಮುಂಚೂಣಿಯಲ್ಲಿ ಇರಿಸಿಕೊಳ್ಳಲು ಹೂಡಿರುವ ತಂತ್ರ. ಈ ಧ್ಯಾನವು 'ಮೌನ ಅವಧಿ'ಯ ಉಲ್ಲಂಘನೆ,ʼ ಎಂದು ಕಾಂಗ್ರೆಸ್ ತನ್ನ ದೂರಿನಲ್ಲಿ ಹೇಳಿದೆ.
ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮತ್ತು ಪ್ರವಾಸಿಗರ ಮೇಲಿನ ಪರಿಣಾಮಗಳನ್ನು ಉಲ್ಲೇಖಿಸಿ, ಧ್ಯಾನಕ್ಕೆ ಅನುಮತಿ ನೀಡದಂತೆ ಡಿಎಂಕೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಧ್ಯಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೇ 30 ರಿಂದ ಜೂನ್ 1 ರವರೆಗೆ ಸಾರ್ವಜನಿಕರಿಗೆ ಬೀಚ್ ಗೆ ಪ್ರವೇಶ ನಿರ್ಬಂಧಿಸಲಾಗಿದೆ ಮತ್ತು ಖಾಸಗಿ ದೋಣಿಗಳ ಸಂಚಾರಕ್ಕೆ ಅನುಮತಿ ಇರುವುದಿಲ್ಲ. ವಿವೇಕಾನಂದ ಸ್ಮಾರಕ ಮತ್ತು ಕನ್ಯಾಕುಮಾರಿ ಪಟ್ಟಣದಲ್ಲಿ 2,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ದೂರದರ್ಶನ ಪ್ರಸಾರ: ಕನ್ಯಾಕುಮಾರಿ ಕಾರ್ಯಕ್ರಮವನ್ನು 24 ಗಂಟೆಗಳ ಕಾಲವೂ ದೂರದರ್ಶನದಲ್ಲಿ ಪ್ರಸಾರ ಮಾಡುವುದರಿಂದ, ಚುನಾವಣೆ ಕಾಲದಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಕಾಂಗ್ರೆಸ್ ದೂರಿದೆ. ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿವೆ. ದೂರದರ್ಶನದಲ್ಲಿ ಪ್ರಸಾರವಾದರೆ ಇಸಿಗೆ ದೂರು ನೀಡಲು ಟಿಎಂಸಿ ಸಿದ್ಧವಾಗಿದೆ.
ಡಿಎಂಕೆಯ ಕನ್ಯಾಕುಮಾರಿ ದಕ್ಷಿಣ ಜಿಲ್ಲಾ ವಕೀಲರ ವಿಭಾಗದ ಸಂಘಟಕ ಎಂ. ಜೋಸೆಫ್ ರಾಜ್ ಅವರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವಂತೆ ಕನ್ಯಾಕುಮಾರಿ ಕಲೆಕ್ಟರ್ ಮತ್ತು ರಿಟರ್ನಿಂಗ್ ಆಫೀಸರ್ ಪಿ.ಎನ್. ಶ್ರೀಧರ್ ಅವರನ್ನು ಒತ್ತಾಯಿಸಿದ್ದಾರೆ.
ʻಜೂನ್ 1 ರಂದು ನಡೆಯಲಿರುವ ಅಂತಿಮ ಹಂತದ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಮೋದಿ ನಡೆಸಿದ ತಂತ್ರ ಇದು,ʼ ಎಂದು ಜೋಸೆಫ್ ರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಜಾ ಕಾಲದಲ್ಲಿ ಕನ್ಯಾಕುಮಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ, ವ್ಯಾಪಾರಸ್ಥರಿಗೂ ನಷ್ಟ ಉಂಟಾಗಲಿದೆ ಎಂದರು.
ಧ್ಯಾನ ನಾಟಕ: ಸಿಪಿಐ(ಎಂ) ನ ತಮಿಳುನಾಡು ಕಾರ್ಯದರ್ಶಿ ಕೆ. ಬಾಲಕೃಷ್ಣನ್ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರ. ಈ ಕಾರ್ಯಕ್ರಮದ ತಡೆರಹಿತ ಪ್ರಸಾರದಿಂದ ಮೋದಿ ಮತ್ತು ಬಿಜೆಪಿಗೆ ಪ್ರಯೋಜನ ವಾಗುತ್ತದೆ ಎಂದು ಅವರು ಹೇಳಿದರು. ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ. ಸೆಲ್ವಪೆರುಂತಗೈ,ʻಈ ಕಾರ್ಯಕ್ರಮ ಆಧ್ಯಾತ್ಮಿಕ ಉದ್ದೇಶ ಹೊಂದಿಲ್ಲ. ರಾಜಕೀಯ ಲಾಭದ ಗುರಿಯನ್ನು ಹೊಂದಿದೆ. ಧ್ಯಾನ ನಾಟಕದಿಂದ ದೇಶಕ್ಕೆ ಅವಮಾನ ಆಗುತ್ತದೆ,ʼ ಎಂದು ಹೇಳಿದರು.