
ರಾಜಧಾನಿ ಅಮರಾವತಿ ಬೆಳೆಯಲಿದೆ; ಹೂಡಿಕೆಗೆ ಭಾರೀ ಅವಕಾಶ: ಸಿಎಂ ಚಂದ್ರಬಾಬು ನಾಯ್ಡು
ವಿಶ್ವಬ್ಯಾಂಕ್ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗಳ ನೆರವಿನೊಂದಿಗೆ ಅಮರಾವತಿ ಅಭಿವೃದ್ಧಿ ಮತ್ತೆ ಚುರುಕುಗೊಂಡಿದೆ. ಡಿಸೆಂಬರ್ 2024ರಲ್ಲಿ ವಿಶ್ವಬ್ಯಾಂಕ್ 800 ಮಿಲಿಯನ್ ಡಾಲರ್ ಸಾಲಕ್ಕೆ ಅನುಮೋದನೆ ನೀಡಿದೆ.
ಆಂಧ್ರಪ್ರದೇಶದ ಕನಸಿನ ರಾಜಧಾನಿ 'ಅಮರಾವತಿ'ಯ (Amaravati) ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (N Chandrababu Naidu) ವಿರೋಧ ಪಕ್ಷಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಅಮರಾವತಿಯ ವೇಗವನ್ನು ಕಂಡು ಕೆಲವರು ಅಸೂಯೆ ಪಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ವಿಶ್ವದ ಮೆಚ್ಚುಗೆಗೆ ಪಾತ್ರವಾಗಲಿದೆ ಅಮರಾವತಿ
ವಿಜಯವಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಾಯ್ಡು, "ಅಮರಾವತಿಯನ್ನು ಜಾಗತಿಕ ಮಟ್ಟದ ನಗರವನ್ನಾಗಿ ರೂಪಿಸಲಾಗುತ್ತಿದೆ. ಮುಂದಿನ ಆರು ತಿಂಗಳೊಳಗೆ ಅಮರಾವತಿಯಲ್ಲಿ 'ಕ್ವಾಂಟಮ್ ಕಂಪ್ಯೂಟರ್' (Quantum Computer) ಕಾರ್ಯಾರಂಭ ಮಾಡಲಿದ್ದು, ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಲಿದೆ," ಎಂದು ಘೋಷಿಸಿದರು. ಕೇಂದ್ರ ಸರ್ಕಾರ ಕ್ವಾಂಟಮ್ ಮಿಷನ್ ಘೋಷಿಸಿದ ತಕ್ಷಣವೇ ರಾಜ್ಯ ಸರ್ಕಾರ ಅಮರಾವತಿಯಲ್ಲಿ ಇದನ್ನು ಸ್ಥಾಪಿಸಲು ಮುಂದಾಗಿದೆ ಎಂದರು.
ಜಗನ್ ರೆಡ್ಡಿ ಆರೋಪಕ್ಕೆ ತಿರುಗೇಟು
ನದಿ ತೀರದಲ್ಲಿ ರಾಜಧಾನಿ ನಿರ್ಮಿಸಲಾಗುತ್ತಿದೆ ಎಂಬ ಮಾಜಿ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಟೀಕೆಗೆ ಉತ್ತರಿಸಿದ ನಾಯ್ಡು, "ದೆಹಲಿ, ಲಂಡನ್, ಮುಂಬೈ ಸೇರಿದಂತೆ ವಿಶ್ವದ ಪ್ರಮುಖ ನಗರಗಳು ನದಿ ತೀರದಲ್ಲೇ ತಲೆ ಎತ್ತಿವೆ. ನಾಗರಿಕತೆ ಬೆಳೆದಿದ್ದೇ ನದಿಗಳ ದಡದಲ್ಲಿ ಎಂಬ ಸಾಮಾನ್ಯ ಜ್ಞಾನ ಇಲ್ಲದವರು ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದರು. ವಿಜಯವಾಡ, ಗುಂಟೂರು, ಮಂಗಳಗಿರಿ ಮತ್ತು ಅಮರಾವತಿ ಸೇರಿ ಈ ಭಾಗವು ದೇಶದ ಅತ್ಯುತ್ತಮ ವಾಸಯೋಗ್ಯ ನಗರವಾಗಿ ರೂಪುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೈಎಸ್‌ಆರ್‌ಸಿಪಿ ಆರೋಪವೇನು?
ಇದೇ ವೇಳೆ, ಅಮರಾವತಿ ಯೋಜನೆಯಲ್ಲಿ ರೈತರ ಸಮಸ್ಯೆಗಳನ್ನು ಕಡೆಗಣಿಸಲಾಗಿದೆ ಎಂದು ವೈಎಸ್‌ಆರ್‌ಸಿಪಿ ನಾಯಕ ಎಸ್. ರಾಮಕೃಷ್ಣ ರೆಡ್ಡಿ ಆರೋಪಿಸಿದ್ದಾರೆ. ಮೊದಲ ಹಂತದಲ್ಲಿ 50,000 ಎಕರೆ ಭೂಮಿ ಪಡೆದಿದ್ದರೂ ಮೂಲಸೌಕರ್ಯ ಕಲ್ಪಿಸಿಲ್ಲ. ಇದೀಗ ಎರಡನೇ ಹಂತದ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ. ಅಮರಾವತಿ ಹೆಸರಿನಲ್ಲಿ 40,000 ಕೋಟಿ ರೂ. ಸಾಲ ಮಾಡಲಾಗಿದ್ದರೂ, ಅಭಿವೃದ್ಧಿ ಮಾತ್ರ ಶೂನ್ಯ ಎಂದು ಅವರು ದೂರಿದ್ದಾರೆ.
ಅಮರಾವತಿ: ಮುಂದಿನ ನಡೆಯೇನು?
ವಿಶ್ವಬ್ಯಾಂಕ್ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗಳ ನೆರವಿನೊಂದಿಗೆ ಅಮರಾವತಿ ಅಭಿವೃದ್ಧಿ ಮತ್ತೆ ಚುರುಕುಗೊಂಡಿದೆ. ಡಿಸೆಂಬರ್ 2024ರಲ್ಲಿ ವಿಶ್ವಬ್ಯಾಂಕ್ 800 ಮಿಲಿಯನ್ ಡಾಲರ್ ಸಾಲಕ್ಕೆ ಅನುಮೋದನೆ ನೀಡಿದ್ದು, ಮೂಲಸೌಕರ್ಯ ಕಾಮಗಾರಿಗಳು ವೇಗ ಪಡೆದುಕೊಂಡಿವೆ. 2050ರ ವೇಳೆಗೆ 35 ಲಕ್ಷ ಜನಸಂಖ್ಯೆಗೆ ಆಸರೆಯಾಗಬಲ್ಲ ಮತ್ತು 15 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಲ್ಲ ನಗರವನ್ನಾಗಿ ಇದನ್ನು ರೂಪಿಸುವ ಗುರಿ ಹೊಂದಲಾಗಿದೆ.

