
ಪ್ರಧಾನಿ ನರೇಂದ್ರ ಮೋದಿಯವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಸ್ಮರಣಿಕೆ ನೀಡಿದರು.
ಪ್ರಧಾನಿ ಮೋದಿ ಭೇಟಿ, ರಾಜ್ಯದ 5 ಬೇಡಿಕೆಗಳ ಮುಂದಿಟ್ಟ ಸಿಎಂ ಸಿದ್ದರಾಮಯ್ಯ
ಕೇಂದ್ರದ ಮಹತ್ವಾಕಾಂಕ್ಷೆಯ 'ಜಲ ಜೀವನ್ ಮಿಷನ್' (JJM) ಯೋಜನೆಗೆ ಕೇಂದ್ರದಿಂದ ಬರಬೇಕಾದ ಅನುದಾನದಲ್ಲಿ ಭಾರಿ ಕೊರತೆಯಾಗಿರುವುದನ್ನು ಪ್ರಧಾನಿಗಳ ಗಮನಕ್ಕೆ ತರಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕದ ಬಹುಕಾಲದ ಬೇಡಿಕೆಗಳು ಮತ್ತು ಪ್ರಸಕ್ತ ಬಿಕ್ಕಟ್ಟುಗಳ ಪರಿಹಾರಕ್ಕಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ರಾಜ್ಯದ ಹಿತದೃಷ್ಟಿಯಿಂದ ಐದು ಪ್ರಮುಖ ವಿಷಯಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರೊಂದಿಗೆ ಮೋದಿ ಅವರನ್ನು ಭೇಟಿಯಾದರು. ನಂತರ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಭೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ರಾಯಚೂರಿಗೆ ಏಮ್ಸ್
ಕಲ್ಯಾಣ ಕರ್ನಾಟಕದ ಆಶೋತ್ತರ ಜಿಲ್ಲೆಯಾದ ರಾಯಚೂರಿನಲ್ಲಿ 'ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ' (AIIMS) ಸ್ಥಾಪಿಸಬೇಕೆಂಬುದು ರಾಜ್ಯದ ಪ್ರಬಲ ಬೇಡಿಕೆಯಾಗಿದೆ. ಈ ಪ್ರದೇಶವು ಆರೋಗ್ಯ ಮತ್ತು ಶಿಕ್ಷಣ ಸೂಚ್ಯಂಕಗಳಲ್ಲಿ ಹಿಂದುಳಿದಿದ್ದು, ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ, ಈ ಭಾಗದ ಜನರಿಗೆ ಉನ್ನತ ಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಏಮ್ಸ್ ಸ್ಥಾಪನೆ ಅತ್ಯಗತ್ಯ ಎಂದು ಮುಖ್ಯಮಂತ್ರಿಗಳು ಮೋದಿ ಮುಂದೆ ಪ್ರತಿಪಾದಿಸಿದ್ದಾರೆ. ಏಮ್ಸ್ ಸ್ಥಾಪನೆಗೆ ಅಗತ್ಯವಿರುವ ಭೂಮಿಯನ್ನು ಗುರುತಿಸಲಾಗಿದ್ದು, ವಿವರವಾದ ಯೋಜನಾ ವರದಿಯನ್ನು (DPR) ಈಗಾಗಲೇ ಸಲ್ಲಿಸಲಾಗಿದೆ. ಇದು ಕೇವಲ ರಾಯಚೂರಿಗೆ ಮಾತ್ರವಲ್ಲದೆ, ಸುತ್ತಮುತ್ತಲಿನ ಜಿಲ್ಲೆಗಳಿಗೂ ವರದಾನವಾಗಲಿದೆ ಮತ್ತು ಈ ಭಾಗದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೇಗ ನೀಡಲಿದೆ ಎಂಬುದಾಗಿ ಬೇಡಿಕೆ ಪಟ್ಟಿಯಲ್ಲಿ ಬರೆಯಲಾಗಿದೆ.
ಜಲ ಜೀವನ್ ಮಿಷನ್
ಕೇಂದ್ರದ ಮಹತ್ವಾಕಾಂಕ್ಷೆಯ 'ಜಲ ಜೀವನ್ ಮಿಷನ್' (JJM) ಯೋಜನೆಗೆ ಕೇಂದ್ರದಿಂದ ಬರಬೇಕಾದ ಅನುದಾನದಲ್ಲಿ ಭಾರಿ ಕೊರತೆಯಾಗಿರುವುದನ್ನು ಪ್ರಧಾನಿಗಳ ಗಮನಕ್ಕೆ ತರಲಾಗಿದೆ. ರಾಜ್ಯದಲ್ಲಿ ಈಗಾಗಲೇ ಶೇ. 86ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದ್ದರೂ, 2025-26ರವರೆಗೆ ಕೇಂದ್ರದಿಂದ ಬರಬೇಕಾಗಿದ್ದ 13,004.63 ಕೋಟಿ ರೂಪಾಯಿ ಅನುದಾನ ಇನ್ನೂ ಬಾಕಿ ಇದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರದಿಂದ ಯಾವುದೇ ಹಣ ಬಿಡುಗಡೆಯಾಗದ ಕಾರಣ, ಕಾಮಗಾರಿಗಳು ನಿಲ್ಲಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರವೇ ತನ್ನ ಬಜೆಟ್‌ನಿಂದ 1,500 ಕೋಟಿ ರೂಪಾಯಿ ಮುಂಗಡವಾಗಿ ನೀಡಿದೆ. ತುರ್ತಾಗಿ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ..
