ಪುಣೆ ಪೋರ್ಷ್‌ ಪ್ರಕರಣ:  ಬಿಲ್ಡರ್, ತಂದೆ ಸೇರಿದಂತೆ 5 ಮಂದಿ ಮೇಲೆ ಪ್ರಕರಣ ದಾಖಲು
x

ಪುಣೆ ಪೋರ್ಷ್‌ ಪ್ರಕರಣ: ಬಿಲ್ಡರ್, ತಂದೆ ಸೇರಿದಂತೆ 5 ಮಂದಿ ಮೇಲೆ ಪ್ರಕರಣ ದಾಖಲು


ಪುಣೆ, ಜೂನ್ 6: ಪುಣೆಯಲ್ಲಿ ಮೇ 19 ರಂದು ನಡೆದ ಪೋರ್ಷ್‌ ಕಾರು ಅಪಘಾತದಲ್ಲಿ ಭಾಗಿಯಾಗಿದ್ದ ಕಾನೂನಿನ ಜೊತೆ ಸಂಘರ್ಷದಲ್ಲಿ ರುವ ಬಾಲಕನ ತಂದೆ, ಅಜ್ಜ ಮತ್ತು ಇತರ ಮೂವರ ವಿರುದ್ಧ ಪೊಲೀಸರು ಬಿಲ್ಡರ್‌ ಒಬ್ಬರ ಮಗನ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದಾರೆ.

ಪುಣೆಯ ವಡ್ಗಾಂವ್ ಶೇರಿ ಪ್ರದೇಶದ ಬಿಲ್ಡರ್‌ ಡಿ.ಎಸ್.ಕಟೂರ್ ಎಂಬುವರು ತಮ್ಮ ಮಗ ಶಶಿಕಾಂತ್ ಕಟೂರ್ ಅವರಿಗೆ ಸಾಲ ನೀಡಿದ್ದ ವಿನಯ್ ಕಾಳೆ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಶಿಕಾಂತ್‌ ಸಕಾಲದಲ್ಲಿ ಸಾಲ ಪಾವತಿಸದ್ದರಿಂದ, ಕಾಳೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ನಿರಂತರ ಕಿರುಕುಳದಿಂದ ಬೇಸತ್ತು ಶಶಿಕಾಂತ್ ಜನವರಿ 2024ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಕಾಳೆ ವಿರುದ್ಧ ನಗರದ ಚಂದನನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ʻಪ್ರಕರಣದ ತನಿಖೆ ನಡೆಸುತ್ತಿದ್ದಾಗ ಈ ಪ್ರಕರಣದಲ್ಲಿ ಬಾಲಾಪರಾಧಿಯ ತಂದೆ, ಅಜ್ಜ ಮತ್ತು ಇತರ ಮೂವರ ಪಾತ್ರ ಬೆಳಕಿಗೆ ಬಂದಿದೆ. ಈಗ ಪ್ರಕರಣಕ್ಕೆ ಐಪಿಸಿ 420 (ವಂಚನೆ) ಮತ್ತು 34 (ಸಾಮಾನ್ಯ ಉದ್ದೇಶ) ಸೆಕ್ಷನ್‌ ಸೇರಿಸಿದ್ದೇವೆ,ʼ ಎಂದು ಪೊಲೀಸ್‌ ಅಧಿಕಾರಿ ಹೇಳಿದರು.

ಅಪಘಾತ ಸಂಭವಿಸಿದಾಗ ತಾನು ಕಾರ್‌ ಚಾಲನೆ ಮಾಡುತ್ತಿದ್ದೆ ಎಂದು ಒಪ್ಪಿಕೊಳ್ಳಬೇಕೆಂದು ಚಾಲಕನ ಮೇಲೆ ಒತ್ತಡ ಹೇರಿದ ಮತ್ತು ಆತನನ್ನು ಅಕ್ರಮವಾಗಿ ಕೂಡಿಹಾಕಿದ ಬಾಲಾಪರಾಧಿಯ ಅಜ್ಜ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಾಲಾಪರಾಧಿಯ ರಕ್ತದ ಮಾದರಿಗಳನ್ನು ವಿನಿಮಯ ಮಾಡಿಕೊಂಡ ಪ್ರಕರಣದಲ್ಲಿ ಬಾಲಕನ ತಂದೆ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಮತ್ತು ತಾಯಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಕಲ್ಯಾಣಿ ನಗರದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಐಟಿ ವೃತ್ತಿಪರರು ಸಾವಿಗೀಡಾಗಿದ್ದರು.

Read More
Next Story