ಜೈಲಿನಲ್ಲಿ ಸಿಬಿಐ ವಿಚಾರಣೆಗೆ ಅನುಮತಿ: ಮರುಪರಿಶೀಲನೆಗೆ ಮನವಿ
ಏಪ್ರಿಲ್ 6- ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರು ತಿಹಾರ್ ಜೈಲಿನಲ್ಲಿ ತಮ್ಮ ವಿಚಾರಣೆಗೆ ಸಿಬಿಐಗೆ ನೀಡಿರುವ ಅನುಮತಿ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ, ಸಿಟಿ ಕೋರ್ಟ್‌ಗೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ.
ಕವಿತಾ ಅವರ ಪರ ವಕೀಲ ನಿತೇಶ್ ರಾಣಾ ಅವರು,ʻಸಿಬಿಐ ನಮ್ಮ ಬೆನ್ನ ಹಿಂದೆ ಅನುಮತಿ ಕೋರಿ, ಕಾನೂನು ಪ್ರಕ್ರಿಯೆಯನ್ನು ವಿಫಲಗೊಳಿಸಿದೆ,ʼ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ʻನ್ಯಾಯಾಲಯದಿಂದ ಅನುಕೂಲಕರ ಆದೇಶವನ್ನು ಪಡೆಯಲು ಸಿಬಿಐ ನಿಜ ಸಂಗತಿಗಳನ್ನು ಬಹಿರಂಗಪಡಿಸದೆ ಇರುವ ಆತಂಕವಿದೆ. ಕವಿತಾ ಅವರನ್ನು ನ್ಯಾಯಾಂಗ ಬಂಧನದಲ್ಲಿಡಲು ಅವಕಾಶ ನೀಡುವ ಶುಕ್ರವಾರದ ಆದೇಶವನ್ನು ತಡೆಹಿಡಿಯಬೇಕುʼ ಎಂದು ಒತ್ತಾಯಿಸಿದರು. ಕವಿತಾ ಅವರ ಮನವಿಗೆ ಉತ್ತರಿಸಲು ಸಿಬಿಐ ಸಮಯ ಕೋರಿದ್ದರಿಂದ, ವಿಚಾರಣೆಯನ್ನು ಏಪ್ರಿಲ್ 10 ಕ್ಕೆ ಮುಂದೂಡಿತು.
ಇಡಿ ಮತ್ತು ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಕವಿತಾ ಅವರಿಗೆ ಮಧ್ಯಂತರ ಪರಿಹಾರ ನೀಡಲಿಲ್ಲ. ʻನ್ಯಾಯಾಲಯ ಆದೇಶವನ್ನು ಹಿಂಪಡೆಯದಿದ್ದರೂ, ಕವಿತಾ ಅವರ ಅರ್ಜಿಯು ನ್ಯಾಯಾಧೀಶರ ಮುಂದೆ ಬಾಕಿ ಇರುವ ಕಾರಣ ತನಿಖಾ ಸಂಸ್ಥೆ ಅದನ್ನು ಕಾರ್ಯಗತ ಗೊಳಿಸುವುದನ್ನು ತಡೆಯಬೇಕುʼ ಎಂದು ರಾಣಾ ನಂತರ ಪಿಟಿಐಗೆ ತಿಳಿಸಿದರು.
ತೆಲಂಗಾಣದ ಶಾಸಕಿ 16 ವರ್ಷದ ಮಗನ ಪರೀಕ್ಷೆ ಕಾರಣಕ್ಕಾಗಿ ಮಧ್ಯಂತರ ಜಾಮೀನು ನೀಡುವಂತೆ ನ್ಯಾಯಾಲಯವನ್ನುಗುರುವಾರ ಒತ್ತಾಯಿಸಿದ್ದರು. ಅರ್ಜಿಯ ಆದೇಶವನ್ನು ಏಪ್ರಿಲ್ 8 ಕ್ಕೆ ಕಾಯ್ದಿರಿಸಿದ್ದಾರೆ.