
ಹತ್ಯೆಗೀಡಾದ ಯುವತಿ
ಮಧ್ಯಪ್ರದೇಶ ನರ್ಸಿಂಗ್ ವಿದ್ಯಾರ್ಥಿನಿಯ ಕತ್ತು ಸೀಳಿ ಕೊಂದ ಪ್ರಿಯಕರ; ವಿಡಿಯೊ ವೈರಲ್
ಸಂಧ್ಯಾ ಮತ್ತು ಅಭಿಷೇಕ್ ಆಸ್ಪತ್ರೆಯ ಕೊಠಡಿ ಸಂಖ್ಯೆ 22ರ ಹೊರಗೆ ಸ್ವಲ್ಪ ಸಮಯ ಮಾತನಾಡಿದ್ದಾರೆ. ನಂತರ ವಾಗ್ವಾದ ತಾರಕಕ್ಕೇರಿ, ಅಭಿಷೇಕ್ ಸಂಧ್ಯಾಳಿಗೆ ಕಪಾಳಮೋಕ್ಷ ಮಾಡಿ ನೆಲಕ್ಕೆ ಬೀಳಿಸಿದ್ದಾನೆ. ಬಳಿಕ ಆಕೆಯ ಎದೆ ಮೇಲೆ ಕುಳಿತು ಚಾಕುವಿನಿಂದ ಕುತ್ತಿಗೆ ಸೀಳಿದ್ದಾನೆ.
ಮಧ್ಯಪ್ರದೇಶದ ನರ್ಸಿಂಗ್‌ಪುರ್ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಪ್ರಿಯಕರ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಆಸ್ಪತ್ರೆಗಳ ಭದ್ರತಾ ವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯಲ್ಲಿನ ಗಂಭೀರ ಲೋಪಗಳನ್ನು ಎತ್ತಿ ತೋರಿಸಿದೆ. ಹತ್ಯೆಯ ಭೀಕರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಜೂನ್ 27ರಂದು ಸಂಧ್ಯಾ ಚೌಧರಿ ಎಂಬ ನರ್ಸಿಂಗ್ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದಾಗ, ಆಕೆಯ ಪ್ರಿಯಕರ ಅಭಿಷೇಕ್ ಕೋಷ್ಟಿ ಎಂಬಾತ ತುರ್ತು ಘಟಕದ ಬಳಿ ಆಕೆಯ ಮೇಲೆ ದಾಳಿ ನಡೆಸಿದ್ದಾನೆ. ಜೂನ್ 30ರಂದು ಬಹಿರಂಗವಾದ ವಿಡಿಯೋದಲ್ಲಿ, ಅಭಿಷೇಕ್, ಸಂಧ್ಯಾಳ ಕುತ್ತಿಗೆಯನ್ನು ಸೀಳುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಆಘಾತಕ್ಕೊಳಗಾದ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ನೂರಾರು ಜನರು ಈ ಘಟನೆಯನ್ನು ನೋಡುತ್ತಿದ್ದರೂ, ಯಾರೊಬ್ಬರೂ ಮಧ್ಯಪ್ರವೇಶಿಸದೆ ಮೂಕಪ್ರೇಕ್ಷಕರಾಗಿದ್ದು ದುರಂತದ ಮತ್ತೊಂದು ಮಗ್ಗುಲು.
