ಲಡಾಖಿನಲ್ಲಿ ದೇಶದ ಭೂಭಾಗ ಚೀನಾದ ಕೈವಶ: ರಾಹುಲ್
ಇಸ್ರೇಲ್, ಅಮೆರಿಕದೊಂದಿಗಿನ ಸಂಬಂಧ, ಉಗ್ರರಿಗೆ ಬೆಂಬಲ ನಿಲ್ಲಿಸದ ಹೊರತು ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲ ಸೇರಿದಂತೆ ಪ್ರಮುಖ ವಿದೇಶಾಂಗ ನೀತಿ ವಿಷಯಗಳಲ್ಲಿ ಬಿಜೆಪಿ ಸರ್ಕಾರದ ನಿಲುವನ್ನು ಕಾಂಗ್ರೆಸ್ ಅನುಮೋದಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
ನಾಲ್ಕು ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಅವರು ವಾಷಿಂಗ್ಟನ್ ಡಿಸಿಯ ಪ್ರತಿಷ್ಠಿತ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಪಾಕಿಸ್ತಾನದ ಜೊತೆ ಮಾತುಕತೆಯಿಲ್ಲ ಎಂಬ ಬಗ್ಗೆ ಮೋದಿಯವರ ನೀತಿಯನ್ನು ಬೆಂಬಲಿಸಿದರಲ್ಲದೆ, ಬಾಂಗ್ಲಾದೇಶದಲ್ಲಿ ತೀವ್ರವಾದಿ ಚಟುಚಟಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಆದರೆ, ತಮ್ಮ ಪಕ್ಷವು ಚೀನಾ ಕುರಿತ ಬಗ್ಗೆ ಮೋದಿಯವರ ನೀತಿಯನ್ನು ಒಪ್ಪುವುದಿಲ್ಲ. ಏಕೆಂದರೆ, ದೆಹಲಿಯ ಗಾತ್ರದಷ್ಟು ಲಡಾಖ್‌ನ ಭಾರತೀಯ ಭೂಪ್ರದೇಶವನ್ನು ಚೀನಾದ ಪಡೆಗಳು ಹಿಡಿತಕ್ಕೆ ತೆಗೆದುಕೊಂಡಿವೆ ಎಂದು ಆರೋಪಿಸಿದರು.
ಪಾಕಿಸ್ತಾನದಿಂದ ಪ್ರಚೋದನೆ: ʻನಮ್ಮ ದೇಶದಲ್ಲಿ ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಚೋದಿಸುತ್ತಿರುವುದು ಸಮಸ್ಯೆಗೆ ಕಾರಣ. ಅದು ಮುಂದುವರಿಯುವವರೆಗೆ ಎರಡು ದೇಶಗಳ ನಡುವೆ ಸಮಸ್ಯೆಗಳು ಇರುತ್ತವೆ,ʼಎಂದು ಹೇಳಿದರು.
ಕಾಶ್ಮೀರ ಸಮಸ್ಯೆಯು ದಕ್ಷಿಣ ಏಷ್ಯಾದ ಎರಡು ರಾಷ್ಟ್ರಗಳನ್ನು ಮಾತುಕತೆಯಿಂದ ದೂರವಿಡುತ್ತಿದೆಯೇ ಎಂದು ಕೇಳಿದಾಗ ಅವರು ʻಇಲ್ಲʼ ಎಂದು ಹೇಳಿದರು.
ಭಾರತ-ಯುಎಸ್ ಬಾಂಧವ್ಯ: ಭಾರತ-ಅಮೆರಿಕ ಸಂಬಂಧ ಕುರಿತ ಪ್ರಶ್ನೆಗೆ, ʻಎರಡೂ ದೇಶಗಳಲ್ಲಿ ಎಲ್ಲ ಪಕ್ಷಗಳ ಬೆಂಬಲವಿದೆ. ದೊಡ್ಡ ತಿರುವು ಕಾಣುತ್ತಿಲ್ಲ. ಮೋದಿಯವರು ಅಮೆರಿಕದಿಂದ ದೂರ ಸರಿಯುತ್ತಿದ್ದಾರೆ ಎನ್ನಿಸುವುಲ್ಲ. ನಿರಂತರತೆಯಿದೆ. ಭಾರತ-ಯುಎಸ್ ಸಂಬಂಧವು ಎರಡೂ ದೇಶಗಳಿಗೆ ಮುಖ್ಯ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ,ʼ ಎಂದು ಹೇಳಿದರು.
