Rahul Gandhi: ತೆಲಂಗಾಣದಲ್ಲಿ ಜಾತಿ ಗಣತಿ ಆರಂಭ; ನಿರ್ಧಾರಕ್ಕೆ ಬದ್ಧ ಎಂದ ರಾಹುಲ್ ಗಾಂಧಿ
ಭಾರತದಲ್ಲಿ ವಿಭಿನ್ನ ರೀತಿಯ ಜಾತಿ ತಾರತಮ್ಯವಿದೆ. ಇದು ಬಹುಶಃ ವಿಶ್ವದಲ್ಲೇ ಅತ್ಯಂತ ಕೆಟ್ಟದ್ದಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಜಾತಿ ಗಣತಿ ನಡೆಸಬೇಕು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಜಾತಿ ಗಣತಿ ವಿಷಯವನ್ನು ಪ್ರಸ್ತಾಪನೆ ಮಾಡಿದ್ದಾರೆ. ತೆಲಂಗಾಣದಲ್ಲಿ ಜಾತಿ ಆಧಾರಿತ ಜನಗಣತಿಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ದೇಶದಲ್ಲಿ ಜಾತಿ ಆಧಾರಿತ ಜನಗಣತಿಗೆ ರಾಜ್ಯವನ್ನು ಮಾದರಿಯಾನ್ನಾಗಿ ಮಾಡಲು ತಾನು ಸಂಪೂರ್ಣ ಬದ್ಧ ಎಂದು ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ತೆಲಂಗಾಣ ಸರ್ಕಾರ ನ.6ರಿಂದ ಆರಂಭವಾಗಲಿರುವ ಜಾತಿ ಸಮೀಕ್ಷೆಗೂ ಮುನ್ನ ನಡೆದ ರಾಜ್ಯ ಕಾಂಗ್ರೆಸ್ ಸಮಿತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಭಾರತದಲ್ಲಿ ವಿಭಿನ್ನ ರೀತಿಯ ಜಾತಿ ತಾರತಮ್ಯವಿದೆ. ಇದು ಬಹುಶಃ ವಿಶ್ವದಲ್ಲೇ ಅತ್ಯಂತ ಕೆಟ್ಟದ್ದಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಜಾತಿ ಗಣತಿ ನಡೆಸಬೇಕು. ರಾಜ್ಯ ಸರಕಾರದ ಜಾತಿ ಸಮೀಕ್ಷೆಯಲ್ಲಿ ಕೆಲವು ಲೋಪಗಳಿರಬಹುದು, ಇವುಗಳನ್ನು ಬಗೆ ಹರಿಸಲಾಗುವುದು. ಕಾಂಗ್ರೆಸ್ ಪರವಾಗಿ ರಾಷ್ಟ್ರೀಯ ಜಾತಿ ಗಣತಿಯನ್ನು ನಡೆಸಲು ಮತ್ತು ದೇಶದಲ್ಲಿ ಶೇ.50ರಷ್ಟು ಮೀಸಲಾತಿ ಎಂಬ ಕೃತಕ ತಡೆಗೋಡೆಯನ್ನು ನಿವಾರಿಸಲಾಗುವುದು ಅವರು ತಿಳಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭಾರತದಲ್ಲಿನ ತಾರತಮ್ಯದ ಕಲ್ಪನೆಯನ್ನು ಪ್ರಶ್ನಿಸಲು ಬಯಸುವುದಾಗಿ ಪ್ರಧಾನಿ ಏಕೆ ಸಾರ್ವಜನಿಕವಾಗಿ ಹೇಳಲಿಲ್ಲ, ಕಾರ್ಪೊರೇಟ್, ನ್ಯಾಯಾಂಗ, ಮಾಧ್ಯಮಗಳಲ್ಲಿ ಎಷ್ಟು ದಲಿತರು, ಒಬಿಸಿಗಳು ಮತ್ತು ಆದಿವಾಸಿಗಳು ಇದ್ದಾರೆ ಎಂದು ಕೇಳಲು ಪ್ರಧಾನಿ ಏಕೆ ಹೆದರುತ್ತಾರೆ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಪರವಾಗಿ ರಾಷ್ಟ್ರೀಯ ಜಾತಿ ಗಣತಿ ನಡೆಸುವ ಬದ್ಧತೆಯನ್ನು ಸಂಸತ್ತಿನಲ್ಲಿ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.
