ಕೋಚಿಂಗ್ ಸೆಂಟರ್ ಸಾವು| ದೆಹಲಿ ಸರ್ಕಾರ, ಆಯುಕ್ತರಿಗೆ ಎನ್‌ಎಚ್‌ಆರ್‌ಸಿ ನೋಟಿಸ್
x
ಎಂಸಿಡಿ ಅಧಿಕಾರಿಗಳು ನವದೆಹಲಿಯ ಪ್ರೀತ್ ವಿಹಾರ್‌ನಲ್ಲಿ ಕೋಚಿಂಗ್ ಸೆಂಟರ್‌ ಗೆ ಬೀಗ ಹಾಕಿದರು. ಮೇಯರ್ ಶೆಲ್ಲಿ ಒಬೆರಾಯ್ ಉಪಸ್ಥಿತರಿದ್ದರು.

ಕೋಚಿಂಗ್ ಸೆಂಟರ್ ಸಾವು| ದೆಹಲಿ ಸರ್ಕಾರ, ಆಯುಕ್ತರಿಗೆ ಎನ್‌ಎಚ್‌ಆರ್‌ಸಿ ನೋಟಿಸ್

ದಿಲ್ಲಿಯಲ್ಲಿ ನಿಯಮವಳಿಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಕೋಚಿಂಗ್‌ ಕೇಂದ್ರಗಳ ಕುರಿತು ಸಮೀಕ್ಷೆ ನಡೆಸುವಂತೆ ದೆಹಲಿ ಮುಖ್ಯ ಕಾರ್ಯದರ್ಶಿಗೆ ಆಯೋಗ ಸೂಚಿಸಿದೆ.


ದಿಲ್ಲಿಯ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್‌ಆರ್‌ಸಿ) ದೆಹಲಿ ಸರ್ಕಾರ, ನಗರ ಪೊಲೀಸ್ ಮುಖ್ಯಸ್ಥ ಮತ್ತು ಮುನ್ಸಿಪಲ್ ಕಮಿಷನರ್‌ಗೆ ನೋಟಿಸ್ ಜಾರಿ ಮಾಡಿದೆ.

ಆಯೋಗ‌ವು ಎರಡು ವಾರಗಳೊಳಗೆ ವಿಸ್ತೃತ ವರದಿಯನ್ನು ಕೇಳಿದೆ ಎಂದು ತಿಳಿದುಬಂದಿದೆ.

ಸಮೀಕ್ಷೆಗೆ ಆದೇಶ: ದೆಹಲಿಯಲ್ಲಿ ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಇಂತಹ ಸಂಸ್ಥೆಗಳು ಮತ್ತು ಕೋಚಿಂಗ್ ಸೆಂಟರ್‌ಗಳ ನಿಖರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಸಮೀಕ್ಷೆ ನಡೆಸುವಂತೆ ದೆಹಲಿ ಮುಖ್ಯ ಕಾರ್ಯದರ್ಶಿಯನ್ನು ಕೇಳಲಾಗಿದೆ. ಅಂತಹ ಸಂಸ್ಥೆಗಳ ವಿರುದ್ಧ ಬಾಕಿ ಉಳಿದ ದೂರುಗಳು ಮತ್ತು ಸಂಬಂಧಪಟ್ಟ ಇಲಾಖೆ ಕೈಗೊಂಡ ಕ್ರಮಗಳು ಸೇರಿದಂತೆ ಪ್ರತಿಯೊಂದು ವಿವರವನ್ನೂ ವರದಿಯಲ್ಲಿ ನಮೂದಿಸಬೇಕು ಎಂದು ಎನ್‌ಎಚ್‌ಆರ್‌ಸಿ ತಿಳಿಸಿದೆ.

ʻಜುಲೈ 27 ರಂದು ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯ ಗ್ರಂಥಾಲಯದಲ್ಲಿ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಲಾಗಿದೆ,ʼ ಎಂದು ಹೇಳಿದರು. ನೀರು ನಿಲ್ಲುವಿಕೆ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಗಳು ಸೂಚಿಸಿವೆ.

ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಆಯೋಗ, ವರದಿಗಳು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತವೆ ಎಂದು ಗಮನಿಸಿದೆ. ದೆಹಲಿಯ ಪಟೇಲ್ ನಗರ ಪ್ರದೇಶದಲ್ಲಿ ಇನ್ನೊಬ್ಬ ನಾಗರಿಕ ಸೇವಾ ಆಕಾಂಕ್ಷಿ ಜಲಾವೃತ ರಸ್ತೆಯನ್ನು ದಾಟುವಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂಬ ವರದಿಯನ್ನು ಕೂಡ ಆಯೋಗ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.

Read More
Next Story