ಭಾರತೀಯ ಹೋರಾಟ: ʻಭಾರತದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ಬಯಸುವುದಿಲ್ಲ.ದೇಶದಲ್ಲಿನ ಪ್ರಜಾಪ್ರಭುತ್ವದ ಹೋರಾಟವು ದೇಶೀಯರ ಹೋರಾಟ. ಇದು ನಮ್ಮ ಸಮಸ್ಯೆ. ಮತ್ತು, ನಾವು ಅದನ್ನು ಪರಿಹರಿಸಿಕೊಳ್ಳುತ್ತೇವೆ. ಪ್ರಜಾಪ್ರಭುತ್ವ ಸುಭದ್ರವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತೇವೆ,ʼ ಎಂದು ಹೇಳಿದರು.
ʻಆದರೆ, ನಾವು ಗಾತ್ರದ ಕಾರಣದಿಂದ ಬೇರಾವುದೇ ಪ್ರಜಾಪ್ರಭುತ್ವಕ್ಕಿಂತ ಹೆಚ್ಚು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ದೇಶದ ಪ್ರಜಾಪ್ರಭುತ್ವಕ್ಕೆ ಜಾಗತಿಕವಾಗಿ ದೊಡ್ಡ ಸ್ಥಾನವಿದೆ. ಭಾರತೀಯ ಪ್ರಜಾಪ್ರಭುತ್ವವನ್ನು ಜಗತ್ತು ಆಸ್ತಿಯಾಗಿ ನೋಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಅಮೆರಿಕವು ಮೋದಿ ಅವರ ಜೊತೆ ಹೇಗೆ ವ್ಯವಹರಿಸಬೇಕು ಎಂದು ಸಲಹೆ ನೀಡುವುದು ನನ್ನ ಕೆಲಸವಲ್ಲ,ʼ ಎಂದು ಹೇಳಿದರು.-
ಇಸ್ರೇಲ್ ಮಾಡುತ್ತಿರುವುದು ತಪ್ಪು: ಭಾರತವು ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಜೊತೆ ನಿಂತಿದೆ. ನೀವು ಅದನ್ನು ಹೇಗೆ ಬದಲಿಸುತ್ತೀರಿ?,ʼ ಎಂಬ ಪ್ರಶ್ನೆಗೆ ʻಅಕ್ಟೋಬರ್ 7 ರಂದು ನಡೆದದ್ದು ಸಂಪೂರ್ಣವಾಗಿ ತಪ್ಪು. ಆದರೆ, ಅಮಾಯಕ ನಾಗರಿಕರ ಮೇಲೆ ಬಾಂಬ್ ದಾಳಿ, ಮಹಿಳೆಯರು ಮತ್ತು ಮಕ್ಕಳ ಹತ್ಯೆ ತಪ್ಪು ಮತ್ತು ಅದನ್ನು ಮುಂದುವರಿಯಲು ಬಿಡಬಾರದು.ನಾನು ಯಾವುದೇ ರೀತಿಯ ಹಿಂಸೆಯನ್ನು ವಿರೋಧಿಸುತ್ತೇನೆ. ಹಿಂಸೆಯು ಇಸ್ರೇಲಿಗೆ ಸಹಾಯ ಮಾಡುವುದಕ್ಕಿಂತ ಹೆಚ್ಚು ಹಾನಿ ಮಾಡುತ್ತಿದೆ,ʼ ಎಂದು ರಾಹುಲ್ ಹೇಳಿದರು.
