
ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲೂ ಕೇಂದ್ರ ಸರ್ಕಾರ ತೀರ್ಮಾನ; ಕರ್ನಾಟಕದ ಜಾತಿಗಣತಿಯ ಕತೆಯೇನು?
ಜಾತಿ ಗಣತಿಯ ಕುರಿತು ದೇಶಾದ್ಯಂತ ದೀರ್ಘಕಾಲದಿಂದ ಚರ್ಚೆಗಳು ನಡೆಯುತ್ತಿವೆ ಹಾಗೂ ಕೆಲವು ಸಮುದಾಯಗಳು ಒಲವು ತೋರುತ್ತಿವೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಜಾತಿ ಗಣತಿಯನ್ನು ರಾಜಕೀಯ ಅಸ್ತ್ರವಾಗಿಯೂ ಬಳಸಿಕೊಳ್ಳಲು ಶುರು ಮಾಡಿಕೊಂಡಿದೆ.
ಶೀಘ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನೂ ನಡೆಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜಕೀಯ ವ್ಯವಹಾರಗಳ ಕೇಂದ್ರ ಸಮಿತಿ (CCPA) ಸಭೆಯಲ್ಲಿ ತೀರ್ಮಾನಕ್ಕೆ ಅನುಮೋದನೆ ನೀಡಿದೆ. ಸಚಿವ ಅಶ್ವಿನಿ ವೈಷ್ಣವ್ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಹೀಗಾಗಿ ಕರ್ನಾಟಕದ ಜಾತಿ ಗಣತಿಯ ಕತೆಯೇನಾಗಬಹುದು ಎಂಬ ಚರ್ಚೆ ಶುರುವಾಗಿದೆ.
ಕರ್ನಾಟಕದಲ್ಲಿ ಈಗಾಗಲೇ ಜಾತಿ ಗಣತಿಯ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿದೆ. ಅದರ ಜಾರಿಗೆ ಸರ್ಕಾರ ಮುಂದಾದರೂ ಕ್ಯಾಬಿನೆಟ್ ಸಚಿವರೊಳಗೆ ಭಿನ್ನಾಭಿಪ್ರಾಯ ಒಡಲ ಬೆಂಕಿಯಾಗಿ ಸುಡುತ್ತಿದೆ. ಪ್ರಭಾವಿ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗರು ಗಣತಿಯನ್ನು ಖಡಾಖಂಡಿತವಾಗಿ ವಿರೋಧಿಸುತ್ತಿವೆ. ಕ್ಯಾಬಿನೆಟ್ನಲ್ಲಿ ಸತತವಾಗಿ ಚರ್ಚೆ ನಡೆಸಿ ಜಾರಿ ಮಾಡುವುದಾಗಿ ಸರ್ಕಾರ ಹೇಳುತ್ತಿದ್ದರೂ ಮುಂದೇನು ಎಂಬುದು ಎಲ್ಲರಿಗೂ ಅಸ್ಪಷ್ಟ. ಅದಕ್ಕಾಗಿ ಮೇ 2ರಂದು ಕ್ಯಾಬಿನೆಟ್ ಸಭೆ ಕರೆದು, ಕೊನೇ ಕ್ಷಣದಲ್ಲಿ ಮೇ 9ಕ್ಕೆ ಮುಂದೂಡಿಕೆ ಮಾಡಿದೆ.
ಕೇಂದ್ರದಿಂದ ಯಾಕೆ ಗಣತಿ?
