ಸಂವಿಧಾನ ತಿದ್ದುಪಡಿಯಿಂದ ಸಂಸದೀಯ ಪ್ರಜಾಪ್ರಭುತ್ವ ಅಂತ್ಯ: ಚಿದಂಬರಂ
ಬಿಜೆಪಿ-ಆರ್‌ಎಸ್‌ಎಸ್ ಅಜೆಂಡಾದಂತೆ ಸಂವಿಧಾನವನ್ನು ತಿದ್ದುಪಡಿ ಮಾಡಿದರೆ, ಸಂಸದೀಯ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ಅಲ್ಪಸಂಖ್ಯಾತರ ಹಕ್ಕುಗಳು ಅಂತ್ಯಗೊಳ್ಳುವುದಲ್ಲದೆ, ಇಂಗ್ಲಿಷ್ ಎರಡು ಅಧಿಕೃತ ಭಾಷೆಗಳಲ್ಲಿ ಒಂದಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಮಾರ್ಚ್ 11 ರಂದು ಹೇಳಿದ್ದಾರೆ.
ಸಂವಿಧಾನವನ್ನು ತಿದ್ದುಪಡಿ ಮಾಡಲು ತಮ್ಮ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
'ಸಂವಿಧಾನ ತಿದ್ದುಪಡಿ ಬಿಜೆಪಿ ಉದ್ದೇಶ: ಚಿದಂಬರಂ ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ, ʻಸಂವಿಧಾನವನ್ನು ತಿದ್ದುಪಡಿ ಮಾಡುವ ಬಿಜೆಪಿಯ ಉದ್ದೇಶ ಎಂದಿಗೂ ರಹಸ್ಯವಾಗಿರಲಿಲ್ಲ. ಬಿಜೆಪಿ ನಾಯಕರು ಖಾಸಗಿ ಸಂಭಾಷಣೆಗಳಲ್ಲಿ ಭಾರತವು ಹಿಂದೂ ರಾಷ್ಟ್ರವಾಗಬೇಕು; ಹಿಂದಿ ದೇಶದ ಏಕೈಕ ಅಧಿಕೃತ ಭಾಷೆಯಾಗಬೇಕು. ಕೇಂದ್ರ ಸರ್ಕಾರ ಬಲಿಷ್ಠವಾಗಿರಬೇಕು ಮತ್ತು ರಾಜ್ಯ ಸರ್ಕಾರಗಳ ಮೇಲೆ ಮೇಲುಗೈ ಸಾಧಿಸಬೇಕುʼ ಎಂದು ಹೇಳುತ್ತಲೇ ಇರುತ್ತಾರೆ.
ಹೆಗ್ಡೆಯಂಥವರು ಇಂಥ ಮಾತು ಆಡುತ್ತಾರೆ ಮತ್ತು ಮಾತನ್ನು ತ್ವರಿತವಾಗಿ ನಿರಾಕರಿಸುತ್ತಾರೆ.ʻಇದು ಹಳೆಯ ತಂತ್ರʼ ಎಂದ ಚಿದಂಬರಂ, ʻಇದರಿಂದ ಉದ್ದೇಶ ಸಾಧನೆಯಾಗುತ್ತದೆ; ಬಿಜೆಪಿ ಸಂವಿಧಾನವನ್ನು ತಿದ್ದುಪಡಿ ಮಾಡಲಿದೆ ಎಂದು ಆರ್‌ಎಸ್‌ಎಸ್/ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಮುನ್ನುಗುತ್ತಾರೆʼ ಎಂದು ಹೇಳಿದರು.
ʻಆರ್‌ಎಸ್‌ಎಸ್/ಬಿಜೆಪಿ ಅಜೆಂಡಾದನ್ವಯ ಸಂವಿಧಾನವನ್ನು ತಿದ್ದುಪಡಿ ಮಾಡಿದರೆ, ಅದು ಸಂಸದೀಯ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆ ತರಲಿದೆ ಮತ್ತು ಇಂಗ್ಲಿಷ್ ಭಾಷೆ ಎರಡು ಅಧಿಕೃತ ಭಾಷೆಗಳಲ್ಲಿ ಒಂದಾಗಲಿದೆʼ ಎಂದು ಹೇಳಿದರು.
ಸ್ಪಷ್ಟನೆ ಕೋರಿದ ಬಿಜೆಪಿ: ಹೆಗ್ಡೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದಿರುವ ಬಿಜೆಪಿ ಕರ್ನಾಟಕ, ಅವರಿಂದ ಸ್ಪಷ್ಟೀಕರಣ ಕೇಳಿದೆ. ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ, ʻ ಸಂಸದ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಮತ್ತು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ.ಅವರಿಂದ ವಿವರಣೆ ಕೇಳಲಾಗಿದೆ. ಸಂವಿಧಾನವನ್ನು ಎತ್ತಿಹಿಡಿಯುವ ಅಚಲ ಬದ್ಧತೆಯನ್ನು ಬಿಜೆಪಿ ಪುನರುಚ್ಚರಿಸುತ್ತದೆʼ ಎಂದಿದೆ.ಬಿಜೆಪಿ ಮತ್ತು ಆರೆಸ್ಸೆಸ್ ಸಂವಿಧಾನವನ್ನು ಮರುಬರೆಯುವ ಮತ್ತು ನಾಶಮಾಡುವ ʻಗುಪ್ತ ಮತ್ತು ವಂಚಕʼ ಅಜೆಂಡಾವನ್ನು ಹೊಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.