ನಾನು ವಿವಾದಾತ್ಮಕವಾಗಿ ಮಾತನಾಡುತ್ತಿಲ್ಲ. ಈ ದೇಶದಲ್ಲಿ ಜಾತಿ ತಾರತಮ್ಯವಿದೆ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಜಾತಿ ತಾರತಮ್ಯದ ನಿಜವಾದ ವ್ಯಾಪ್ತಿ ಕಂಡು ಹಿಡಿಯಲು ಬಯಸುತ್ತೇನೆ. ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ಜಾತಿ ಗಣತಿ ಅಗತ್ಯದ ಬಗ್ಗೆ ಮಾತನಾಡುವಾಗ ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೇಶದ ಸತ್ಯವನ್ನು ಬಹಿರಂಗಪಡಿಸುವುದು ದೇಶವನ್ನು ವಿಭಜಿಸಿದಂತೆ ಆಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಎಷ್ಟೊಂದು ದಲಿತರು, ಒಬಿಸಿಗಳು, ಆದಿವಾಸಿಗಳು, ಅಲ್ಪಸಂಖ್ಯಾತರು, ಸಾಮಾನ್ಯ ಜಾತಿಗಳಿವೆ. ಹೀಗಾಗಿ ದೇಶದಲ್ಲಿ ಸಂಪತ್ತು ಸಮವಾಗಿ ಹಂಚಿಕೆಯಾಗಬೇಕಾದರೆ ಜಾತಿ ಗಣತಿ ನಡೆಸಬೇಕು ಎಂದು ತಿಳಿಸಿದ ಅವರು, ಜಾತಿ ಸಮೀಕ್ಷೆ ನಡೆಸಲು ತೆಲಂಗಾಣ ಕಾಂಗ್ರೆಸ್ ನಾಯಕತ್ವದ ಕ್ರಮಕ್ಕಾಗಿ ಧನ್ಯವಾದ ಅರ್ಪಿಸಿದರು.
ತಮ್ಮ ಪಕ್ಷವು ಜಾತಿ ಗಣತಿ ನಡೆಸುವುದರೊಂದಿಗೆ ದೇಶಕ್ಕೆ ಪ್ರಗತಿ ಮತ್ತು ಅಭಿವೃದ್ಧಿಯ ಚೌಕಟ್ಟನ್ನು ಹೆಚ್ಚಿಸಲು ಬಯಸುತ್ತದೆ. ಭಾರತದಲ್ಲಿನ ಅಸಮಾನತೆಗಳು ಎಂಬ ವಿಷಯದ ಕುರಿತು ಆರ್ಥಿಕತೆಯ ತಜ್ಞರೊಂದಿಗೆ ನಡೆಸಿದ ಸಂಭಾಷಣೆಯನ್ನು ಉಲ್ಲೇಖಿಸಿದ ಅವರು ತಜ್ಞರ ವಿಶ್ಲೇಷಣೆಯು ಜಾತಿಯನ್ನು ಒಳಗೊಂಡಿಲ್ಲ ಎಂದು ಹೇಳಿದರು.
ಕಳೆದ ಸಾಲಿನ ವಿಧಾನಸಭಾ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಉದ್ಯೋಗ, ರಾಜಕೀಯ ಹಾಗೂ ಜಾತಿ ಸಮೀಕ್ಷೆಯನ್ನು ಸಮಗ್ರವಾಗಿ ನಡೆಸಲು ಕಸರತ್ತು ಆರಂಭಿಸಿದೆ. ಬುಧವಾರದಿಂದ ಸಮೀಕ್ಷೆ ಆರಂಭವಾಗಿದೆ. ಈ ಸಭೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಅವರ ಸಂಪುಟ ಸಹೋದ್ಯೋಗಿಗಳು, ಪಿಸಿಸಿ ಅಧ್ಯಕ್ಷ ಬಿ ಮಹೇಶ್ ಕುಮಾರ್ ಗೌಡ್ ಮತ್ತು ಇತರ ಮುಖಂಡರು ಭಾಗವಹಿಸಿದ್ದರು.