ಚತ್ತೀಸ್‌ಗಢದಲ್ಲಿ ಐಇಡಿ ಸ್ಪೋಟ: ಇಬ್ಬರು ಎಸ್‌ಟಿಎಫ್ ಸಿಬ್ಬಂದಿ ಬಲಿ, ನಾಲ್ವರಿಗೆ ಗಾಯ
x

ಚತ್ತೀಸ್‌ಗಢದಲ್ಲಿ ಐಇಡಿ ಸ್ಪೋಟ: ಇಬ್ಬರು ಎಸ್‌ಟಿಎಫ್ ಸಿಬ್ಬಂದಿ ಬಲಿ, ನಾಲ್ವರಿಗೆ ಗಾಯ

ನಕ್ಸಲ್ ಕಾರ್ಯಾಚರಣೆಯ ಭಾಗವಾಗಿದ್ದ ಸಿಬ್ಬಂದಿ, ಘಟನೆ ಸಂಭವಿಸಿದಾಗ ಅರಣ್ಯದಿಂದ ಹಿಂತಿರುಗುತ್ತಿದ್ದರು.


ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನುಸಿಡಿಸಿದ್ದು, ವಿಶೇಷ ಕಾರ್ಯಪಡೆ (ಎಸ್‌ಟಿಎಫ್)ಯ ಇಬ್ಬರು ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಗುರುವಾರ (ಜುಲೈ 18) ತಿಳಿಸಿದ್ದಾರೆ.

ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಬಿಜಾಪುರ-ಸುಕ್ಮಾ-ದಂತೇವಾಡ ಜಿಲ್ಲೆಗಳ ಅರಣ್ಯದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಮುಗಿಸಿ ಹಿಂದಿರುಗುತ್ತಿದ್ದಾಗ, ತಾರೆಮ್ ಪ್ರದೇಶದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ.

ಎಸ್‌ಟಿಎಫ್ ಕಾನ್‌ಸ್ಟೆಬಲ್‌ಗಳಾದ ರಾಯ್‌ಪುರ ನಿವಾಸಿ ಭರತ್ ಸಾಹು ಮತ್ತು ನಾರಾಯಣಪುರ ಜಿಲ್ಲೆಯ ಸತ್ಯೆರ್ ಸಿಂಗ್ ಕಾಂಗೆ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.

ರಾಜ್ಯ ಪೊಲೀಸ್‌ನ ಘಟಕಗಳಾದ ಎಸ್‌ಟಿಎಫ್ ಮತ್ತು ಜಿಲ್ಲಾ ರಿಸರ್ವ್ ಗಾರ್ಡ್‌ ಸಿಬ್ಬಂದಿ , ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಅದರ ಘಟಕವಾದ ಕೋಬ್ರಾ ಪಡೆಗಳು ದರ್ಭಾ ಮತ್ತು ಪಶ್ಚಿಮ ಬಸ್ತಾರ್‌ ನಲ್ಲಿ ನಕ್ಸಲರ ಉಪಸ್ಥಿತಿ ಕುರಿತ ಮಾಹಿತಿ ಆಧರಿಸಿ, ಮಂಗಳವಾರ ಜಂಟಿ ಕಾರ್ಯಾಚರಣೆ ನಡೆಸಿದವು. ಕಾರ್ಯಾಚರಣೆ ಮುಗಿಸಿ ವಾಪಸಾಗುತ್ತಿದ್ದಾಗ, ಐಇಡಿ ಸ್ಪೋಟ ಸಂಭವಿಸಿದೆ.

ಘಟನೆ ನಂತರ ಹೆಚ್ಚುವರಿ ಪಡೆಗಳು ಪ್ರದೇಶಕ್ಕೆ ಧಾವಿಸಿದ್ದು, ಗಾಯಗೊಂಡ ಸಿಬ್ಬಂದಿಯನ್ನು ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story