ದೇವಸ್ಥಾನದ ನಿಯಂತ್ರಣ: ಟಿಡಿಪಿ, ಜನಸೇನಾ ಕಾರ್ಯಕರ್ತರ ನಡುವೆ ಘರ್ಷಣೆ
ಕಾಕಿನಾಡ ಜಿಲ್ಲೆಯ ಗ್ರಾಮವೊಂದರಲ್ಲಿ ಅಪರ್ಣಾ ದೇವಿ ದೇವಸ್ಥಾನದ ಆಡಳಿತ ಸಮಿತಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಸೇನಾ ಮತ್ತು ತೆಲುಗು ದೇಶಂ ಪಕ್ಷದ ಕಾರ್ಯಕರ್ತರ ನಡುವೆ ಭಾನುವಾರ (ಜೂನ್ 9) ಘರ್ಷಣೆ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಎರಡು ಗುಂಪುಗಳು ಹೊಡೆದಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಎನ್. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಈ ಹಿಂದೆ ದೇವಾಲಯವು ವೈಎಸ್‌ಆರ್‌ಸಿಪಿ ನಿಯಂತ್ರಣದಲ್ಲಿ ಇದ್ದಿತ್ತು. ದೇವಸ್ಥಾನದ ಆಡಳಿತಾಧಿಕಾರಿಗಳು ಟಿಡಿಪಿಯ ಮಿತ್ರಪಕ್ಷವಾದ ಜನಸೇನಾ ಕಾರ್ಯಕರ್ತರಿಗೆ ದೇಗುಲದ ಕೀಲಿಕೈ ಹಸ್ತಾಂತರಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ʻಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ದೇವಸ್ಥಾನದ ಹಿಂದಿನ ಆಡಳಿತಾಧಿಕಾರಿ, ಜನಸೇನಾ ಕಾರ್ಯ ಕರ್ತರಿಗೆ ಕೀಲಿಕೈ ನೀಡಿದರು. ಬದಲಾಗಿ, ಗ್ರಾಮದ ಮುಖ್ಯಸ್ಥರಿಗೆ ಹಸ್ತಾಂತರಿಸಬೇಕಿತ್ತು; ಆಡಳಿತ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲು ಸಭೆ ಕರೆಯಬೇಕಿತ್ತು,ʼ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಟಿಡಿಪಿ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನೆ ರಾಜ್ಯದ 25 ಲೋಕಸಭೆ ಸ್ಥಾನಗಳಲ್ಲಿ 21ನ್ನು ಗೆದ್ದಿದೆ(ಟಿಡಿಪಿ 16, ಬಿಜೆಪಿ 3 ಮತ್ತು ಜನಸೇನೆ 2). ವಿಧಾನಸಭೆಯಲ್ಲಿ 175 ಸ್ಥಾನಗಳಲ್ಲಿ ಟಿಡಿಪಿ 135, ಜನಸೇನೆ 21 ಮತ್ತು ಬಿಜೆಪಿ 8 ಸ್ಥಾನ ಗೆದ್ದಿವೆ. ನಾಯ್ಡು ಅವರು ಜೂನ್ 12 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.