ಮೀನುಗಳಿಗೆ ರಾಸಾಯನಿಕ ಬೆರಕೆ ನಿರಂತರ; ಪತ್ತೆ ಹಚ್ಚುವುದು ಹೇಗೆ, ತಿನ್ನುವವರ ಪಾಡೇನು?
ಶವಾಗಾರಗಳಲ್ಲಿ ಹೆಣ ಕೆಡದಂತೆ ಬಳಸುವ ಫಾರ್ಮಾಲಿನ್ ಹಾಗೂ ಐಸ್ ಕರಗದಂತೆ ನೋಡಿಕೊಳ್ಳುವ ಅಮೋನಿಯಾ ಬಳಕೆಯ ಬಹಿರಂಗಗೊಂಡು ವರ್ಷಗಳೇ ಕಳೆದಿವೆ. ಪ್ರಕರಣ ಒಂದು ಬಾರಿಗೆ ಬೆಳಕಿಗೆ ಬಂದಾಗ ಜನರಿಗೆ ಗಾಬರಿಯಾಗಿದ್ದೂ ಸುಳ್ಳಲ್ಲ.
ಕರ್ನಾಟಕದ ಕರಾವಳಿ ಪ್ರದೇಶಗಳ ಸೀಮಿತವಾಗಿದ್ದ ಮೀನಿನ ಖಾದ್ಯಗಳು ಈಗ ರಾಜ್ಯದೆಲ್ಲೆಡೆ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಫ್ರೈ, ಸಾರು, ಟಿಕ್ಕಾ, ಕಬಾಬ್, ಮಸಾಲ ಸೇರಿದಂತೆ ನಾನಾ ಬಗೆಯ ಭಕ್ಷ್ಯಗಳನ್ನು ಮಾಡಲು ಸಾಧ್ಯ ಎಂಬುದು ಇದಕ್ಕೆ ಮೊದಲ ಕಾರಣವಾದರೆ ಮೀನಿನಲ್ಲಿ ಹೇರಳವಾಗಿ ದೊರೆಯುವ ಪ್ರೊಟೀನ್ ಹಾಗೂ ಒಮೆಗಾ ಎಲ್ಲರೂ ಮೆಚ್ಚುವಂತೆ ಮಾಡಿದೆ. ಈ ವ್ಯಾಪಕ ಬೇಡಿಕೆಯು ಮತ್ತೊಂದು ಸಮಸ್ಯೆಯನ್ನು ತಂದೊಡ್ಡಿದೆ. ಅದೇನೆಂದರೆ ಕರಾವಳಿ ಪ್ರದೇಶದಿಂದ ಅಥವಾ ಬೇರೆ ರಾಜ್ಯಗಳಿಂದ ಮೀನು ತರಿಸುವ ವೇಳೆ ಅದು ಕೆಡದಂತೆ ರಾಸಾಯನಿಕಗಳ ಬಳಕೆಯಾಗುತ್ತಿವೆ. ಪ್ರಮುಖವಾಗಿ ಅಮೋನಿಯಾ ಮತ್ತು ಫಾರ್ಮಾಲಿನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಸಮಸ್ಯೆ ಕೇರಳದಲ್ಲಿ ಅತ್ಯಂತ ಗರಿಷ್ಠ ಪ್ರಮಾಣದಲ್ಲಿದೆ.
ಶವಾಗಾರಗಳಲ್ಲಿ ಶವಗಳು ಕೆಡದಂತೆ ಬಳಸುವ ಫಾರ್ಮಾಲಿನ್ ಹಾಗೂ ಐಸ್ ಕರಗದಂತೆ ನೋಡಿಕೊಳ್ಳುವ ಅಮೋನಿಯಾಗಳನ್ನು ಮೀನುಗಳ ಸಾಗಾಟದ ವೇಳೆ ಬಳಸುವ ಮಾಹಿತಿ ಬಹಿರಂಗಗೊಂಡು ವರ್ಷಗಳೇ ಕಳೆದಿವೆ. ಪ್ರಕರಣ ಒಂದು ಬಾರಿಗೆ ಬೆಳಕಿಗೆ ಬಂದಾಗ ಜನರಿಗೆ ಗಾಬರಿಯಾಗಿದ್ದೂ ಸುಳ್ಳಲ್ಲ. ಆದರೆ, ನಂತರದಲ್ಲಿ ಏನೂ ನಡೆದಿಲ್ಲ ಎಂಬುದೇ ಈ ಕ್ಷಣದ ಆತಂಕ.
ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ನೂರಾರು ರೂಪಾಯಿ ಕೊಟ್ಟು ತಿನ್ನುವ ಮೀನುಗಳು ಸುರಕ್ಷಿತವಾಗದೇ ಇದ್ದರೆ ಹೇಗೆ ಎಂಬುದೇ ಜಾಗೃತ ನಾಗರಿಕರ ಪ್ರಶ್ನೆ. ಸರ್ಕಾರ ಇದಕ್ಕೊಂದು ಪರಿಹಾರ ಕಂಡು ಹಿಡಿದರೆ ಉತ್ತಮ ಎಂಬುದೂ ಅವರ ಅಭಿಪ್ರಾಯ.
ಹೋಟೆಲ್‌ಗಳಲ್ಲಿ ಬಡಿಸುವ ಮೀನುಗಳಿಗೆ ರಾಸಾಯನಿಕ ಮಿಶ್ರಣವಾದರೆ ಪತ್ತೆ ಹಚ್ಚುವುದು ಕಷ್ಟ. ಆದರೆ ಮಾರುಕಟ್ಟೆಯಿಂದ ಮೀನು ತರುವಾಗ ಗ್ರಾಹಕರೇ ಅದರ ಸತ್ಯಾಸತ್ಯತೆ ಕಂಡು ಹಿಡಿದರೆ ಉತ್ತಮ. ಹಸಿ ಮೀನು ತರುವಾಗ ಅದಕ್ಕೆ ರಾಸಾಯನಿಕಗಳನ್ನು ಮಿಶ್ರಣ ಮಾಡಿದ್ದಾರೆಯೇ ಎಂದು ಕಂಡುಕೊಳ್ಳುವುದಕ್ಕೆ ಕೇರಳದ ಕೊಚ್ಚಿ ಮೂಲದ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ (ಸಿಐಎಫ್‌ಟಿ) ಕಿಟ್ ಒಂದನ್ನು ತಯಾರಿಸಿತ್ತು. ಅದನ್ನು ಮೀನಿನ ಮೇಲೆ ಇಟ್ಟರೆ ಅದು ಪರಿವರ್ತನೆಗೊಳ್ಳುವ ಬಣ್ಣದ ಆಧಾರದಲ್ಲಿ ಯಾವ ರಾಸಾಯನಿಕ ಎಂಬುದನ್ನು ಅರಿಯಬಹುದಾಗಿತ್ತು. ಆದರೆ, ಅದು ಸಾರ್ವಜನಿಕರಿಗೆ ಲಭ್ಯ ಇಲ್ಲ ಎಂಬುದೇ ಬೇಸರದ ಸಂಗತಿ .
ಕೇರಳದಲ್ಲಿ ಪತ್ತೆ, ಆದರೂ ಪರಿಹಾರ ಇಲ್ಲ
ಮೀನಿಗೆ ರಾಸಾಯನಿಕ ಬಳಕೆಯನ್ನು ಪತ್ತೆ ಹಚ್ಚಿದ್ದು ಕೇರಳ. ಆದರೆ, ಆ ರಾಜ್ಯದಲ್ಲೂ ಅದಕ್ಕೊಂದು ಪರಿಹಾರ ದೊರಕಿಲ್ಲ. ಮೀನುಗಳನ್ನು ಕಬಳಿಸುವವರಲ್ಲಿ ಕೇರಳದವರೇ ಚಾಂಪಿಯನ್‌ಗಳು. ಹೀಗಾಗಿ ಆ ರಾಜ್ಯಕ್ಕೆ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ಗುಜರಾತ್‌ನಿಂದ ಮೀನುಗಳು ಸರಬರಾಜು ಆಗುತ್ತವೆ. ಇಲ್ಲಿಂದ ಹೋಗುವ ವೇಳೆ ಮೀನು ಕೆಡದಂತೆ ರಾಸಾಯನಿಕ ಮಿಶ್ರಣ ಮಾಡುವುದು ಮಾಮೂಲಿಯಾಗಿದೆ. ಇದು ವರ್ಷಗಳ ಹಿಂದೆ ಕಂಡು ಬಂದ ವಿಷಯ.
