Kolar | ಓಂ ಶಕ್ತಿ ಯಾತ್ರಿಗಳ ಬಸ್‌ಗೆ ಕ್ಯಾಂಟರ್ ಡಿಕ್ಕಿ; ನಾಲ್ವರು ಸಾವು
ತಮಿಳುನಾಡಿನ ರಾಣಿಪೇಟೆ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕೋಲಾರ ಮೂಲದ ನಾಲ್ವರು ಮೃತಪಟ್ಟಿದ್ದಾರೆ.
ತಮಿಳುನಾಡಿನ ಮೇಲ್ಮರುವತ್ತೂರು ಓಂ ಶಕ್ತಿ ದೇವಾಲಯಕ್ಕೆ ಹೋಗಿ ವಾಪಸಾಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕರ್ನಾಟಕದ ಕೋಲಾರ ಮೂಲದ ನಾಲ್ವರು ಮೃತಪಟ್ಟಿದ್ದಾರೆ.
ತಮಿಳುನಾಡಿನ ರಾಣಿಪೇಟೆ ಬಳಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಕ್ಯಾಂಟರ್ ಚಾಲಕ ಮಂಜುನಾಥ್, ಕ್ಲೀನರ್ ಶಂಕರ್, ಸಹಾಯಕ ಸೋಮಶೇಖರ್, ರೈತ ಕೃಷ್ಣಪ್ಪ ಎಂದು ಗುರುತಿಸಲಾಗಿದೆ.
ಮುಳಬಾಗಿಲಿನಿಂದ 50 ಮಂದಿ ಓಂ ಶಕ್ತಿ ಮಾಲಾಧಾರಿಗಳು ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಮೇಲ್ಮರುವತ್ತೂರು ಓಂ ಶಕ್ತಿ ದೇವಾಲಯಕ್ಕೆ ತೆರಳಿ ವಾಪಸಾಗುತ್ತಿದ್ದರು. ರಾಣಿಪೇಟೆ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಕರ್ನಾಟಕದ ಮೂಲದ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದೆ. ಕ್ಯಾಂಟರ್, ಶ್ರೀನಿವಾಸಪುರ ತಾಲೂಕು ಸೀಗೆಹಳ್ಳಿ ಗ್ರಾಮದಿಂದ ಚೆನೈಗೆ ತರಕಾರಿ ತುಂಬಿಕೊಂಡು ಹೋಗುತ್ತಿತ್ತು.
ಕ್ಯಾಂಟರ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್‌ನಲ್ಲಿದ್ದ 30ಮಂದಿ ಮಾಲಾಧಾರಿಗಳು ಗಾಯಗೊಂಡಿದ್ದು, ನಲ್ಲೂರು ಗ್ರಾಮದ ಸರಸ್ವತಮ್ಮ ಸೇರಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ವೇಲೂರು ಸಿಎಂಸಿ ಆಸ್ಪತ್ರೆ, ರತ್ನಗಿರಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ರಾಣಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆನ್ನೈ ಹಾಗೂ ತಿರುಚ್ಚಿ ಹೆದ್ದಾರಿಯಲ್ಲಿ ದಿನೇ ದಿನೇ ಅಪಘಾತಗಳು ಹೆಚ್ಚುತ್ತಿದ್ದು, ಕಳವಳ ಮೂಡಿಸಿದೆ. ಕಳೆದ ಡಿಸೆಂಬರ್ 26 ರಂದು ಚೆಂಗಲ್ಪಟ್ಟು ಜಿಲ್ಲೆಯ ಪಾದಾಲಂ ಬಳಿ ಸಂಭವಿಸಿದ್ದ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು. ಡಿ.12 ರಂದು ಮಡುಕ್ಕರೈ ಬಳಿ ಕಾರು ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿ ಕೇರಳದ ಮೂವರು ಮೃತಪಟ್ಟಿದ್ದರು.