ಪೂಜಾ ಸ್ಥಳಗಳ ಕಾಯ್ದೆಯ ಬಗ್ಗೆ 'ಸುಪ್ರೀಂ' ನಿಲುವು ಅನಾರೋಗ್ಯಕರ; ನ್ಯಾಯಮೂರ್ತಿ ಚೆಲಮೇಶ್ವರ್
ಆಗಸ್ಟ್ 15, 1947ರಂತೆ ಧಾರ್ಮಿಕ ಸ್ಥಳಗಳ ಸ್ವರೂಪ ಬದಲಾಯಿಸುವುದನ್ನುನಿಷೇಧಿಸುವ ಪೂಜಾ ಸ್ಥಳಗಳ ಕಾಯ್ದೆ 1991ರ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ದೃಷ್ಟಿಕೋನ ಬದಲಾಯಿಸಿದೆ ಎಂದು ನ್ಯಾಯಮೂರ್ತಿ ಚೆಲಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಾರ್ಥನಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಜಸ್ಟಿಸ್ ಚೆಲಮೇಶ್ವರ್ ಟೀಕಿಸಿದ್ದಾರೆ. "ಯಾವುದೇ ನಿರ್ಧಾರ ಅಥವಾ ತೀರ್ಪನ್ನು ರದ್ದುಗೊಳಿಸುವ ಅಧಿಕಾರ ಸುಪ್ರೀಂ ಕೋರ್ಟ್ಗೆ ಇದೆ. ಅದಕ್ಕೊಂದು ಸ್ಪಷ್ಟ ಕಾರಣವಿರಬೇಕು ಮತ್ತು ಹಳೆಯ ನಿರ್ಧಾರವನ್ನು ರದ್ದುಗೊಳಿಸಿದಕ್ಕೆ ವಿವರಣೆ ಕಡ್ಡಾಯ" ಎಂದು ಅವರು ದ ಫೆಡರಲ್ಗೆ ತಿಳಿಸಿದ್ದಾರೆ. ಭಾರತದಲ್ಲಿ ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ಕೋರ್ಟ್ಗಳು ಅನುಮತಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಇದು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಭಾವ ಎಂಬುದಾಗಿ ಅವರು ವ್ಯಾಖ್ಯಾನಿಸಿದ್ದಾರೆ.
ಆಗಸ್ಟ್ 15, 1947ರಂತೆ ಧಾರ್ಮಿಕ ಸ್ಥಳಗಳ ಸ್ವಭಾವವನ್ನು (ಸ್ವರೂಪ) ಬದಲಾಯಿಸುವುದನ್ನು ನಿರ್ಬಂಧಿಸುವ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ 1991ರ ಬಗ್ಗೆ ಸುಪ್ರೀಂ ಕೋರ್ಟ್ ಇದ್ದಕ್ಕಿದ್ದಂತೆ ತನ್ನ ದೃಷ್ಟಿಕೋನ ಬದಲಾಯಿಸಿದೆ ಎಂದು ನ್ಯಾಯಮೂರ್ತಿ ಚೆಲಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಜಾರಿಯಲ್ಲಿದ್ದ ಕಾನೂನುಗಳನ್ನು ಮಾರ್ಪಾಟು ಮಾಡಲು ಒಪ್ಪುವಾಗ ದೊಡ್ಡ ಸಾಂವಿಧಾನಿಕ ಪೀಠವು ಅರ್ಜಿ ಆಲಿಸಬೇಕಾಗಿತ್ತು. "ದುರದೃಷ್ಟವಶಾತ್, ಇಬ್ಬರು ನ್ಯಾಯಾಧೀಶರ ಪೀಠವು ರಾಷ್ಟ್ರೀಯ ಪ್ರಾಮುಖ್ಯತೆಯ ಇಂತಹ ವಿಷಯಗಳ ಬಗ್ಗೆ ತೀರ್ಪುಗಳನ್ನು ನೀಡಿದ್ದಾರೆ. ಈ ಪ್ರವೃತ್ತಿ ಯಾವುದೇ ಸಂದರ್ಭದಲ್ಲೂ ಸರಿಯಲ್ಲ" ಎಂದು ಅವರು ಹೇಳಿದ್ದಾರೆ.