ಕೊಲೆಗೆ ಮೊದಲು ವಾಗ್ವಾದ ನಡೆಸಿದ್ದರು
ಸಂಧ್ಯಾ ಮತ್ತು ಅಭಿಷೇಕ್ ಆಸ್ಪತ್ರೆಯ ಕೊಠಡಿ ಸಂಖ್ಯೆ 22ರ ಹೊರಗೆ ಸ್ವಲ್ಪ ಸಮಯ ಮಾತನಾಡಿದ್ದಾರೆ. ನಂತರ ವಾಗ್ವಾದ ತಾರಕಕ್ಕೇರಿ, ಅಭಿಷೇಕ್ ಸಂಧ್ಯಾಳಿಗೆ ಕಪಾಳಮೋಕ್ಷ ಮಾಡಿ ನೆಲಕ್ಕೆ ಬೀಳಿಸಿದ್ದಾನೆ. ಬಳಿಕ ಆಕೆಯ ಎದೆ ಮೇಲೆ ಕುಳಿತು ಚಾಕುವಿನಿಂದ ಕುತ್ತಿಗೆ ಸೀಳಿದ್ದಾನೆ. ಈ ಭಯಾನಕ ದಾಳಿ ಸುಮಾರು ಹತ್ತು ನಿಮಿಷಗಳ ಕಾಲ ನಡೆದಿದ್ದು, ಆಸ್ಪತ್ರೆಯ ತುರ್ತು ವಿಭಾಗದೊಳಗೆ, ವೈದ್ಯರು ಮತ್ತು ಭದ್ರತಾ ಸಿಬ್ಬಂದಿಯ ಕಣ್ಣ ಮುಂದೆಯೇ ನಡೆದಿದೆ ಎಂಬುದು ಭದ್ರತಾ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಸೂಚಿಸುತ್ತದೆ. ದಾಳಿ ನಂತರ ಅಭಿಷೇಕ್ ತನ್ನನ್ನು ತಾನು ಇರಿದುಕೊಳ್ಳಲು ಯತ್ನಿಸಿ ವಿಫಲನಾಗಿ, ಸ್ಥಳದಿಂದ ಪರಾರಿಯಾಗಿದ್ದಾನೆ.
ಕೊಲೆ ನಡೆದ ತಕ್ಷಣ ಆರೋಪಿಯ ಬಂಧನ
ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಭಿಷೇಕ್ ಮತ್ತು ಸಂಧ್ಯಾ ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನರ್ಸಿಂಗ್‌ಪುರ್ ಎಸ್‌ಪಿ ಮೃಗಾಖಿ ಡೆಕಾ ಅವರ ಪ್ರಕಾರ, ಆರೋಪಿ ಅಭಿಷೇಕ್ ಘಟನಾ ಸ್ಥಳಕ್ಕೆ ಬಂದು ಚಾಕುವಿನಿಂದ ಸಂಧ್ಯಾ ಮೇಲೆ ದಾಳಿ ಮಾಡಿದ್ದು, ಅವಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಅಭಿಷೇಕ್‌ನನ್ನು ಬಂಧಿಸಿ, ವಶಕ್ಕೆ ಪಡೆದಿದ್ದಾರೆ.
ಕೊಲೆಗೆ ಅನುಮಾನವೇ ಕಾರಣ
ಪೊಲೀಸರ ವಿಚಾರಣೆ ವೇಳೆ, ಅಭಿಷೇಕ್ ತಾನು ಸಂಧ್ಯಾಳನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ. ಸಂಧ್ಯಾ ಇನ್ನೊಬ್ಬ ಯುವಕನೊಂದಿಗೆ ಹತ್ತಿರವಾಗುತ್ತಿದ್ದಳು ಎಂಬ ಅನುಮಾನವೇ ಕೊಲೆಗೆ ಪ್ರೇರಣೆ ಎಂದು ಅಭಿಷೇಕ್ ತಿಳಿಸಿದ್ದಾನೆ. ಸಂಧ್ಯಾ ತರಕಾರಿ ಮಾರಾಟಗಾರರಾಗಿದ್ದ ತನ್ನ ಪೋಷಕರಿಗೆ ಏಕೈಕ ಪುತ್ರಿಯಾಗಿದ್ದಳು. ಆಕೆಯ ಕುಟುಂಬ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆಯ ದೇಹ ಘಟನಾ ಸ್ಥಳದಲ್ಲಿಯೇ ಇತ್ತು. ಇದರಿಂದ ಆಕ್ರೋಶಗೊಂಡ ಕುಟುಂಬದವರು ಆಸ್ಪತ್ರೆಯ ಹೊರಗೆ ರಸ್ತೆ ತಡೆ ನಡೆಸಿದ್ದರು. ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ನಿಂತಿತು.
ಸುರಕ್ಷತಾ ಲೋಪಗಳ ಕುರಿತು 20 ದಿನಗಳ ಹಿಂದೆ ಇದೇ ಆಸ್ಪತ್ರೆಯ ಶೌಚಾಲಯದಲ್ಲಿ ಯುವತಿಯೊಬ್ಬಳು ಮೃತ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಈ ಭೀಕರ ಕೊಲೆ ಪ್ರಕರಣ ನಡೆದಿರುವುದು ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.