
ಅಪರೂಪದ ಮತ್ತು ಹೆಚ್ಚಾಗಿ ಮಾರಕವಾಗುವ ಮೆದುಳಿನ ಸೋಂಕು ಆರೋಗ್ಯ ಅಧಿಕಾರಿಗಳಲ್ಲಿ ಕಳವಳವನ್ನು ಹುಟ್ಟುಹಾಕಿದೆ.
ಕೇರಳ | ಒಂದೇ ತಿಂಗಳಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿಗೆ 6 ಜನ ಬಲಿ
ಪ್ರಸ್ತುತ, 10 ರೋಗಿಗಳು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಮಲಪ್ಪುರಂ ಜಿಲ್ಲೆಯ ವಂಡೂರಿನ 54 ವರ್ಷದ ಮಹಿಳೆಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದರು.
ಕೇರಳದಲ್ಲಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಸೋಂಕಿನಿಂದ (ಮೆದುಳಿನ ಸೋಂಕು) ಮೃತಪಟ್ಟಿರುವವರ ಸಂಖ್ಯೆ ಆರಕ್ಕೆ ಏರಿದೆ. ಅಪರೂಪ ಮತ್ತು ಮಾರಕವಾದ ಮೆದುಳಿನ ಸೋಂಕು ವ್ಯಾಪ್ತಿಸುತ್ತಿರುವುದು ಆರೋಗ್ಯ ಅಧಿಕಾರಿಗಳಲ್ಲಿ ಕಳವಳ ಸೃಷ್ಟಿಸಿದೆ.
ಮಲ್ಲಪುರಂ ಜಿಲ್ಲೆಯ ಮೂಲದ ಶಾಜಿ (47) ಅವರನ್ನು ಆಗಸ್ಟ್ 9 ರಂದು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಗುರುವಾರ (ಸೆ.11) ಬೆಳಿಗ್ಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
10 ರೋಗಿಗಳಿಗೆ ಚಿಕಿತ್ಸೆ
ಮೆದುಳು ತಿನ್ನುವ ಸೋಂಕು ಹೇಗೆ ತಗುಲಿತು ಎಂಬುದನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಇದು ಪ್ರಾಥಮಿಕವಾಗಿ ಕಲುಷಿತ ನೀರಿನಲ್ಲಿ ಇರುವ ಅಮೀಬಾದಿಂದ ವ್ಯಾಪಿಸಲಿದೆ ಎಂದು ಶಂಕಿಸಲಾಗಿದೆ. ಪ್ರಸ್ತುತ 10 ರೋಗಿಗಳು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ, ಮಲಪ್ಪುರಂ ಜಿಲ್ಲೆಯ ವಂಡೂರಿನ 54 ವರ್ಷದ ಮಹಿಳೆಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದರು.
ಜುಲೈನಿಂದ ಆಗಾಗ್ಗೆ ಮೆದುಳು ಜ್ವರ ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಉತ್ತರ ಕೇರಳದಲ್ಲಿ ಬಾವಿಗಳು ಮತ್ತು ಕೊಳಗಳ ಕ್ಲೋರಿನೀಕರಣ ಸೇರಿದಂತೆ ಆರೋಗ್ಯ ಅಧಿಕಾರಿಗಳು ಶುಚಿಗೊಳಿಸುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.