ಮೇ 20, 2022ರಂದು ವಾರಣಾಸಿಯ ಜ್ಞಾನವ್ಯಾಪಿ ಮಸೀದಿಗೆ ಸಂಬಂಧಿಸಿದ ವಿವಾದದ ವಿಚಾರಣೆಯ ಸಮಯದಲ್ಲಿ ಸುಪ್ರೀಂ ಕೋರ್ಟ್ ಕೆಲವೊಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತು. ಪೂಜಾ ಸ್ಥಳಗಳ ಮೂಲ ಧಾರ್ಮಿಕ ಸ್ವರೂಪವನ್ನು ಅರಿಯುವ ಪ್ರಕ್ರಿಯೆಯನ್ನು ಪೂಜಾ ಸ್ಥಳಗಳ ಕಾಯ್ದೆಯಡಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು. ಜುಲೈ 2023ರಲ್ಲಿ, ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿದ್ದ ಪ್ರಕರಣವನ್ನು ಮುಂದೂಡಿತ್ತು ಮತ್ತು ಕೇಂದ್ರ ಸರ್ಕಾರಕ್ಕೆ ತನ್ನ ನಿಲುವು ಸ್ಪಷ್ಟಪಡಿಸಲು ಅಕ್ಟೋಬರ್ 31, 2023 ರವರೆಗೆ ಸಮಯ ನೀಡಿತ್ತು. ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿಗಳ ಬಗ್ಗೆ ತನ್ನ ನಿಲುವನ್ನು ತಿಳಿಸುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಹೇಳಿತ್ತು.
ಸುಪ್ರೀಂ ಕೋರ್ಟ್ ತನ್ನ ನಿಲುವು ಬದಲಾಯಿಸಿದ್ದರಿಂದ ದೇಶದ ವಿವಿಧ ಭಾಗಗಳಲ್ಲಿನ ನ್ಯಾಯಾಲಯಗಳು ಮಸೀದಿಗಳು ಮತ್ತು ಇತರ ಧಾರ್ಮಿಕ ಪೂಜಾ ಸ್ಥಳಗಳ ಸಮೀಕ್ಷೆಗೆ ಒಪ್ಪಿಗೆ ನೀಡುತ್ತಿವೆ ಎಂಬುದು ಅವರ ಮಾತಿನ ಇಂಗಿತ
ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 1991ರ ನಿಬಂಧನೆಗಳನ್ನು ಪಾಲಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಲು ಕೋರಿ ಇಬ್ಬರು ಅರ್ಜಿದಾರರು ಕಳೆದ ವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಧಾರ್ಮಿಕ ರಚನೆಗಳು ಅಥವಾ ಮಸೀದಿಗಳ ಸಮೀಕ್ಷೆಗಳನ್ನು 1991ರ ಕಾಯ್ದೆಗೆ ವಿರುದ್ಧ ನಡೆಸುವುದಿಲ್ಲ ಎಂಬುದನ್ನು ಖಾತ್ರಿ ಪಡಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿತ್ತು. ಅಲ್ಲದೆ ನ್ಯಾಯಾಲಯಗಳು ಹೊರಡಿಸಿದ ಆದೇಶಗಳನ್ನು ರಾಜ್ಯಗಳು ಜಾರಿಗೆ ತರಬಾರದು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಇತ್ತೀಚೆಗೆ, ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಮೊಘಲ್ ಕಾಲದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿತ್ತು. ಉತ್ತರ ಪ್ರದೇಶ ರಾಜ್ಯ ಸರ್ಕಾರದ ನೇತೃತ್ವದ ತಂಡವು ಸಮೀಕ್ಷೆ ನಡೆಸಲು ಹೋದಾಗ, ಎರಡೂ ಸಮುದಾಯಗಳ ಜನರು ಘರ್ಷಣೆ ನಡೆಯಿತು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಪ್ರಾಚೀನ ಹರಿಹರ ಮಂದಿರದ ಸ್ಥಳದಲ್ಲಿ 16ನೇ ಶತಮಾನದ ಮಸೀದಿ ನಿರ್ಮಿಸಲಾಗಿದೆ ಮತ್ತು ಹರಿಹರ ಮಂದಿರವನ್ನು 1529ರಲ್ಲಿ ಮೊಘಲ್ ದೊರೆ ಬಾಬರ್ ನೆಲಸಮಗೊಳಿಸಿದ್ದಾನೆ ಎಂಬ ಅರ್ಜಿಗಳ ಆಧಾರದ ಮೇಲೆ ಸಂಭಾಲ್ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು. ಇದನ್ನು ಮುಸ್ಲಿಂ ಸಮುದಾಯ ವಿರೋಧಿಸಿದೆ.
ಅಜ್ಮೇರ್ನಲ್ಲಿರುವ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾಕ್ಕೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಾರೆ. ದರ್ಗಾವನ್ನು ದೇವಾಲಯವೆಂದು ಘೋಷಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಗೆ ನೋಟಿಸ್ ನೀಡಿದೆ.