ಲಡಾಖ್‌ನಲ್ಲಿ ಚೀನಾ ಆಕ್ರಮಣ: ʻಮೋದಿ ಅವರು ಯುಎಸ್-ಚೀನಾ ಸ್ಪರ್ಧೆಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಭಾವಿಸುತ್ತೀರಾ?,ʼ ಎಂಬ ಪ್ರಶ್ನೆಗೆ, ʻಲಡಾಖಿನಲ್ಲಿ ದೆಹಲಿಯಷ್ಟು ಗಾತ್ರದ ಭೂಮಿಯನ್ನು ಚೀನಾದ ಪಡೆಗಳು ಆಕ್ರಮಿಸಿಕೊಂಡಿವೆ. ಮಾಧ್ಯಮಗಳು ಈ ಬಗ್ಗೆ ಬರೆಯುವುದಿಲ್ಲ. ಅಮೆರಿಕದ 4,000 ಚದರ ಕಿಮೀ ಪ್ರದೇಶವನ್ನು ನೆರೆಯವರು ಆಕ್ರಮಿಸಿಕೊಂಡರೆ, ನಿಮ್ಮಸರ್ಕಾರ ಹೇಗೆ ಪ್ರತಿಕ್ರಿಯಿಸುತ್ತದೆ? ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಿದ್ದೇನೆ ಎಂದು ಹೇಳಿ ತಪ್ಪಿಸಿಕೊಳ್ಳಲು ಯಾವುದೇ ಅಧ್ಯಕ್ಷನಿಗೂ ಸಾಧ್ಯವಾಗುವುದಿಲ್ಲ. ಹೀಗಾಗಿ, ಮೋದಿ ಚೀನಾವನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ,ʼ ಎಂದು ಹೇಳಿದರು.
ಬಾಂಗ್ಲಾದಲ್ಲಿ ಹಿಂಸಾಚಾರ ನಿಲುಗಡೆ: ಬಾಂಗ್ಲಾದೇಶ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ,ʻಬಾಂಗ್ಲಾದಲ್ಲಿನ ತೀವ್ರಗಾಮಿಗಳ ಬಗ್ಗೆ ದೇಶದಲ್ಲಿ ಕಳವಳವಿದೆ ಮತ್ತು ನಾವು ಆ ಕಳವಳಗಳನ್ನು ಹಂಚಿಕೊಳ್ಳುತ್ತೇವೆ. ಬಾಂಗ್ಲಾದಲ್ಲಿ ಪರಿಸ್ಥಿತಿ ಸ್ಥಿರಗೊಳ್ಳುತ್ತದೆ ಮತ್ತು ಆಡಳಿತದಲ್ಲಿರುವ ಸರ್ಕಾರದೊಂದಿಗೆ ಸೌಹಾರ್ದ ಸಂಬಂಧ ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ,ʼ ಎಂದು ಹೇಳಿದರು.
ಹಿಂದಿನ ದಿನ ಜನಪ್ರತಿನಿಧಿಗಳೊಡನೆ ರಾಹುಲ್ ಸಭೆ ನಡೆಸಿದರು; ʻನಾವು ಬಾಂಗ್ಲಾದೇಶವನ್ನು ಬೆಳೆಸಿದ್ದೇವೆ ಮತ್ತು ಅವರು ನಮ್ಮೊಂದಿಗೆ ಮಾತನಾಡಿದ್ದಾರೆ. ನಾವು ಹಿಂಸೆಯನ್ನು ವಿರೋಧಿಸುತ್ತೇವೆ ಮತ್ತು ಅದನ್ನು ನಿಲ್ಲಿಸಲು ಬಯಸುತ್ತೇವೆ. ಹಿಂಸೆಯನ್ನು ಆದಷ್ಟು ಬೇಗ ನಿಲ್ಲಿಸುವುದು ಬಾಂಗ್ಲಾದೇಶ ಸರ್ಕಾರದ ಜವಾಬ್ದಾರಿ; ಹಿಂಸಾಚಾರ ನಿಲ್ಲಿಸುವಂತೆ ಒತ್ತಡ ಹೇರುವುದು ನಮ್ಮ ಸರ್ಕಾರದ ಜವಾಬ್ದಾರಿ,ʼ ಎಂದು ಹೇಳಿದರು.