Chhattisgarh 41 Naxalites, Including 32 Carrying ₹1.19 Crore Bounty, Surrender in Bijapur
x
ಪೊಲೀಸರಿಗೆ ಶರಣಾಗಿರುವ ನಕ್ಸಲರು

ಛತ್ತೀಸಗಢ: 1.19 ಕೋಟಿ ರೂ. ಬಹುಮಾನ ಘೋಷಣೆಯಾಗಿದ್ದ 32 ಮಂದಿ ಸೇರಿ 41 ನಕ್ಸಲರ ಶರಣಾಗತಿ

ಶರಣಾದ ನಕ್ಸಲರು ಸಂವಿಧಾನದಲ್ಲಿ ನಂಬಿಕೆ ಹೊಂದಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಜಾಪ್ರಭುತ್ವ ಚೌಕಟ್ಟಿನೊಳಗೆ ಘನತೆಯಿಂದ ಮತ್ತು ಸುರಕ್ಷಿತ ಜೀವನ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.


Click the Play button to hear this message in audio format

ಒಟ್ಟು 1.19 ಕೋಟಿ ರೂಪಾಯಿ ಇನಾಮು ಘೋಷಣೆಯಾಗಿದ್ದ 32 ಮಂದಿ ಸೇರಿ 41 ನಕ್ಸಲರು ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ. ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿ ಹಾಗೂ 'ಪೂನಾ ಮಾರ್ಗೆಮ್' (ಹೊಸ ದಾರಿ) ಯೋಜನೆಯಿಂದ ಪ್ರಭಾವಿತರಾಗಿ 12 ಮಹಿಳೆಯರು ಸೇರಿದಂತೆ 41 ನಕ್ಸಲರು ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾದರು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.

ಶರಣಾದವರಲ್ಲಿ ನಾಲ್ವರು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್ ನಂ.1 ಹಾಗೂ ಮಾವೋವಾದಿ ಸಂಘಟನೆಗಳ ಸದಸ್ಯರು, ಪ್ರದೇಶ ಸಮಿತಿಗಳ ಮೂವರು, 11 ಪ್ಲಟೂನ್ ಮತ್ತು ಪ್ರದೇಶ ಸಮಿತಿ ಪಕ್ಷದ ಸದಸ್ಯರು, ಇಬ್ಬರು ಪಿಎಲ್‌ಜಿಎ ಸದಸ್ಯರು, ನಾಲ್ವರು ಮಿಲಿಟಿಯಾ ಪ್ಲಟೂನ್ ಕಮಾಂಡರ್‌ಗಳು, ಒಬ್ಬ ಉಪ ಕಮಾಂಡರ್, ಆರು ಮಿಲಿಟಿಯಾ ಪ್ಲಟೂನ್ ಸದಸ್ಯರು, ಮತ್ತು ಉಳಿದವರು ನಿಷೇಧಿತ ಸಂಘಟನೆ ಸಿಪಿಐಗೆ (ಮಾವೋವಾದಿ) ಸೇರಿದವರು ಎಂದು ಯಾದವ್ ಮಾಹಿತಿ ನೀಡಿದ್ದಾರೆ.

ಪುನರ್ವಸತಿ ಮತ್ತು ನೆರವು

ಶರಣಾದ ನಕ್ಸಲರು ಸಂವಿಧಾನದಲ್ಲಿ ನಂಬಿಕೆ ಹೊಂದಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಜಾಪ್ರಭುತ್ವ ಚೌಕಟ್ಟಿನೊಳಗೆ ಘನತೆಯಿಂದ ಮತ್ತು ಸುರಕ್ಷಿತ ಜೀವನ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಶರಣಾದ ಎಲ್ಲ ನಕ್ಸಲರಿಗೆ ತಲಾ 50,000 ರೂಪಾಯಿ ಸಹಾಯಧನ ನೀಡಲಾಯಿತು. ಸರ್ಕಾರದ ನೀತಿಯ ಪ್ರಕಾರ ಅವರಿಗೆ ಪುನರ್ವಸತಿ ಯೋಜನೆಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

'ನಕ್ಸಲರು ದಾರಿತಪ್ಪಿಸುವ ಮತ್ತು ಹಿಂಸಾತ್ಮಕ ಸಿದ್ಧಾಂತಗಳನ್ನು ತ್ಯಜಿಸಿ, ಭಯವಿಲ್ಲದೆ ಸಮಾಜದ ಮುಖ್ಯವಾಹಿನಿಗೆ ಮರಳಬೇಕು. 'ಪೂನಾ ಮಾರ್ಗಮ್' ಅಭಿಯಾನವು ಶರಣಾಗುವವರಿಗೆ ಸುರಕ್ಷಿತ, ಗೌರವಾನ್ವಿತ ಮತ್ತು ಸ್ವಾವಲಂಬಿ ಭವಿಷ್ಯ ರೂಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ' ಎಂದು ಯಾದವ್ ತಿಳಿಸಿದ್ದಾರೆ.

2024ರ ಜನವರಿಯಿಂದ ಇದುವರೆಗೂ ಜಿಲ್ಲೆಯಲ್ಲಿ 790 ನಕ್ಸಲರು ಶರಣಾಗಿದ್ದಾರೆ. ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 202 ನಕ್ಸಲರು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತರಾಗಿದ್ದಾರೆ. 1,031 ನಕ್ಸಲರನ್ನು ಬಂಧಿಸಲಾಗಿದೆ ಎಂದಿದ್ದಾರೆ.

Read More
Next Story