ಜಾತಿ ಗಣತಿಯ ಕುರಿತು ದೇಶಾದ್ಯಂತ ದೀರ್ಘಕಾಲದಿಂದ ಚರ್ಚೆಗಳು ನಡೆಯುತ್ತಿವೆ ಹಾಗೂ ಕೆಲವು ಸಮುದಾಯಗಳು ಒಲವು ತೋರುತ್ತಿವೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಜಾತಿ ಗಣತಿಯನ್ನು ರಾಜಕೀಯ ಅಸ್ತ್ರವಾಗಿಯೂ ಬಳಸಿಕೊಳ್ಳಲು ಶುರು ಮಾಡಿಕೊಂಡಿದೆ. ಆರಂಭದಲ್ಲಿ ಜಾತಿ ಗಣತಿಯೇ ತನಗೆ 'ಅಪಥ್ಯ' ಎಂಬಂತೆ ವರ್ತಿಸಿದ್ದ ಕೇಂದ್ರದ ಬಿಜೆಪಿ ಸರ್ಕಾರ, ಇದೀಗ ಏಕಾಏಕಿ ಜಾತಿ ಗಣತಿ ಕಡೆಗೆ ಒಲವು ತೋರಿದೆ. ಆ ಮೂಲಕ 'ಸೇರಿಗೆ ಸವ್ವಾಸೇರು' ಎಂಬಂತೆ ರಾಜ್ಯಗಳ ಗಣತಿ ವರದಿಯನ್ನು ಅಪ್ರಸ್ತುತಗೊಳಿಸಲು ಮುಂದಾಗಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಶುರುವಾಗಿದೆ.
ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ನಡೆದ ಜಾತಿ ಸಮೀಕ್ಷೆಗಳು ಅವೈಜ್ಞಾನಿಕವಾಗಿದೆ ಎಂಬುದು ಕೇಂದ್ರ ಸರ್ಕಾರ ಹಿಂದಿನಿಂದಲೂ ಮಾಡಿಕೊಂಡು ತರ್ಕ ಮಾಡಿಕೊಂಡು ಬಂದಿತ್ತು. ಇದೀಗ ಜಾತಿ ಎಣಿಕೆಯನ್ನು ಪಾರದರ್ಶಕವಾಗಿ ಮತ್ತು ವೈಜ್ಞಾನಿಕವಾಗಿ ಜನಗಣತಿಯ ಭಾಗವಾಗಿ ಸೇರಿಸಲು ನಿರ್ಧರಿಸಿದೆ ಎಂದು ಹೇಳಿಕೊಂಡಿದೆ. “ಜಾತಿ ಗಣತಿಯಂತಹ ಸಮೀಕ್ಷೆಗಳು ಸಮಾಜದಲ್ಲಿ ಗೊಂದಲ ಮತ್ತು ಅನುಮಾನಗಳನ್ನು ಸೃಷ್ಟಿಸಿವೆ. ಆದ್ದರಿಂದ, ಇದನ್ನು ಜನಗಣತಿಯ ಒಂದು ಭಾಗವಾಗಿ ಸೇರಿಸುವುದು ಸೂಕ್ತ” ಎಂದು ಸಚಿವ ಅಶ್ವಿನಿ ವೈಷ್ಣವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರತ್ಯೇಕ ಜಾತಿಗಣತಿ ಅಗತ್ಯವಿಲ್ಲ; ವೈಷ್ಣವ್
'' ರಾಜ್ಯಗಳು ತಮಗೆ ಬೇಕಾದಂತೆ ಪ್ರತ್ಯೇಕ ಜಾತಿಗಣತಿ ನಡೆಸುವ ಅವಶ್ಯಕತೆ ಇಲ್ಲ. ಜನಗಣತಿಯ ಜೊತೆಗೇ ಅದನ್ನು ನಡೆಸಲಾಗುತ್ತದೆ. ಜಾತಿಗಣತಿಯಲ್ಲಿ ಸಾಕಷ್ಟು ರಾಜಕೀಯ ನಡೆದಿವೆ. ನಾವು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲ್ಲ. ಹಲವಾರು ರಾಜ್ಯಗಳಲ್ಲಿ ನಡೆಸಲಾದ ಜಾತಿ ಜನಗಣತಿ ಕಾರ್ಯವು ಅವೈಜ್ಞಾನಿಕ",'' ಎಂದು ವೈಷ್ಣವ್ ಹೇಳಿದ್ದಾರೆ. . 2022ರಲ್ಲಿ ಇಂಡಿಯಾ ಒಕ್ಕೂಟದಲ್ಲಿದ್ದ ಬಿಹಾರ ಸರ್ಕಾರ, ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಜಾತಿ ಗಣತಿ ನಡೆಸಿತ್ತು. ಅದು ಸರಿಯಾದ ಕ್ರಮವಹಿಸಿ ನಡೆದಿರುವ ಜಾತಿಗಣತಿ ಅಲ್ಲ ಎಂಬುದಾಗಿಯೂ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
