
ಮುಂಬೈನಲ್ಲಿ ರಾಸಾಯನಿಕ ಸೋರಿಕೆ ದುರಂತ: ಒಬ್ಬರ ಸಾವು, ಇಬ್ಬರ ಸ್ಥಿತಿ ಗಂಭೀರ
ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (MIDC) ವ್ಯಾಪ್ತಿಯ ಭಂಗರವಾಡಿ ಪ್ರದೇಶದ ಎರಡು ಅಂತಸ್ತಿನ ಕಟ್ಟಡವೊಂದರಲ್ಲಿ ಶನಿವಾರ ಸಂಜೆ 4.55ರ ಸುಮಾರಿಗೆ ಈ ಘಟನೆ ನಡೆದಿದೆ.
ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ಕೈಗಾರಿಕಾ ವಲಯದಲ್ಲಿ (MIDC) ಶನಿವಾರ ಸಂಜೆ ಸಂಭವಿಸಿದ ರಾಸಾಯನಿಕ ಸೋರಿಕೆ (Chemical Leak) ಘಟನೆಯಲ್ಲಿ 20 ವರ್ಷದ ಯುವಕನೊಬ್ಬ ಮೃತಪಟ್ಟಿದ್ದು, ಹದಿಹರೆಯದ ಬಾಲಕ ಸೇರಿದಂತೆ ಇಬ್ಬರು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ.
ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (MIDC) ವ್ಯಾಪ್ತಿಯ ಭಂಗರವಾಡಿ ಪ್ರದೇಶದ ಎರಡು ಅಂತಸ್ತಿನ ಕಟ್ಟಡವೊಂದರಲ್ಲಿ ಶನಿವಾರ ಸಂಜೆ 4.55ರ ಸುಮಾರಿಗೆ ಈ ಘಟನೆ ನಡೆದಿದೆ. ಸೋರಿಕೆಯಾದ ರಾಸಾಯನಿಕ ಯಾವುದು ಎಂಬುದು ಇನ್ನೂ ಪತ್ತೆಯಾಗಿಲ್ಲ.
ವಿಷಾನಿಲ ಸೇವನೆಯಿಂದ ಸಾವು-ನೋವು
ರಾಸಾಯನಿಕ ಸೋರಿಕೆಯಿಂದಾಗಿ ಉಂಟಾದ ವಿಷಕಾರಿ ಅನಿಲವನ್ನು ಸೇವಿಸಿದ ಪರಿಣಾಮ ಸ್ಥಳದಲ್ಲಿದ್ದ ಮೂವರ ಆರೋಗ್ಯ ಹದಗೆಟ್ಟಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಅವರನ್ನು ಸಮೀಪದ ಹೋಲಿ ಸ್ಪಿರಿಟ್ ಆಸ್ಪತ್ರೆಗೆ ರವಾನಿಸಿದರು. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಅಹ್ಮದ್ ಹುಸೇನ್ (20) ಎಂಬ ಯುವಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಉಳಿದಂತೆ ನೌಶಾದ್ ಅನ್ಸಾರಿ (28) ಮತ್ತು ಸಬಾ ಶೇಖ್ (17) ಎಂಬುವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯು (ICU) ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (NDRF) ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತಕ್ಕೆ ಕಾರಣವೇನು ಮತ್ತು ಯಾವ ರಾಸಾಯನಿಕ ಸೋರಿಕೆಯಾಗಿದೆ ಎಂಬ ಬಗ್ಗೆ ಪೊಲೀಸರು ಮತ್ತು ತಜ್ಞರು ತನಿಖೆ ನಡೆಸುತ್ತಿದ್ದಾರೆ.

