ಉಪಚುನಾವಣೆ ಫಲಿತಾಂಶ: ಎನ್‌ಡಿಎ ವಿರುದ್ಧ ಮೇಲುಗೈ ಸಾಧಿಸಿದ ʼಇಂಡಿಯಾʼ ಮೈತ್ರಿಕೂಟ
x
ಎಎಪಿ ನಾಯಕರಾದ ಸಂಜಯ್ ಸಿಂಗ್ ಮತ್ತು ಸಂದೀಪ್ ಪಾಠಕ್ ಪಂಜಾಬ್‌ನ ಜಲಂಧರ್

ಉಪಚುನಾವಣೆ ಫಲಿತಾಂಶ: ಎನ್‌ಡಿಎ ವಿರುದ್ಧ ಮೇಲುಗೈ ಸಾಧಿಸಿದ ʼಇಂಡಿಯಾʼ ಮೈತ್ರಿಕೂಟ

ಪಂಜಾಬ್‌ನಲ್ಲಿ, ರಾಜ್ಯದ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಮೊಹಿಂದರ್ ಭಗತ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮತ್ತು ಬಿಜೆಪಿ ಅಭ್ಯರ್ಥಿ ಶೀತಲ್ ಅಂಗುರಾಲ್ ಅವರನ್ನು ಸೋಲಿಸುವ ಮೂಲಕ ಜಲಂಧರ್ ಪಶ್ಚಿಮ ಕ್ಷೇತ್ರವನ್ನು ಗೆದ್ದಿದ್ದಾರೆ.


Click the Play button to hear this message in audio format

ಏಳು ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಶನಿವಾರ (ಜುಲೈ 13) ನಡೆದಿದ್ದು, ವಿಪಕ್ಷಗಳ ಮೈತ್ರಿ ಕೂಟ ‘ಇಂಡಿಯಾ’ ಒಕ್ಕೂಟ ಐದು ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದರೆ, ಬಿಜೆಪಿ ಎರಡರಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.

13 ವಿಧಾನಸಭಾ ಸ್ಥಾನಗಳ ಪೈಕಿ, ಕಾಂಗ್ರೆಸ್ ಉತ್ತರಾಖಂಡದ ಎರಡು ಸ್ಥಾನಗಳಲ್ಲಿ, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಪಂಜಾಬ್ (1), ಹಿಮಾಚಲ ಪ್ರದೇಶ (3), ಉತ್ತರಾಖಂಡ (2), ಪಶ್ಚಿಮ ಬಂಗಾಳ (4), ಮಧ್ಯಪ್ರದೇಶ (1), ಬಿಹಾರ (1) ಮತ್ತು ತಮಿಳುನಾಡು (1) 13 ವಿಧಾನಸಭಾ ಸ್ಥಾನಗಳಿಗೆ ಬುಧವಾರ ಉಪಚುನಾವಣೆ ನಡೆದಿತ್ತು. ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಇಂಡಿಯಾ ಬ್ಲಾಕ್ ಪಕ್ಷಗಳಲ್ಲಿ ಕಾಂಗ್ರೆಸ್, ಟಿಎಂಸಿ, ಎಎಪಿ ಮತ್ತು ಡಿಎಂಕೆ ಸೇರಿವೆ.

ಪಂಜಾಬ್

ಪಂಜಾಬ್‌ನಲ್ಲಿ ರಾಜ್ಯದ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಮೊಹಿಂದರ್ ಭಗತ್ ಅವರು ತಮ್ಮ ಪ್ರತಿಸ್ಪರ್ಧಿ ಮತ್ತು ಬಿಜೆಪಿ ಅಭ್ಯರ್ಥಿ ಶೀತಲ್ ಅಂಗುರಾಲ್ ಅವರನ್ನು 37,325 ಮತಗಳ ಅಂತರದಿಂದ ಸೋಲಿಸುವ ಮೂಲಕ ಜಲಂಧರ್ ಪಶ್ಚಿಮ ಕ್ಷೇತ್ರವನ್ನು ಗೆದ್ದಿದ್ದಾರೆ ಎಂದು ಚುನಾವಣಾ ಆಯೋಗ (ಇಸಿ) ತಿಳಿಸಿದೆ. ಕಳೆದ ಮಾರ್ಚ್‌ನಲ್ಲಿ ಎಎಪಿ ಶಾಸಕ ಅಂಗುರಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದರಿಂದಾಗಿ ಈ ಸ್ಥಾನ ತೆರವಾಗಿತ್ತು.

ತಮಿಳುನಾಡು

ತಮಿಳುನಾಡಿನಲ್ಲಿ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಣ್ಣಿಯುರ್ ಶಿವ ಅವರು ಪಿಎಂಕೆಯ ಅನ್ಬುಮಣಿಗಿಂತ 58,785 ಮತಗಳಿಂದ ಮುಂದಿದ್ದಾರೆ ಎಂದು ಚುನಾವಣಾ ಆಯೋಗ ವರದಿ ಮಾಡಿದೆ.

