
ಚಂದ್ರಬಾಬು ನಾಯ್ಡು ಮತ್ತೆ ದೇಶದ ನಂ. 1 ಶ್ರೀಮಂತ ಸಿಎಂ: 931 ಕೋಟಿ ರೂ. ಒಡೆಯ, ಮಮತಾ ಬ್ಯಾನರ್ಜಿಗೆ ಕೊನೆಯ ಸ್ಥಾನ
ನಾರಾ ಕುಟುಂಬವು ಒಟ್ಟಾರೆಯಾಗಿ ಶೇ 41.3 ರಷ್ಟು ಪಾಲುದಾರಿಕೆಯನ್ನು ಹೊಂದಿದ್ದಾರೆ. 1995ರಲ್ಲಿ ಕೇವಲ 25 ಕೋಟಿ ರೂಪಾಯಿ ಕಂಪನಿಯ ಸಂಪತ್ತಿನ ಮೌಲ್ಯವು ಇದೀಗ 6,755 ಕೋಟಿ ರೂಪಾಯಿ ಏರಿಕೆಯಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮತ್ತೊಮ್ಮೆ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಘ (ADR) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ನಾಯ್ಡು ಅವರು 931 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇದೇ ವರದಿಯಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ ಮುಖ್ಯಮಂತ್ರಿಗಳ ಪೈಕಿ ಅತ್ಯಂತ ಕಡಿಮೆ ಆಸ್ತಿ ಹೊಂದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಲ್ಲಿಸಿದ ಚುನಾವಣಾ ಅಫಿಡವಿಟ್ಗಳಲ್ಲಿ ಘೋಷಿಸಿಕೊಂಡಿರುವ ಆಸ್ತಿಯನ್ನು ಆಧರಿಸಿ ಎಡಿಆರ್ ಈ ವರದಿಯನ್ನು ಸಿದ್ಧಪಡಿಸಿದೆ.
'ಹೆರಿಟೇಜ್ ಫುಡ್ಸ್' ಸಂಪತ್ತಿನ ಮೂಲ
ಚಂದ್ರಬಾಬು ನಾಯ್ಡು ಅವರ ಈ ಅಪಾರ ಸಂಪತ್ತಿನ ಹಿಂದಿನ ಪ್ರಮುಖ ಶಕ್ತಿ ಅವರ ಕುಟುಂಬದ ಒಡೆತನದ 'ಹೆರಿಟೇಜ್ ಫುಡ್ಸ್ ಲಿಮಿಟೆಡ್' ಕಂಪನಿ. 1992ರಲ್ಲಿ, ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟಕ್ಕಾಗಿ 7,000 ಕೋಟಿ ರೂಪಾಯಿ ಮೂಲ ಬಂಡವಾಳದೊಂದಿಗೆ ಈ ಕಂಪನಿಯನ್ನು ಸ್ಥಾಪಿಸಲಾಗಿತ್ತು.
ವಿಶೇಷವೆಂದರೆ, ಚಂದ್ರಬಾಬು ನಾಯ್ಡು ಅವರು ಈ ಕಂಪನಿಯಲ್ಲಿ ಯಾವುದೇ ಷೇರುಗಳನ್ನು ಹೊಂದಿಲ್ಲ. ಆದರೆ, ಅವರ ಪತ್ನಿ ನಾರಾ ಭುವನೇಶ್ವರಿ ಅವರು ಕಂಪನಿಯ ಶೇಕಡ 24.37 ರಷ್ಟು ಪಾಲನ್ನು ಹೊಂದಿದ್ದಾರೆ. ನಾರಾ ಕುಟುಂಬವು ಒಟ್ಟಾರೆಯಾಗಿ ಶೇ 41.3 ರಷ್ಟು ಪಾಲುದಾರಿಕೆಯನ್ನು ಹೊಂದಿದ್ದು, 1995ರಲ್ಲಿ ಕೇವಲ 25 ಕೋಟಿ ರೂಪಾಯಿ ಕಂಪನಿಯ ಸಂಪತ್ತಿನ ಮೌಲ್ಯವು ಇದೀಗ 6,755 ಕೋಟಿ ರೂಪಾಯಿ ಏರಿಕೆಯಾಗಿದೆ.
1994ರಲ್ಲಿ, ನಾಯ್ಡು ಅವರು ಕಂಪನಿಗೆ ರಾಜೀನಾಮೆ ನೀಡಿ ಆಂಧ್ರಪ್ರದೇಶ ಸರ್ಕಾರದಲ್ಲಿ ಸಚಿವರಾಗಿ, ನಂತರ ಮುಖ್ಯಮಂತ್ರಿಯಾಗಿ ನೇಮಕಗೊಂಡರು. ಆ ಬಳಿಕ, ಅವರ ಪತ್ನಿ ಭುವನೇಶ್ವರಿ ಅವರು ಹೆರಿಟೇಜ್ ಕಂಪನಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ಪ್ರಸ್ತುತ, ನಾಯ್ಡು ಅವರ ಸೊಸೆ ಮತ್ತು ನಾರಾ ಲೋಕೇಶ್ ಅವರ ಪತ್ನಿಯಾದ ಬ್ರಹ್ಮಣಿ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ, ಕುಟುಂಬದ ವ್ಯವಹಾರದ ಯಶಸ್ಸೇ ಚಂದ್ರಬಾಬು ನಾಯ್ಡು ಅವರನ್ನು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯನ್ನಾಗಿ ಮಾಡಿದೆ.