ಲೋಕಸಭೆ ಚುನಾವಣೆಗೆ ಮುನ್ನ ಸಿಎಎ ಅನುಷ್ಠಾನ: ಅಮಿತ್ ಶಾ ಘೋಷಣೆ
x
ನವದೆಹಲಿಯಲ್ಲಿ ಶನಿವಾರ ನಡೆದ ಇಟಿ ನೌ ಗ್ಲೋಬಲ್ ಬಿಸಿನೆಸ್ ಶೃಂಗಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಲೋಕಸಭೆ ಚುನಾವಣೆಗೆ ಮುನ್ನ ಸಿಎಎ ಅನುಷ್ಠಾನ: ಅಮಿತ್ ಶಾ ಘೋಷಣೆ


ಫೆಬ್ರವರಿ 10: ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಇಟಿ ನೌ ಗ್ಲೋಬಲ್ ಬಿಸಿನೆಸ್ ಶೃಂಗಸಭೆಯಲ್ಲಿ ಮಾತನಾಡಿ, ʻಸಿಎಎ ಒಂದು ರಾಷ್ಟ್ರೀಯ ಕಾನೂನು. ಅದನ್ನು ಚುನಾವಣೆಗೆ ಮೊದಲು ಜಾರಿಗೊಳಿಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡʼ ಎಂದು ಹೇಳಿದರು. ಸಿಎಎಯನ್ನು ಪೌರತ್ವ ನೀಡಲು ವಿನ್ಯಾಸಗೊಳಿಸಲಾಗಿದೆಯೇ ಹೊರತು ಹಿಂಪಡೆಯಲು ಅಲ್ಲ. ಕಾಯಿದೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ವಿವರಿಸಿದರು.

ಬಿಜೆಪಿಗೆ 370 ಸ್ಥಾನ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಮತ್ತು ಎನ್‌ಡಿಎ 400 ಕ್ಕೂ ಹೆಚ್ಚು ಸ್ಥಾನ ಪಡೆದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ದಲ್ಲಿ ಮೂರನೇ ಅವಧಿಗೆ ಸರ್ಕಾರ ರಚಿಸಲಿದೆ. ತಾವು ವಿರೋಧ ಪಕ್ಷದ ಬೆಂಚ್‌ಗಳಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಅರಿತುಕೊಂಡಿವೆʼ ಎಂದು ಶಾ ಹೇಳಿದರು. ʻಸಂವಿಧಾನದ 370 ನೇ ವಿಧಿ ರದ್ದುಗೊಳಿಸಿದ್ದರಿಂದ ಜನರು ಎನ್‌ಡಿಎಗೆ 400 ಕ್ಕೂ ಹೆಚ್ಚು ಸ್ಥಾನ ನೀಡಿ ಆಶೀರ್ವದಿಸುತ್ತಾರೆʼ ಎಂದು ಶಾ ಹೇಳಿದರು.

ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮತ್ತು ಇತರ ಕೆಲವು ಪ್ರಾದೇಶಿಕ ಪಕ್ಷಗಳು ಎನ್‌ಡಿಎಗೆ ಸೇರುವ ಸಾಧ್ಯತೆ ಕುರಿತ ಪ್ರಶ್ನೆಗೆ, ʻಮಾತುಕತೆ ನಡೆಯುತ್ತಿವೆ. ಆದರೆ, ಯಾವುದನ್ನೂ ಅಂತಿಮಗೊಳಿಸಿಲ್ಲʼ ಎಂದು ಹೇಳಿದರು. 2024 ರ ಚುನಾವಣೆ ಎನ್‌ಡಿಎ ಮತ್ತು ಇಂಡಿಯ ನಡುವಿನ ಚುನಾವಣೆಯಲ್ಲ. ಬದಲಾಗಿ ಅಭಿವೃದ್ಧಿ ಮತ್ತು ಕೇವಲ ಘೋಷಣೆಗಳನ್ನು ನೀಡುವವರ ನಡುವಿನ ಚುನಾವಣೆ ಎಂದು ಹೇಳಿದರು.


Read More
Next Story