
ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್
26ರಲ್ಲಿ 23 ಸ್ಥಾನಗಳಲ್ಲಿ ಮುನ್ನಡೆ, ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ಅಚ್ಚರಿ!‘
2020ರಲ್ಲಿ ಕೇವಲ 1, 2015ರಲ್ಲಿ 2, ಮತ್ತು 2010ರಲ್ಲಿ 3 ಸ್ಥಾನಗಳನ್ನು ಮಾತ್ರ ಗೆದ್ದಿದ್ದ ಕಾರಣ, ಅವರನ್ನು ಬಿಹಾರ ರಾಜಕೀಯದಲ್ಲಿ 'ವೋಟ್ ಕಟ್ವಾ' ಎಂದು ಕರೆಯಲಾಗುತ್ತಿತ್ತು.
"ವೋಟ್ ಕಟ್ವಾ" (ಮತ ವಿಭಜಕ) ಎಂದೇ ಕರೆಯಲ್ಪಡುತ್ತಿದ್ದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ತೀವ್ರ ಆಘಾತ ನೀಡಿದ್ದಾರೆ.
ಅವರ ಪಕ್ಷ ಸ್ಪರ್ಧಿಸಿದ್ದ 29 ಸ್ಥಾನಗಳ ಪೈಕಿ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ, ಚಿರಾಗ್ ಪಾಸ್ವಾನ್ ಅವರು ಎನ್‌ಡಿಎ ಮೈತ್ರಿಕೂಟದಲ್ಲಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.
'ವೋಟ್ ಕಟ್ವಾ' ಪಟ್ಟದಿಂದ 'ಕಿಂಗ್‌ಮೇಕರ್'ವರೆಗೆ
ಈ ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಚಿರಾಗ್ ಪಾಸ್ವಾನ್ ಅವರ ಪಕ್ಷವು ನಿರಂತರವಾಗಿ ಕಳಪೆ ಪ್ರದರ್ಶನ ನೀಡಿತ್ತು. 2020ರಲ್ಲಿ ಕೇವಲ 1, 2015ರಲ್ಲಿ 2, ಮತ್ತು 2010ರಲ್ಲಿ 3 ಸ್ಥಾನಗಳನ್ನು ಮಾತ್ರ ಗೆದ್ದಿದ್ದ ಕಾರಣ, ಅವರನ್ನು ಬಿಹಾರ ರಾಜಕೀಯದಲ್ಲಿ 'ವೋಟ್ ಕಟ್ವಾ' ಎಂದು ಕರೆಯಲಾಗುತ್ತಿತ್ತು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಐದೂ ಸ್ಥಾನಗಳನ್ನು ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಈಗ, 2025ರ ವಿಧಾನಸಭಾ ಚುನಾವಣೆಯಲ್ಲಿನ ಈ ಭರ್ಜರಿ ಪ್ರದರ್ಶನವು, ಅವರನ್ನು 'ಕಿಂಗ್‌ಮೇಕರ್' ಸ್ಥಾನಕ್ಕೆ ಏರಿಸಿದೆ.
ಎಲ್‌ಜೆಪಿ ಮುನ್ನಡೆ ಸಾಧಿಸಿರುವ ಕ್ಷೇತ್ರಗಳು
ಚಿರಾಗ್ ಪಾಸ್ವಾನ್ ಅವರ ಪಕ್ಷವು ರಾಜೌಲಿ, ಬೋಧ್ ಗಯಾ, ಗೋವಿಂದಪುರ್, ಶೇರ್‌ಘಾಟಿ, ಓಬ್ರಾ, ದೇಗ್ರಿ, ನಾಥ್‌ಗಂಜ್, ಪರ್ಬತ್ತಾ, ಬಲರಾಂಪುರ್, ಕಸ್ಬಾ, ಬಹದ್ದೂರ್‌ಗಂಜ್, ಸಿಮ್ರಿ ಬಖ್ತಿಯಾರ್‌ಪುರ್, ದರೌಲಿ, ಮತ್ತು ಸುಗೌಲಿ ಸೇರಿದಂತೆ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಎನ್‌ಡಿಎಗೆ ಬಲ
ಚಿರಾಗ್ ಪಾಸ್ವಾನ್ ಅವರ ಪಕ್ಷದ ಈ ಅನಿರೀಕ್ಷಿತ ಗೆಲುವು, ಎನ್‌ಡಿಎ ಮೈತ್ರಿಕೂಟಕ್ಕೆ ದೊಡ್ಡ ಬಲ ತಂದುಕೊಟ್ಟಿದೆ. ಜೆಡಿಯು 75 ಮತ್ತು ಬಿಜೆಪಿ 84 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಲ್‌ಜೆಪಿ(ಆರ್‌ವಿ)ಯ 23 ಸ್ಥಾನಗಳೊಂದಿಗೆ ಎನ್‌ಡಿಎ ಮೈತ್ರಿಕೂಟವು ಬಿಹಾರದಲ್ಲಿ ಕ್ಲೀನ್ ಸ್ವೀಪ್ ಮಾಡುವತ್ತ ಸಾಗಿದೆ. ಈ ಫಲಿತಾಂಶವು ಚಿರಾಗ್ ಪಾಸ್ವಾನ್ ಅವರಿಗೆ ರಾಜ್ಯ ರಾಜಕಾರಣದಲ್ಲಿ ಮತ್ತು ಸರ್ಕಾರ ರಚನೆಯಲ್ಲಿ ಹೆಚ್ಚಿನ ರಾಜಕೀಯ ಬಲವನ್ನು ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚುನಾವಣೆಗೂ ಮುನ್ನ, ಎನ್‌ಡಿಎ ಮೈತ್ರಿಕೂಟದಲ್ಲಿ 40 ಸೀಟುಗಳಿಗಾಗಿ ಪಟ್ಟು ಹಿಡಿದಿದ್ದ ಚಿರಾಗ್ ಪಾಸ್ವಾನ್, ಇದೀಗ ತಮ್ಮ ಪಕ್ಷವು ಬಿಹಾರ ರಾಜಕೀಯದಲ್ಲಿ ನಿರ್ಲಕ್ಷಿಸಲಾಗದ ಶಕ್ತಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

