
ಸಿಇಸಿಗೆ ಝಡ್ ವರ್ಗದ ವಿಐಪಿ ಭದ್ರತೆ
ಹೊಸದಿಲ್ಲಿ, ಏಪ್ರಿಲ್ 9- ಮುಖ್ಯ ಚುನಾವಣೆ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಶಸ್ತ್ರಸಜ್ಜಿತ ಕಮಾಂಡೋಗಳ ಝಡ್ ವರ್ಗದ ವಿಐಪಿ ಭದ್ರತೆಯನ್ನು ಸರ್ಕಾರ ಒದಗಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ಗೃಹ ಸಚಿವಾಲಯವು 40-45 ಸಿಬ್ಬಂದಿಗಳ ತುಕಡಿಯನ್ನು ಒದಗಿಸುವ ಜವಾಬ್ದಾರಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಗೆ ವಹಿಸಿದೆ ಎಂದು ಮೂಲಗಳು ತಿಳಿಸಿವೆ. ಸಿಇಸಿಗೆ ಕೇಂದ್ರೀಯ ಭದ್ರತೆ ಒದಗಿಸಿದ ಅಪರೂಪದ ನಿದರ್ಶನಗಳಲ್ಲಿ ಇದು ಒಂದು. ಮಾಜಿ ಸಿಇಸಿ ದಿವಂಗತ ಟಿ. ಎನ್. ಶೇಷನ್ ಅವರಿಗೆ ಈ ಹಿಂದೆ ಕೇಂದ್ರ ಮೀಸಲು ಪೊಲೀಸ್ ಭದ್ರತೆ ನೀಡಲಾಗಿತ್ತು.
ಕೇಂದ್ರ ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿದ ಬೆದರಿಕೆ ಗ್ರಹಿಕೆ ವರದಿಯು ಮುಖ್ಯ ಚುನಾವಣೆ ಆಯುಕ್ತ (ಸಿಇಸಿ)ರಿಗೆ ʻಬಲವಾದʼ ಭದ್ರತೆಯನ್ನು ಶಿಫಾರಸು ಮಾಡಿದೆ ಎಂದು ಅವರು ಹೇಳಿದರು.
ಸಿಇಸಿ ಹಾಗೂ ಇಬ್ಬರು ಚುನಾವಣಾ ಆಯುಕ್ತರನ್ನು ದೆಹಲಿ ಪೊಲೀಸರ ಸಣ್ಣ ಶಸ್ತ್ರಸಜ್ಜಿತ ಭದ್ರತಾ ತಂಡ ಕಾವಲು ಕಾಯುತ್ತಿದೆ. ಸಿಇಸಿ ದೇಶದ ಯಾವುದೇ ಭಾಗದಲ್ಲಿರುವಾಗ, ದೆಹಲಿಯ 'ನಿರ್ವಚನ ಸದನ'ದ ಕಚೇರಿಯಲ್ಲಿ ಮತ್ತು ಅವರ ನಿವಾಸದಲ್ಲಿ ಅವರಿಗೆ ರಕ್ಷಣೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕುಮಾರ್ 1984ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿ. ಅವರನ್ನು ಸೆಪ್ಟೆಂಬರ್ 1, 2020 ರಂದು ಚುನಾವಣಾ ಆಯುಕ್ತರಾಗಿ ನೇಮಿಸಲಾಗಿತ್ತು.ಆನಂತರ ಮೇ 15, 2022 ರಂದು 25 ನೇ ಸಿಇಸಿ ಆಗಿ ಅಧಿಕಾರ ವಹಿಸಿಕೊಂಡರು.