ಜನಗಣತಿಯಲ್ಲಿ ಜಾತಿಗಣತಿ ಸಾಧ್ಯತೆ?
x

ಜನಗಣತಿಯಲ್ಲಿ ಜಾತಿಗಣತಿ ಸಾಧ್ಯತೆ?

ಕೇಂದ್ರ ಸರ್ಕಾರವು ಮುಂದಿನ ಜನಗಣತಿಯಲ್ಲಿ ಜಾತಿಯನ್ನು ದಾಖಲಿಸಲು ಪ್ರತ್ಯೇಕ ಅಂಕಣವನ್ನು ಸೇರಿಸಲು ಚರ್ಚೆಗಳು ನಡೆಸುತ್ತಿದೆ ಎನ್ನಲಾಗಿದೆ.


ಮುಂದಿನ ಜನಗಣತಿಯ ದತ್ತಾಂಶ ಸಂಗ್ರಹದಲ್ಲಿ ಜಾತಿ ಎಣಿಕೆಯನ್ನು ಸೇರಿಸಲು ಕೇಂದ್ರವು ಪರಿಗಣಿಸುತ್ತಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮತ್ತು ಬಿಜೆಪಿಯ ಮೈತ್ರಿ ಪಾಲುದಾರರಿಂದ ಜಾತಿ ಗಣತಿಗೆ ಒತ್ತಾಯ ಇರುವುದರಿಂದ ಈ ಕ್ರಮಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ. ಆದರೆ, ಜನಗಣತಿ ಕುರಿತು ಸರ್ಕಾರ ಇನ್ನೂ ನಿರ್ಧರಿಸಿಲ್ಲ.

ಅಂಕಣ ಸೇರಿಕೆಗೆ ಚರ್ಚೆ: ಜನಗಣತಿ ಕಾರ್ಯದಲ್ಲಿ ಜಾತಿಯನ್ನು ದಾಖಲಿಸಲು ಅಂಕಣವೊಂದನ್ನು ಸೇರಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಜನಗಣತಿಯ ಅನಿರ್ದಿಷ್ಟ ವಿಳಂಬಕ್ಕೆ ಜಾತಿ ಗಣತಿಯ ಬೇಡಿಕೆಯೂ ಒಂದು ಕಾರಣ ಎಂದು ಮೂಲಗಳು ತಿಳಿಸಿವೆ. ಪರಿಶಿಷ್ಟ ಜಾತಿ/ ಪಂಗಡಗಳ ಜೊತೆಗೆ, ಜನಗಣತಿಯ ಭಾಗವಾಗಿ ಜಾತಿವಾರು ಎಣಿಕೆಯನ್ನು ಸ್ವತಂತ್ರ ಭಾರತದಲ್ಲಿ ಈವರೆಗೆ ಮಾಡಿಲ್ಲ.

ವರದಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ʻ ಹೆಚ್ಚುವರಿ ಅಂಕಣ ಸೇರಿಸುವ ಮೂಲಕ ಜನಗಣತಿಯಲ್ಲೇ ಒಬಿಸಿ ಜನಸಂಖ್ಯೆಯ ಜಾತಿವಾರು ದತ್ತಾಂಶವನ್ನು ಸಂಗ್ರಹಿಸಬಹುದು. ಇಂತಹ ಕ್ರಮವು ದೃಢೀಕರಣ ಕ್ರಿಯೆ ಕಾರ್ಯಕ್ರಮಗಳಿಗೆ ಭದ್ರ ಬುನಾದಿ ನೀಡಲಿದೆ,ʼ ಎಂದು ಹೇಳಿದೆ.

ʻಸಂವಿಧಾನದ ಏಳನೇ ಪರಿಶಿಷ್ಟದಲ್ಲಿರುವ ಕೇಂದ್ರ ಪಟ್ಟಿಯಲ್ಲಿ ʻಜನಗಣತಿʼ ನಮೂದು ಸಂಖ್ಯೆ 69 ಆಗಿದೆ. ಅಂದರೆ, ಜನಗಣತಿ ನಡೆಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ,ʼ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಹೇಳಿದ್ದಾರೆ.

ಆರ್ಥಿಕ ಮತ್ತು ಸಾಮಾಜಿಕ ನ್ಯಾಯ: ʻದೇಶದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ನಿಯಮಿತವಾಗಿ ಜನಗಣತಿ ನಡೆಸಲಾಗುತ್ತಿದೆ. 2021ರಲ್ಲಿ ಜನಗಣತಿ ನಡೆಯಬೇಕಿತ್ತು. ನಡೆಯದೆ ಇರುವುದರಿಂದ, ಆರ್ಥಿಕ ಯೋಜನೆ ಮತ್ತು ಸಾಮಾಜಿಕ ನ್ಯಾಯ ಕಾರ್ಯಕ್ರಮಗಳಿಗೆ ಅಗತ್ಯವಾದ ಮುಖ್ಯ ಮಾಹಿತಿಗಳನ್ನು ಸಂಗ್ರಹಿಸಲು ಆಗಿಲ್ಲ. ಇದರಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013 ಅಥವಾ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ 12 ಕೋಟಿಗೂ ಹೆಚ್ಚು ಭಾರತೀಯರಿಗೆ ಪ್ರಯೋಜನಗಳನ್ನು ನಿರಾಕರಿಸಲಾಗಿದೆ,ʼ ಎಂದು ರಮೇಶ್‌ ಹೇಳಿದರು.

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನ್ಯಾಯ ಒದಗಿಸಲು ಜಾತಿಗಣತಿ ಅಗತ್ಯ ಎಂದು ಕಾಂಗ್ರೆಸ್ ಹೇಳುತ್ತಿದೆ.

Read More
Next Story