ಸುಪ್ರೀಂ ಕೋರ್ಟ್ ರಾಷ್ಟ್ರೀಯ ಭಾವನೆಗಳಿಗಿಂತ ಮೇಲಿದೆಯೇ ಎಂದು ಕೇಳಿದ ಪ್ರಶ್ನೆಗೆ, ನ್ಯಾಯಮೂರ್ತಿ ಚೆಲಮೇಶ್ವರ್ ನೇರ ಉತ್ತರ ಕೊಡಲಿಲ್ಲ. . " 1967ರ ಗೋಲಕ್ ನಾಥ್ ಪ್ರಕರಣವನ್ನು ಮೈಲಿಗಲ್ಲಾಗಿದ್ದು ದೇಶದ ಸಮಾಜವಾದಕ್ಕೆ ಸ್ಫೂರ್ತಿ ಎಂದರು. ಆದರೆ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನೊಂದಿಗೆ ಅದು ಬದಲಾಯಿತು ಎಂದರು.
ಪೂಜಾ ಸ್ಥಳಗಳ ಕಾಯ್ದೆಯು ಈ ನೆಲದ ಕಾನೂನು. ಈ ವಿಷಯವು ಮುಂದೆ ಯಾವ ರೀತಿ ಸಾಗುತ್ತದೆ ಎಂಬುದನ್ನು ನೋಡಲು ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಅವರು ಹೇಳಿದರು.
ಗೋಲಕ್ ನಾಥ್ ಪ್ರಕರಣ (1967) ಮತ್ತು ಕೇಶವಾನಂದ ಭಾರತಿ ಪ್ರಕರಣ (1973) ನಡುವೆ ಪ್ರಮುಖ ಎರಡು ವ್ಯತ್ಯಾಸಗಳಿವೆ. ಗೋಲಕ್ ನಾಥ್ ಪ್ರಕರಣವು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ್ದು ಅಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವ ಹಕ್ಕು ಸಂಸತ್ಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಕೇಶವಾನಂದ ಭಾರತಿ ಪ್ರಕರಣವು ಸಾಂವಿಧಾನಿಕ ತಿದ್ದುಪಡಿಗೆ ಸಂಬಂಧಿಸಿದ್ದು. ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು ಆದರೆ ಅದರ ಮೂಲ ರಚನೆಯನ್ನು ಅಲ್ಲ ಎಂದು ತೀರ್ಪಿನಲ್ಲಿ ಹೇಳಲಾಯಿತು.
ಪಿ.ವಿ.ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು 1991ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ವಿವಾದ ಭುಗಿಲೆದ್ದಾಗ ಪೂಜಾ ಸ್ಥಳಗಳ ಕಾಯ್ದೆ ಪರಿಚಯಿಸಿತು. ನಂತರ 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮಗೊಳಿಸಲಾಯಿತು.
2019ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆ ತೀರ್ಪಿನಲ್ಲಿ 1991ರ ಕಾನೂನನ್ನು ಎತ್ತಿಹಿಡಿಯಿತು ಹಾಗೂ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುತ್ತದೆ ಎಂದು ಹೇಳಿತು. ಆಗಸ್ಟ್ 15, 1947ರಂತೆ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ಕಾನೂನು ರಕ್ಷಿಸುತ್ತದೆ ಎಂದು ಅಭಿಪ್ರಾಯಪಟ್ಟಿತು.
ಚಂದ್ರಚೂಡ್- ಮೋದಿ ಗಣಪತಿ ಪೂಜೆ ಬಗ್ಗೆ...
ಮಾಜಿ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರಾರ್ಥನೆ ಸಲ್ಲಿಸುವುದು ಸರಿಯೇ ಎಂದು ಕೇಳಿದಾಗ, ನ್ಯಾಯಮೂರ್ತಿ ಚೆಲಮೇಶ್ವರ್ ಅವರು ಇದು ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಅಸಾಧಾರಣ ನಡೆ ಎಂದು ಹೇಳಿದರು. ಸಿಜೆಐ ತಮ್ಮ ಮನೆಯಲ್ಲಿ ಯಾರೊಂದಿಗೆ ಪ್ರಾರ್ಥನೆ ಸಲ್ಲಿಸಿದರು ಮತ್ತು ಯಾರನ್ನು ಅವರ ಮನೆಗೆ ಆಹ್ವಾನಿಸಿದರು ಎಂಬುದು ಅವರ ವೈಯಕ್ತಿಕ ವಿಷಯ. ಅದು ತಪ್ಪಲ್ಲ, ಆದರೆ ಈ ಚಿತ್ರಗಳನ್ನು ಸಾರ್ವಜನಿಕಗೊಳಿಸುವುದು ಖಂಡಿತವಾಗಿಯೂ ಮಾಡಬಾರದ ವಿಷಯ ಎಂದರು.
ಜಸ್ಟಿ ಚೆಲಮೇಶ್ವರ್ ಅವರು 2018 ರ ಜೂನ್ನಲ್ಲಿ ಸುಪ್ರೀಂ ಕೋರ್ಟ್ಗೆ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿ ನಿವೃತ್ತರಾದರು. 2010ರಿಂದ 2011ರವರೆಗೆ ಕೇರಳ ಹೈಕೋರ್ಟ್ ಹಾಗೂ 2007ರಿಂದ 2010ರವರೆಗೆ ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.