ಕೇರಳದ ಮೀನುಗಾರಿಕೆ ಸಚಿವ ಸಾಜಿ ಚೆರಿಯನ್ ಅವರ ಪ್ರಕಾರ, ರಾಜ್ಯವು ತನ್ನ ದೈನಂದಿನ 2,281 ಟನ್ ಅಗತ್ಯವನ್ನು ಪೂರೈಸಲು ದಿನಕ್ಕೆ ಸರಾಸರಿ 539 ಟನ್ ಮೀನುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆದಾಗ್ಯೂ ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಎಂಎಫ್ಆರ್‌ಐ) ಪ್ರಕಾರ ರಾಜ್ಯಕ್ಕೆ ಶೇಕಡಾ 30 ಮೀನುಗಳ ಕೊರತೆ ಎನ್ನುತ್ತಿದೆ.
ಸಮೀಕ್ಷೆ ಅಗತ್ಯ
ಅಮೋನಿಯಾ ಮತ್ತು ಫಾರ್ಮಾಲಿನ್‌ಗಳನ್ನುಅಂಗಡಿಗಳಿಗೆ ಮೀನುಗಳನ್ನು ಸರಬರಾಜು ಮಾಡುವಾಗ ಮಿಶ್ರಣ ಮಾಡಿರುತ್ತಾರೆ. ಮೀನುಗಳನ್ನು ಸಂರಕ್ಷಿಸಲು ಬಳಸುವ ಮಂಜುಗಡ್ಡೆ ಕರಗುವಿಕೆ ನಿಧಾನಗೊಳಿಸುವ ಅಮೋನಿಯಾ ಬಾಯಿ ಮತ್ತು ಹೊಟ್ಟೆ ಹುಣ್ಣುಗಳಿಗೆ ಕಾರಣವಾಗಬಹುದು. ಫಾರ್ಮಾಲ್ಡಿಹೈಡ್ (ಮೃತ ದೇಹಗಳು ಕೊಳೆಯುವುದನ್ನು ತಡೆಯಲು ಶವಾಗಾರಗಳಲ್ಲಿ ಬಳಸುತ್ತಾರೆ) ಸ್ನಾಯು ಸಮಸ್ಯೆಗಳು, ಕ್ಯಾನ್ಸರ್ ಮತ್ತು ಸಾವಿಗೂ ಈ ಅಪಾಯಕಾರಿ ರಾಸಾಯನಿಕ ಕಾರಣವಾಗಬಹುದು.
ಈ ರಾಸಾಯನಿಕಗಳಿಂದ ಮೀನುಗಳ ಕಲಬೆರಕೆ ದೊಡ್ಡ ಪ್ರಮಾಣದಲ್ಲಿ ಮುಂದುವರಿಯುತ್ತಿದೆ. ಇದು ಜನರಿಗೆ ಉಂಟುಮಾಡುವ ಹಾನಿಯ ಪ್ರಮಾಣವನ್ನು ನಿರ್ಧರಿಸಲು ಸಮೀಕ್ಷೆಯ ಅಗತ್ಯವಿದೆ" ಎಂದು ತಿರುವನಂತಪುರಂನ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ಪ್ರಾಂಶುಪಾಲ ಮತ್ತು ಪರಿಸರ ಆರೋಗ್ಯದ ಪ್ರಸಿದ್ಧ ತಜ್ಞ ಡಾ.ಕೇಶವನ್ ರಾಜಶೇಖರನ್ ನಾಯರ್ ʼದ ಫೆಡರಲ್;ಗೆ ತಿಳಿಸಿದ್ದಾರೆ. ಇಲ್ಲಿ ಸಮಸ್ಯೆ ಏನೆಂದರೆ ರೋಗ ಈ ಎರಡು ರಾಸಾಯನಿಕಗಳಿಂದ ಬಂದಿದೆಯೇ ಎಂಬುದನ್ನು ಸಾಬೀತು ಮಾಡಲು ಸಾಧ್ಯವೇ ಇಲ್ಲ.
ತಾಜಾ ಮೀನು ತಿನ್ನಿ
ನೀವು ಆರೋಗ್ಯವಾಗಿರಲು ಬಯಸಿದರೆ ನೀವು ಮಾಡಬಹುದಾದ ಸುಲಭ ಉಪಾಯವೆಂದರೆ ಸ್ಥಳೀಯವಾಗಿ ಹಿಡಿದ ಮೀನುಗಳನ್ನು ಮಾತ್ರ ಖರೀದಿಸುವುದು. ಸಮುದ್ರದ ಬದಿಯಲ್ಲಿರುವ ರೆಸ್ಟೋರೆಂಟ್ ಗಳಲ್ಲಿ ಅಥವಾ ತಾಜಾ ಮೀನುಗಳನ್ನು ಪೂರೈಸುವ ಹೋಟೆಲ್‌ಗಳಲ್ಲಿ ಊಟ ಮಾಡುವುದು.