‘2010ರಲ್ಲಿ ಕಾಂಗ್ರೆಸ್ ಸರ್ಕಾರವು ಜಾತಿ ಗಣತಿಯನ್ನು ವಿರೋಧಿಸಿತ್ತು. ಸಂಪುಟ ಸಭೆಯಲ್ಲಿ ಜಾತಿ ಗಣತಿ ಕುರಿತು ತೀರ್ಮಾನಿಸಲಾಗುವುದು ಎಂದು ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಹೇಳಿದ್ದರು. ಈ ವಿಷಯ ಕುರಿತು ಅಧ್ಯಯನಕ್ಕೆ ಸಚಿವರ ಸಮಿತಿ ರಚಿಸಲಾಗಿತ್ತು. ಬಹುತೇಕ ರಾಜಕೀಯ ಪಕ್ಷಗಳು ಜಾತಿ ಗಣತಿ ಪರವಾಗಿದ್ದವು. ಹೀಗಿದ್ದರೂ, ಅಂದಿನ ಕಾಂಗ್ರೆಸ್ ಸರ್ಕಾರವು ಜಾತಿ ಸಮೀಕ್ಷೆ ನಡೆಸದೇ ಇರಲು ನಿರ್ಧರಿಸಿತ್ತು. ಇವೆಲ್ಲವನ್ನೂ ಗಮನಿಸಿದರೆ ಕಾಂಗ್ರೆಸ್ ಮತ್ತು ಅದರ ಒಕ್ಕೂಟದ ಸದಸ್ಯ ಪಕ್ಷಗಳು ಜಾತಿ ಗಣತಿಯನ್ನು ಒಂದು ಅಸ್ತ್ರವನ್ನಾಗಿಯೇ ಬಳಸಿಕೊಂಡಿದ್ದಾರೆ’ ಎಂದು ಅಶ್ವಿನಿ ವೈಷ್ಣವ್ ಆರೋಪಿಸಿದ್ದಾರೆ.
ಜಾತಿ ಗಣತಿಯ ಉದ್ದೇಶವೇನು?
ಜಾತಿ ಗಣತಿಯು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ನಿಖರವಾದ ದತ್ತಾಂಶಗಳನ್ನು ಸಂಗ್ರಹಿಸಲು ಸಹಾಯಕ. ಇದರಿಂದ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಯೋಜನೆಗಳು, ಮೀಸಲಾತಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು. 1931ರ ಬ್ರಿಟಿಷ್ ಆಡಳಿತದ ಜನಗಣತಿಯ ನಂತರ ಜಾತಿವಾರು ಜನಸಂಖ್ಯೆಯ ಅಂಕಿಅಂಶಗಳು ಲಭ್ಯವಿಲ್ಲ,
ಕರ್ನಾಟಕದ ಏನಾಗಿದೆ?
ಕರ್ನಾಟಕವು 2015ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲಕ ಜಾತಿ ಗಣತಿ ನಡೆಸಿದ ದೇಶದ ಮೊದಲ ರಾಜ್ಯವಾಗಿತ್ತು. ಆದರೆ, ಈ ವರದಿಯನ್ನು ರಾಜಕೀಯ ಕಾರಣಗಳಿಂದ ಜಾರಿಗೊಳಿಸಿರಲಿಲ್ಲ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ವರದಿಯ ವೈಜ್ಞಾನಿಕತೆಯನ್ನು ಪ್ರಶ್ನಿಸಿದರೆ, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳು ಇದರ ಜಾರಿಗೆ ಒತ್ತಾಯಿಸಿವೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಕರ್ನಾಟಕದ ರಾಜಕೀಯದ ಮೇಲೆಯೂ ಪರಿಣಾಮ ಬೀರಲಿದೆ.