ಕಬ್ಬು ಬೆಳೆಗಾರರ ಬಿಕ್ಕಟ್ಟು ಪರಿಹಾರ
ಇತ್ತೀಚೆಗೆ ಕಬ್ಬು ಬೆಳೆಗಾರರು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ 100 ರೂಪಾಯಿ ಹೆಚ್ಚುವರಿ ಹಣ ನೀಡಲು ಆದೇಶಿಸಿ, ತಾತ್ಕಾಲಿಕ ಪರಿಹಾರ ಒದಗಿಸಿದೆ. ಆದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಾಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು (MSP) ಪರಿಷ್ಕರಿಸುವುದು, ರಾಜ್ಯದ ಡಿಸ್ಟಿಲರಿಗಳಿಂದ ನಿಗದಿತ ಪ್ರಮಾಣದಲ್ಲಿ ಎಥೆನಾಲ್ ಖರೀದಿಯನ್ನು ಖಚಿತಪಡಿಸುವುದು ಮತ್ತು ಕಬ್ಬು ಕಟಾವು ಹಾಗೂ ಸಾಗಣೆ ವೆಚ್ಚವನ್ನು ನಿಗದಿಪಡಿಸಲು ರಾಜ್ಯಗಳಿಗೆ ಅಧಿಕಾರ ನೀಡುವಂತೆ ಕೇಂದ್ರವನ್ನು ಕೋರಲಾಗಿದೆ.
ನೀರಾವರಿ ಯೋಜನೆಗಳಿಗೆ ಶೀಘ್ರ ಅನುಮೋದನೆ
ರಾಜ್ಯದ ಜೀವಾಳವಾಗಿರುವ ಪ್ರಮುಖ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಲು ಪ್ರಧಾನಿ ಮಂತ್ರಿಗಳು ಮಧ್ಯಪ್ರವೇಶಿಸಬೇಕೆಂದು ಸಿಎಂ ಕೋರಿದ್ದಾರೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಈ ಯೋಜನೆಗೆ ಕೇಂದ್ರ ಜಲ ಆಯೋಗದಿಂದ (CWC) ಶೀಘ್ರ ಅನುಮೋದನೆ ಕೊಡಿಸಬೇಕು. ದಶಕದಿಂದ ನೆನೆಗುದಿಗೆ ಕೃಷ್ಣಾ ನ್ಯಾಯಾಧಿಕರಣ-2ರ ಬಿದ್ದಿರುವ ತೀರ್ಪನ್ನು ತಕ್ಷಣವೇ ಗೆಜೆಟ್‌ನಲ್ಲಿ ಪ್ರಕಟಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ 2023-24ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ 5,300 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು. ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮೋದನೆ ನೀಡಬೇಕು ಎಂದು ಪ್ರಧಾನಿಗೆ ಕೋರಲಾಗಿದೆ.
ಎನ್ಡಿಆರ್ಎಫ್ ನಿಧಿಯಿಂದ 2,136 ಕೋಟಿ ರೂಪಾಯಿಗೆ ಮನವಿ
ಈ ವರ್ಷ ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ವಿವರಿಸಿದ ಸಿಎಂ, 'ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ'ಯಿಂದ (NDRF) ಒಟ್ಟು 2,136.57 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಮನವಿ ಮಾಡಿದರು. ಪ್ರವಾಹದಿಂದಾಗಿ ರಾಜ್ಯದಲ್ಲಿ 14.5 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 19 ಲಕ್ಷ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ಮನೆಗಳು, ರಸ್ತೆಗಳು ಮತ್ತು ಶಾಲೆಗಳು ಹಾನಿಗೊಳಗಾಗಿದ್ದು, ಪರಿಹಾರ ಮತ್ತು ಪುನರ್ನಿರ್ಮಾಣ ಕಾರ್ಯಗಳಿಗೆ ಈ ಅನುದಾನ ಅತ್ಯಗತ್ಯ ಎಂದು ಪ್ರಧಾನಿಗೆ ಕೋರಲಾಗಿದೆ.
ಮಾಧ್ಯಮ ಗೋಷ್ಠಿಯಲ್ಲಿ ಮೇಲಿನ ವಿಚಾರಗಳನ್ನು ಹೇಳಿದ ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಪರಿಗಣಿಸಿ, ರಾಜ್ಯದ ಅಭಿವೃದ್ಧಿಗೆ ಮತ್ತು ಜನರ ಸಂಕಷ್ಟಕ್ಕೆ ಸ್ಪಂದಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