ರಾಸಾಯನಿಕ ತುಂಬಿದ ಮೀನುಗಳಿಗೆ ಬಲಿಯಾಗದಂತೆ ಜನರನ್ನು ಉಳಿಸಲು ಸರ್ಕಾರ ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಜನಪ್ರಿಯಗೊಳಿಸುವುದು. ಬಳಸಲು ಸುಲಭವಾದ ಮತ್ತು ಪ್ರತಿ ಪರೀಕ್ಷೆಗೆ ಕೇವಲ 2 ರೂ.ಗಳ ವೆಚ್ಚದ ಈ ಕಿಟ್‌ಗಳನ್ನು ಕೊಚ್ಚಿ ಮೂಲದ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ (ಸಿಐಎಫ್‌ಟಿ) ಐದು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿದೆ. ಮೀನಿನ ಮೇಲೆ ಕಿಟ್‌ನಲ್ಲಿರುವ ಬಿಳಿ ಕಾಗದದ ಪಟ್ಟಿಯನ್ನು ಇಟ್ಟರೆ ಫಾರ್ಮಾಲ್ಡಿಹೈಡ್ ಇದ್ದರೆ 30 ಸೆಕೆಂಡುಗಳಲ್ಲಿ ನೀಲಿ ಬಣ್ಣಕ್ಕೆ ಮತ್ತು ಅಮೋನಿಯಾ ಇದ್ದರೆ ಹಸಿರು ಬಣ್ಣಕ್ಕೆ ತಿರುಗುತ್ತದೆ.
'ಸಿಐಎಫ್‌ಟಿ ಕಿಟ್'ಗಳನ್ನು ಪ್ರಸ್ತುತ ಆಹಾರ ಭದ್ರತಾ ಅಧಿಕಾರಿಗಳು ಮಾತ್ರ ಬಳಸುತ್ತಿದ್ದಾರೆ. ಅವರು ಎಷ್ಟು ಬಳಸುತ್ತಾರೆ ಎಂಬುದು ಗೊತ್ತಿಲ್ಲ. ಇನ್ನು ಗ್ರಾಹಕರಿಗೆ ಕಿಟ್‌ಗಳ ಬಗ್ಗೆ ಹೆಚ್ಚಾಗಿ ತಿಳಿದೇ ಇಲ್ಲ. ಸಿಐಎಫ್‌ಟಿ ಐದು ವರ್ಷದ ಹಿಂದೆ ತಂತ್ರಜ್ಞಾನವನ್ನು ಮುಂಬೈ ಫಾರ್ಮಾಸ್ಯುಟಿಕಲ್ ಕಂಪನಿಗೆ ನೀಡಿತ್ತು. ಆದರೆ ಅವುಗಳನ್ನು ತಯಾರಿಸುವ ಕಂಪನಿಯ ಅದರ ಕಡೆಗೆ ಹೆಚ್ಚು ಗಮನ ಕೊಟ್ಟಿಲ್ಲ.
ಮೀನನ್ನು ಚೆನ್ನಾಗಿ ತೊಳೆದು ಅಡುಗೆ ಮಾಡುವುದರಿಂದ ರಾಸಾಯನಿಕ ಬೆರಕೆಯ ಪರಿಣಾಮವನ್ನು ಮಾತ್ರ ಕಡಿಮೆ ಮಾಡಬಹುದು. ಆದರೆ ಪೂರ್ಣ ಪ್ರಮಾಣದಲ್ಲಿ ನಿವಾರಣೆ ಆಗಿದೆ ಎಂದು ಹೇಳಲು ಸಾಧ್ಯಿಇ. ಅಡುಗೆಯ ಬಿಸಿಗೆ ಈ ರಾಸಾಯನಿಕಗಳನ್ನು ಹೆಚ್ಚು ಹಾನಿಕಾರಕವಾಗಿ ಬದಲಾಗಬಹುದು "ಎಂದು ಸಿಐಎಫ್‌ಟಿ ನಿರ್ದೇಶಕ ಡಾ.ಜಾರ್ಜ್ ನಿನಾನ್ ಫೆಡರಲ್‌ಗೆ ತಿಳಿಸಿದ್ದಾರೆ.