ಚಂದ್ರಬಾಬು ನಾಯ್ಡು ಪ್ರಮಾಣವಚನ ಸ್ವೀಕಾರ: ಪವನ್ ಕಲ್ಯಾಣ್ ಡಿಸಿಎಂ
x

ಚಂದ್ರಬಾಬು ನಾಯ್ಡು ಪ್ರಮಾಣವಚನ ಸ್ವೀಕಾರ: ಪವನ್ ಕಲ್ಯಾಣ್ ಡಿಸಿಎಂ

1995 ರಲ್ಲಿ ಮೊದಲ ಬಾರಿಗೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅವರು, ಸತತ ಎರಡು ಅವಧಿ ಸೇವೆ ಸಲ್ಲಿಸಿದರು. 2014ರಲ್ಲಿ ಅವರು ರಾಜ್ಯದ ವಿಭಜನೆ ನಂತರ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ, 2019 ರವರೆಗೆ ಸೇವೆ ಸಲ್ಲಿಸಿದರು.


ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಬುಧವಾರ (ಜೂನ್ 12) ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವಿಜಯವಾಡದ ಹೊರವಲಯದಲ್ಲಿರುವ ಕೆಸರಪಲ್ಲಿಯಲ್ಲಿರುವ ಗನ್ನವರಂ ವಿಮಾನ ನಿಲ್ದಾಣದ ಬಳಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಗೌಪ್ಯತೆಯ ವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಜೆ.ಪಿ. ನಡ್ಡಾ, ನಿತಿನ್ ಗಡ್ಕರಿ, ರಾಮದಾಸ್ ಅಠವಳೆ, ಅನುಪ್ರಿಯಾ ಪಟೇಲ್ ಮತ್ತು ಚಿರಾಗ್ ಪಾಸ್ವಾನ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಮತ್ತು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಲ್ಲದೆ ತೆಲುಗು ಚಲನಚಿತ್ರ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.

2019 ರ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರಿಂದ ಪರಾಜಿತರಾದ ನಾಯ್ಡು ಅವರಿಗೆ ಮುಖ್ಯಮಂತ್ರಿಯಾಗಿ ಇದು ನಾಲ್ಕನೇ ಅವಧಿ. ಅವರ ಪಕ್ಷ 175 ಅಸೆಂಬ್ಲಿ ಸ್ಥಾನಗಳಲ್ಲಿ 135 ಸ್ಥಾನಗಳನ್ನು ಗೆದ್ದುಕೊಂಡಿದೆ. ಪವನ್‌ ಕಲ್ಯಾಣ್ ಅವರ ಜನಸೇನಾಗೆ ಮೂರು ಹಾಗೂ ಬಿಜೆಪಿಗೆ ಒಂದು ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ. 175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ 26 ಮಂದಿ ಸಚಿವರ ನೇಮಕ ಅವಕಾಶವಿದೆ.

ಅಮರಾವತಿ ಯೋಜನೆಗೆ ಬದ್ಧ: ನಾಯ್ಡು

ಮಂಗಳವಾರ ನಡೆದ ಪ್ರತ್ಯೇಕ ಸಭೆಗಳಲ್ಲಿ ತೆಲುಗು ದೇಶಂ ಶಾಸಕಾಂಗ ಪಕ್ಷ ಮತ್ತು ಎನ್‌ಡಿಎ ಪಾಲುದಾರರು ನಾಯ್ಡು ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಶಾಸಕರನ್ನು ಉದ್ದೇಶಿಸಿ ಮಾತನಾಡಿದ ನಾಯ್ಡು, ʻರಾಜ್ಯದ ಏಕೈಕ ರಾಜಧಾನಿಯಾಗಿ ಅಮರಾವತಿಯನ್ನು ಅಭಿವೃದ್ಧಿಪಡಿಸಲು ಬದ್ಧನಾಗಿ ದ್ದೇನೆ. ನಿಮ್ಮೆಲ್ಲರ ಸಹಕಾರದೊಂದಿಗೆ ನಾನು ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ ಮತ್ತು ಅದಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಬರುತ್ತಿದ್ದಾರೆ,ʼ ಎಂದು ಹೇಳಿದರು.

1995 ರಲ್ಲಿ ಮೊದಲ ಬಾರಿಗೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅವರು, ಸತತ ಎರಡು ಅವಧಿ ಸೇವೆ ಸಲ್ಲಿಸಿದರು. 2014 ರಲ್ಲಿ ಅವರು ರಾಜ್ಯದ ವಿಭಜನೆ ನಂತರ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ, 2019 ರವರೆಗೆ ಸೇವೆ ಸಲ್ಲಿಸಿದರು.

Read More
Next Story