ಪಶ್ವಿಮಬಂಗಾಳ

ರಾಯಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೃಷ್ಣ ಕಲ್ಯಾಣಿ ಅವರು ಬಿಜೆಪಿಯ ಮಾನಸ್ ಕುಮಾರ್ ಘೋಷ್ ಅವರನ್ನು 50,077 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮುಕುತ್ ನಮಿ ಅಧಿಕಾರಿ ರಣಘಾಟ್ ದಕ್ಷಿಣದಲ್ಲಿ ಬಿಜೆಪಿಯ ಮನೋಜ್ ಕುಮಾರ್ ಬ್ಸಿವಾಸ್ ಅವರನ್ನು 74,485 ಮತಗಳಿಂದ ಸೋಲಿಸಿದರು ಮತ್ತು ಮಧುಪರ್ಣ ಠಾಕೂರ್ ಬಾಗ್ಡಾದಲ್ಲಿ ಬಿಜೆಪಿಯ ಬಿನಯ್ ಕುಮಾರ್ ಬಿಸ್ವಾಸ್ ಅವರನ್ನು 74,251 ಮತಗಳಿಂದ ಸೋಲಿಸಿದರು. ರಾಜ್ಯದ ಮಾಣಿಕ್ತಾಲಾ ಕ್ಷೇತ್ರದಲ್ಲಿ ಟಿಎಂಸಿಯ ಸುಪ್ತಿ ಪಾಂಡೆ ಬಿಜೆಪಿಯ ಕಲ್ಯಾಣ್ ಚೌಬೆಗಿಂತ 47,827 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕಮಲೇಶ್ ತಹಕೂರ್ ಅವರು ಬಿಜೆಪಿಯ ಹೋಶಿಯಾರ್ ಸಿಂಗ್ ಅವರನ್ನು 9,399 ಮತಗಳ ಅಂತರದಿಂದ ಸೋಲಿಸಿ ಡೆಹ್ರಾ ವಿಧಾನಸಭಾ ಸ್ಥಾನವನ್ನು ಗೆದ್ದಿದ್ದಾರೆ. ನಲಗಢದಲ್ಲಿ ಕಾಂಗ್ರೆಸ್‌ನ ಹರ್ದೀಪ್ ಸಿಂಗ್ ಬಾವಾ ಅವರು ಬಿಜೆಪಿಯ ಕೆಎಲ್ ಠಾಕೂರ್ ವಿರುದ್ಧ 25,618 ಮತಗಳಿಂದ ಜಯಗಳಿಸಿದ್ದಾರೆ.

ಹಮೀರ್‌ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಶಿಶ್ ಶರ್ಮಾ 27,041 ಮತ ಗಳಿಸುವುದರೊಂದಿಗೆ ಕಾಂಗ್ರೆಸ್‌ನ ಪುಷ್ಪಿಂದರ್ ವರ್ಮಾ 25,470 ಮತಗಳನ್ನು ಗಳಿಸಿದರು ಎಂದು ಚುನಾವಣಾ ಆಯೋಗ ತಿಳಿಸಿದೆ.

ಉತ್ತರಾಖಂಡ

ಉತ್ತರಾಖಂಡದಲ್ಲಿ ಕಾಂಗ್ರೆಸ್‌ನ ಲಖಪತ್ ಸಿಂಗ್ ಬುಟೋಲಾ ಅವರು ಬಿಜೆಪಿಯ ರಾಜೇಂದ್ರ ಭಂಡಾರಿ ಅವರನ್ನು 5,224 ಮತಗಳಿಂದ ಸೋಲಿಸುವ ಮೂಲಕ ಬದರಿನಾಥ್ ಕ್ಷೇತ್ರವನ್ನು ಗೆದ್ದಿದ್ದಾರೆ.

ಉತ್ತರಾಖಂಡದ ಮಂಗಲೌರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಖಾಜಿ ನಿಜಾಮುದ್ದೀನ್ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಸಮಿತಿ ತಿಳಿಸಿದೆ. ಬಿಜೆಪಿಯ ಕರ್ತಾರ್ ಸಿಂಗ್ ಭದಾನ ಎರಡನೇ ಸ್ಥಾನದಲ್ಲಿದ್ದರೆ, ಬಿಎಸ್‌ಪಿಯ ಉಬೈದುರ್ ರೆಹಮಾನ್ ಮೂರನೇ ಸ್ಥಾನದಲ್ಲಿದ್ದಾರೆ.

ಮಧ್ಯಪ್ರದೇಶ

ಮಧ್ಯಪ್ರದೇಶದ ಅಮರವಾರ್ ಕ್ಷೇತ್ರದಲ್ಲಿ ಬಿಜೆಪಿಯ ಕಮಲೇಶ್ ಪ್ರತಾಪ್ ಷಾ ಹಲವು ಸುತ್ತುಗಳಲ್ಲಿ ಹಿನ್ನಡೆ ಸಾಧಿಸಿ 3,200ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಷಾ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಧೀರನ್ ಶಾ ಇನ್ವಟಿ ಅವರನ್ನು 3,252 ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾ 83,036 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಇನ್ವಟಿ 79,784 ಮತಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗೊಂಡ್ವಾನಾ ಗಂತಂತ್ರ ಪಾರ್ಟಿಯ (ಜಿಜಿಪಿ) ದೇವ್ರಮನ್ ಭಾಲವಿ 28,638 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.

ಬಿಹಾರ

ಬಿಹಾರದ ರುಪೌಲಿಯಲ್ಲಿ ಜೆಡಿಯುನ ಕಲಾಧರ್ ಪ್ರಸಾದ್ ಮಂಡಲ್ ಅವರು ಸ್ವತಂತ್ರ ಅಭ್ಯರ್ಥಿ ಶಂಕರ್ ಸಿಂಗ್ ವಿರುದ್ಧ 8,204 ಮತಗಳಿಂದ ಹಿನ್ನಡೆ ಹೊಂದಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.

Read More
Next Story