ಎನ್‌ಸಿಇಆರ್‌ಟಿ ಪುಸ್ತಕಗಳಿಂದ ಸಂವಿಧಾನ ಪೀಠಿಕೆ ನಾಪತ್ತೆ: ಪ್ರಶ್ನಿಸಿದ ಕಾಂಗ್ರೆಸ್
x

ಎನ್‌ಸಿಇಆರ್‌ಟಿ ಪುಸ್ತಕಗಳಿಂದ ಸಂವಿಧಾನ ಪೀಠಿಕೆ ನಾಪತ್ತೆ: ಪ್ರಶ್ನಿಸಿದ ಕಾಂಗ್ರೆಸ್

ಸಂವಿಧಾನ ರಚನಾ ಸಭೆಯ ಚರ್ಚೆಯನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯಿಲ್ಲದೆ, ರಾಜಕೀಯ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಹೇಳಿದರು.


ಕೆಲವು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಿಂದ ಸಂವಿಧಾನದ ಪೀಠಿಕೆಯನ್ನು ಕೈಬಿಡುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್‌, ಇದು ದೇಶದ ಮೇಲೆ ಕೋಮು ಸಿದ್ಧಾಂತವನ್ನು ಹೇರುವ ಪ್ರಯತ್ನ ಎಂದು ಟೀಕಿಸಿದೆ. ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಸಂವಿಧಾನವನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಮಾತನಾಡಿ,ʻಭಾರತೀಯ ಸಂವಿಧಾನದ ಆತ್ಮ ಮತ್ತು ಅಡಿಪಾಯವಾದ ಪೀಠಿಕೆಯನ್ನು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಪ್ರಕಟಿಸಲಾಗುತ್ತಿತ್ತು. ದೇಶದ ಪ್ರಜೆಗಳಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಭ್ರಾತೃತ್ವದ ಉತ್ತೇಜನ ಪೀಠಿಕೆಯಲ್ಲಿ ಹೇಳಲಾದ ಉದ್ದೇಶಗಳು,ʼ ಎಂದು ಹೇಳಿದರು.

ಸಾಮಾಜಿಕ ಪ್ರಜಾಪ್ರಭುತ್ವ: ʻಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯಿಲ್ಲದೆ ರಾಜಕೀಯ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವ ಎಂದರೇನು? ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಜೀವನದ ತತ್ವಗಳಾಗಿ ಗುರುತಿಸುವ ಜೀವನ ವಿಧಾನʼ ಎಂದು ಸಂವಿಧಾನ ಸಭೆಯ ಚರ್ಚೆಯನ್ನು ಉಲ್ಲೇಖಿಸಿದರು.

ಪ್ರತಿಯೊಬ್ಬ ನಾಗರಿಕರು, ವಿಶೇಷವಾಗಿ ಯುವಜನರು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ತತ್ವಗಳು ಮತ್ತು ಮೌಲ್ಯಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಬಿ.ಆರ್. ಅಂಬೇಡ್ಕರ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಖರ್ಗೆ ಹೇಳಿದರು.

ಆರ್‌ಎಸ್‌ಎಸ್‌ ವಿರುದ್ಧ ಟೀಕೆ: ಸಂಸತ್ತಿನ ಸಂಕೀರ್ಣದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಳಾಂತರ ಕುರಿತ ಅವರ ಮಾರುಗಳಿಗೆ, ಆಡಳಿತ ಪಕ್ಷದಿಂದ ಆಕ್ಷೇಪಣೆ ವ್ಯಕ್ತವಾಯಿತು. ʻಆರ್‌ಎಸ್‌ಎಸ್ ಮತ್ತು ಬಿಜೆಪಿ ಪಠ್ಯಕ್ರಮವನ್ನು ತಿದ್ದುವ ಮೂಲಕ ಜನರ ಮೇಲೆ ಕೋಮು ಸಿದ್ಧಾಂತವನ್ನು ಹೇರಲು ಪ್ರಯತ್ನಿಸುತ್ತಿವೆ. ಎನ್‌ಸಿಇಆರ್‌ಟಿ ತೆಗೆದುಕೊಂಡ ಕ್ರಮ ಸರಿಯಲ್ಲ,ʼ ಎಂದು ಆಡಳಿತ ಪಕ್ಷದ ಪ್ರತಿಭಟನೆಯ ನಡುವೆಯೇ ಹೇಳಿದರು.

ಈ ಹಂತದಲ್ಲಿ ರಾಜ್ಯಸಭಾಧ್ಯಕ್ಷ ಜಗದೀಪ್ ಧಂಖರ್ ಅವರು, ʻನಿಮ್ಮ ಮಾತು ದಾಖಲೆಯಲ್ಲಿ ಹೋಗುವುದಿಲ್ಲ.ಕೊನೆಯ ನಾಲ್ಕು ನಿಮಿಷಗಳನ್ನು ಅಳಿಸಬೇಕು,ʼ ಎಂದು ಹೇಳಿದರು. ʻನೀವು ವಿಷಯಾಂತರ ಮಾಡುತ್ತಿದ್ದೀರಿ,ʼ ಎಂದು ಖರ್ಗೆ ಹೇಳಿದರು.

ʻನಾವೆಲ್ಲರೂ ಸಂವಿಧಾನಕ್ಕೆ ಬದ್ಧರಾಗಿದ್ದೇವೆ. ಇದಕ್ಕೆ ವಿರುದ್ಧವಾದ ಗ್ರಹಿಕೆ ನಮಗೆಲ್ಲರಿಗೂ ನೋವುಂಟು ಮಾಡುತ್ತದೆ,ʼ ಎಂದು ಧಂಖರ್ ಹೇಳಿದರು.

ನಡ್ಡಾ ಪ್ರತಿಕ್ರಿಯೆ: ಸಭಾನಾಯಕ ಮತ್ತು ಸಚಿವ ನಡ್ಡಾ,ʻಎನ್‌ಸಿಇಆರ್‌ಟಿ ಪಠ್ಯಪುಸ್ತಕ ಅಥವಾ ಬದಲಾವಣೆಯನ್ನು ನೋಡಿಲ್ಲ. ಆದರೆ, ಸಂವಿಧಾನದಲ್ಲಿ ಯಾವುದೇ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ,ʼ ಎಂದು ಹೇಳಿದರು.

Read More
Next Story