
ಚೆನ್ನೈ ಮೆಟ್ರೋ ನಿರ್ಮಾಣ ದುರಂತ: ಗರ್ಡರ್ ಕುಸಿತ, ಬೈಕ್ ಸವಾರ ಸಾವು
ಸಂಚಾರ ದಟ್ಟಣೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಸುಮಾರು ಒಂದು ಗಂಟೆ ವಿಳಂಬವಾಯಿತು. ರಾತ್ರಿ 10:40ಕ್ಕೆ ತೆರವು ಕಾರ್ಯ ಆರಂಭವಾಗಿದ್ದು, 11 ಗಂಟೆಗೆ ಭಾರೀ ಕ್ರೇನ್‌ಗಳು ಸ್ಥಳಕ್ಕೆ ತಲುಪಿದ್ದವು.
ಚೆನ್ನೈ ಮೆಟ್ರೋ ರೈಲ್‌ನ ಎರಡನೇ ಹಂತದ ನಿರ್ಮಾಣ ಕಾಮಗಾರಿ ವೇಳೆ ಸಂಭವಿಸಿದ ದುರಂತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಗುರುವಾರ (ಜೂನ್ 12) ರಾತ್ರಿ ಸುಮಾರು 9.30ಕ್ಕೆ ಪೂನಮಲ್ಲೆ-ಮೌಂಟ್ ಕಾರಿಡಾರ್‌ನ ಮನಪಕ್ಕಂ ಬಳಿಯ ಮೌಂಟ್ ಪೂನಮಲ್ಲೆ ರಸ್ತೆಯಲ್ಲಿ ಎರಡು ಐ-ಗರ್ಡರ್‌ಗಳು ಕುಸಿದು ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ (CMRL) ತಿಳಿಸಿದೆ.
ಸಿಎಂಆರ್ಎಲ್ ನೀಡಿರುವ ಹೇಳಿಕೆಯ ಪ್ರಕಾರ, "ಮನಪಕ್ಕಂನ ಎಲ್ & ಟಿ ಹೆಡ್ ಆಫೀಸ್ ಮುಖ್ಯ ಗೇಟ್ ಬಳಿ ಒಂದು ವಾರದ ಹಿಂದೆ ಸ್ಥಾಪಿಸಲಾಗಿದ್ದ ಎರಡು ಐ-ಗಿರ್ಡರ್‌ಗಳು, ಒಂದು ಎ-ಫ್ರೇಮ್ ಸಪೋರ್ಟ್ ಜಾರಿದ ಕಾರಣ ಕುಸಿದಿವೆ" ಎಂದು 'ಎಕ್ಸ್' (ಹಿಂದಿನ ಟ್ವಿಟರ್) ಮೂಲಕ ಮಾಹಿತಿ ನೀಡಿದೆ. ರಸ್ತೆಯಲ್ಲಿ ಸಂಚಾರವನ್ನು ತೆರೆಯಲು ಬಿದ್ದ ಅವಶೇಷಗಳನ್ನು ತುರ್ತಾಗಿ ತೆರವುಗೊಳಿಸಲಾಗುತ್ತಿದೆ ಮತ್ತು ಕುಸಿತದ ಕಾರಣವನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುವುದು ಎಂದು ಸಿಎಂಆರ್ಎಲ್ ತಿಳಿಸಿದೆ.
ಘಟನೆಗೆ ಕಾರಣವೇನು?
ಎ-ಫ್ರೇಮ್ ಎನ್ನುವುದು ಕಾಂಕ್ರೀಟ್ ಗಿರ್ಡರ್‌ಗಳನ್ನು ಅವುಗಳನ್ನು ಶಾಶ್ವತವಾಗಿ ಜೋಡಿಸುವವರೆಗೆ ತಾತ್ಕಾಲಿಕವಾಗಿ ಹಿಡಿದಿಟ್ಟುಕೊಳ್ಳಲು ಬಳಸುವ ಉಕ್ಕಿನ ರಚನೆಯಾಗಿದೆ. ಈ ಘಟನೆಯಲ್ಲಿ, ಎ-ಫ್ರೇಮ್ ಕುಸಿದಿದ್ದರಿಂದ ಗಿರ್ಡರ್‌ಗಳು ರಸ್ತೆಗೆ ಬಿದ್ದಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೈಕ್ ಸವಾರ ಕುಸಿದ ರಚನೆಯ ಅಡಿಯಲ್ಲಿ ಸಿಲುಕಿಕೊಂಡರು. ಸಂಚಾರ ದಟ್ಟಣೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಸುಮಾರು ಒಂದು ಗಂಟೆ ವಿಳಂಬವಾಯಿತು. ರಾತ್ರಿ 10:40ಕ್ಕೆ ತೆರವು ಕಾರ್ಯ ಆರಂಭವಾಗಿದ್ದು, 11 ಗಂಟೆಗೆ ಭಾರೀ ಕ್ರೇನ್‌ಗಳು ಸ್ಥಳಕ್ಕೆ ತಲುಪಿದ್ದವು.
ತನಿಖೆ ಮತ್ತು ಸುರಕ್ಷತಾ ಪರಿಶೀಲನೆ
ಇಂಟರ್‌ನ್ಯಾಷನಲ್ ಸೇಫ್ಟಿ ಪ್ರೊಫೆಷನಲ್ಸ್ ಅಂಡ್ ರಿಸರ್ಚ್ ಆರ್ಗನೈಸೇಶನ್ (ISPRO) ಈ ಘಟನೆಗೆ ತಕ್ಷಣ ಮತ್ತು ಸ್ವತಂತ್ರ ತನಿಖೆಗೆ ಒತ್ತಾಯಿಸಿದೆ. ಯೋಜನಾ ಇಂಜಿನಿಯರ್‌ಗಳು ಮತ್ತು ಸುರಕ್ಷತಾ ಅಧಿಕಾರಿಗಳ ಜವಾಬ್ದಾರಿಯನ್ನು ಖಚಿತಪಡಿಸಬೇಕು ಎಂದು ISPRO ಆಗ್ರಹಿಸಿದೆ. ಈ ಸಾವು "ತಡೆಗಟ್ಟಬಹುದಾದದ್ದು" ಎಂದು ISPRO ಅಭಿಪ್ರಾಯಪಟ್ಟಿದ್ದು, CMRL ನ ಎಲ್ಲಾ ಎರಡನೇ ಹಂತದ ನಿರ್ಮಾಣ ಸೈಟ್‌ಗಳಲ್ಲಿ ಕಡ್ಡಾಯ ಮೂರನೇ-ಪಕ್ಷದ ಸುರಕ್ಷತಾ ಲೆಕ್ಕಪರಿಶೋಧನೆಗೆ (ಆಡಿಟ್) ಕರೆ ನೀಡಿದೆ. ತಮಿಳುನಾಡು ಸರ್ಕಾರ ಮತ್ತು CMRL ಈ ಕುರಿತು ತ್ವರಿತ ಮತ್ತು ಪಾರದರ್ಶಕ ಕ್ರಮ ಕೈಗೊಳ್ಳಬೇಕೆಂದು ISPRO ಒತ್ತಾಯಿಸಿದೆ.