ಚಂದ್ರಬಾಬು ನಾಯ್ಡು ಬುಧವಾರ  ಪ್ರಮಾಣವಚನ ಸ್ವೀಕಾರ
x

ಚಂದ್ರಬಾಬು ನಾಯ್ಡು ಬುಧವಾರ ಪ್ರಮಾಣವಚನ ಸ್ವೀಕಾರ


ತೆಲುಗು ದೇಶಂ ಪಕ್ಷ (ಟಿಡಿಪಿ)ದ ನಾಯಕ ಎನ್. ಚಂದ್ರಬಾಬು ನಾಯ್ಡು ಅವರು ಮಂಗಳವಾರ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಎನ್‌ಡಿಎ ನಾಯಕರಾಗಿ ಆಯ್ಕೆಯಾಗಿದ್ದು, ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನಾಯ್ಡು ಅವರ ಹೆಸರನ್ನು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಪ್ರಸ್ತಾಪಿಸಿದರು. ಆನಂತರ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಶಾಸಕರು ವಿಜಯವಾಡದಲ್ಲಿ ನಾಯ್ಡು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಆಂಧ್ರಪ್ರದೇಶ ಬಿಜೆಪಿ ಮುಖ್ಯಸ್ಥೆ ಡಿ. ಪುರಂದೇಶ್ವರಿ ಅವರು ಕೂಡ ನಾಯ್ಡು ಅವರನ್ನು ಬೆಂಬಲಿಸಿದ್ದಾರೆ.

ಟಿಡಿಪಿ ನಾಯಕರಾಗಿಯೂ ಆಯ್ಕೆ: ಮಂಗಳವಾರ ನಾಯ್ಡು ಅವರು ಟಿಡಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ನಾಯಕ ಕೆ. ಅಚ್ಚನ್ ನಾಯ್ಡು ತಿಳಿಸಿದ್ದಾರೆ. ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಅವರನ್ನು ಸದನದಲ್ಲಿ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಮಾತನಾಡಿದ ನಾಯ್ಡು ಅವರು, ʻನಿಮ್ಮೆಲ್ಲರ ಸಹಕಾರದೊಂದಿಗೆ ನಾಳೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ. ನಿಮಗೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ,ʼ ಎಂದು ಹೇಳಿದರು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.

ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಲಿರುವ ನಾಯ್ಡು ಅವರು ರಾಜ್ಯಕ್ಕೆ ಕೇಂದ್ರ ಸರ್ಕಾರದ ಸಹಕಾರವನ್ನು ಕೇಳಿದ್ದಾರೆ. ಈ ಬಗ್ಗೆ ಭರವಸೆ ನೀಡಲಾಗಿದೆ.

ಅಮರಾವತಿ ರಾಜಧಾನಿ: ಅಮರಾವತಿ ಆಂಧ್ರಪ್ರದೇಶದ ಏಕೈಕ ರಾಜಧಾನಿಯಾಗಲಿದೆ. ಪೋಲಾವರಂ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ. ವಿಶಾಖಪಟ್ಟಣವನ್ನು ಆರ್ಥಿಕ ರಾಜಧಾನಿ ಮತ್ತು ವಿಶೇಷ ನಗರವಾಗಿ ಅಭಿವೃದ್ಧಿಪಡಿಸಲಾಗುವುದು. ರಾಜ್ಯವ ನ್ನು ಉಳಿಸಲು ಸಂಕಲ್ಪ ಮಾಡಿದ ಐದು ಕೋಟಿ ಜನರಿಗೆ ನಮಸ್ಕರಿಸುತ್ತೇನೆ. ಟಿಡಿಪಿ ವಿಜಯದಿಂದ ರಾಜ್ಯಕ್ಕೆ ನವದೆಹಲಿಯಲ್ಲಿ ಗೌರವ ಸಿಗುತ್ತಿದೆ,ʼ ಎಂದು ಅವರು ಹೇಳಿದರು.

ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಒಳಗೊಂಡಿರುವ ಮೈತ್ರಿಕೂಟವು 164 ವಿಧಾನಸಭೆ ಮತ್ತು 21 ಲೋಕಸಭೆ ಸ್ಥಾನಗಳನ್ನು ಗೆದ್ದಿದೆ.

Read More
Next Story