ದೆಹಲಿ ಕೋಚಿಂಗ್ ಸೆಂಟರ್ ದುರಂತ: ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ
x

ದೆಹಲಿ ಕೋಚಿಂಗ್ ಸೆಂಟರ್ ದುರಂತ: ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ

ನಗರದಲ್ಲಿ ಕಟ್ಟಡಗಳ ನಿರ್ಮಾಣ, ಅಗ್ನಿ ಸುರಕ್ಷತೆ ಮತ್ತು ಪ್ರವಾಹ ಸುರಕ್ಷತೆ ನಿಯಮಗಳ ವ್ಯಾಪಕ ಉಲ್ಲಂಘನೆ ಸೇರಿದಂತೆ, ಪರಿಹರಿಸಬೇಕಾದ ಗಂಭೀರ ಸಮಸ್ಯೆಗಳಿವೆ ಎಂದು ಸಂಸದ ಶಶಿ ತರೂರ್ ಅವರು ಹೇಳಿದರು.


ದೆಹಲಿಯ ಹಳೆಯ ರಾಜೀಂದರ್ ನಗರ ಪ್ರದೇಶದ ಕೋಚಿಂಗ್ ಕೇಂದ್ರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಭವಿಸಿದ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿನ ಪ್ರಕರಣವು ಸೋಮವಾರ (ಜುಲೈ 29) ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ದುರಂತಕ್ಕೆ ಎಎಪಿ ಸರ್ಕಾರವನ್ನು ಬಿಜೆಪಿ ದೂಷಿಸಿದ್ದು, ಲೋಕಸಭೆ ಸದಸ್ಯರು ಪಕ್ಷಾತೀತರಾಗಿ ಪ್ರಕರಣದ ಬಗ್ಗೆ ತನಿಖೆಗೆ ಒತ್ತಾಯಿಸಿದರು.‌

ಸಮಗ್ರ ತನಿಖೆಗೆ ಕಾಂಗ್ರೆಸ್ ಆಗ್ರಹ: ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸುರಕ್ಷತೆ ಸಂಹಿತೆಯ ಉಲ್ಲಂಘನೆ ಆಗಿದೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಹಾಗೂ ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ʻಇದೊಂದು ನಾಚಿಕೆಗೇಡಿನ ಸಂಗತಿ. ಈ ಯುವಕರ ಕನಸುಗಳು ಭಗ್ನಗೊಂಡಿವೆ ಮತ್ತು ಅವರ ಕುಟುಂಬದ ಭರವಸೆಗಳು ಅಳಿಸಿವೆ. ದೇಶ ಮತ್ತು ಅದರ ಭವಿಷ್ಯಕ್ಕೆ ತೀವ್ರ ಧಕ್ಕೆಯಾಗಿದೆ. ಪರಿಹಾರ ಅಗತ್ಯವಿದ್ದರೂ, ಇಂತಹ ದುರಂತಗಳು ಮತ್ತೆ ಸಂಭವಿಸದಂತೆ ತಡೆಯುವುದು ಅತ್ಯಂತ ಮುಖ್ಯ. ನಗರದಲ್ಲಿ ಕಟ್ಟಡಗಳ ನಿರ್ಮಾಣ, ಅಗ್ನಿ ಸುರಕ್ಷತೆ ಮತ್ತು ಪ್ರವಾಹ ಸುರಕ್ಷತೆ ನಿಯಮಗಳ ವ್ಯಾಪಕ ಉಲ್ಲಂಘನೆ ಸೇರಿದಂತೆ, ಪರಿಹರಿಸಬೇಕಾದ ಗಂಭೀರ ಸಮಸ್ಯೆಗಳಿವೆʼ ಎಂದು ಅವರು ಹೇಳಿದರು.

ಬುಲ್ಡೋಜರ್‌ ಓಡಿಸುತ್ತೀರಾ?: ಸಮಾಜವಾದಿ ಪಕ್ಷ (ಎಸ್‌ಪಿ)ದ ಮುಖ್ಯಸ್ಥ ಅಖಿಲೇಶ್ ಯಾದವ್, ʻಇದೊಂದು ದುರಂತವಾಗಿದ್ದು, ಇದಕ್ಕೆ ಯಾರು ಹೊಣೆ ಎಂದು ಖಚಿತಪಡಿಸಿಕೊಳ್ಳಲು ಸಮಗ್ರ ತನಿಖೆಯಾಗಬೇಕು,ʼ ಎಂದರು. ʻಇದೊಂದು ನೋವಿನ ಘಟನೆ. ಯೋಜನೆಗೆ ಎನ್‌ಒಸಿ ನೀಡುವುದು ಅಧಿಕಾರಿಗಳ ಜವಾಬ್ದಾರಿ. ಯಾರು ಹೊಣೆಗಾರರು ಮತ್ತು ಅವರ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದೇ ಪ್ರಶ್ನೆ. ಇದು ಅಕ್ರಮ ಕಟ್ಟಡದ ಒಂದೇ ಒಂದು ಪ್ರಕರಣವಲ್ಲ; ಯುಪಿಯಲ್ಲಿ ಅಕ್ರಮ ಕಟ್ಟಡಗಳನ್ನು ಬುಲ್ಡೋಜರಿನಿಂದ ಉರುಳಿಸುತ್ತಿರುವುದನ್ನು ನೋಡಿದ್ದೇವೆ. ಸರ್ಕಾರ ಇಲ್ಲೂ ಬುಲ್ಡೋಜರ್ ಓಡಿಸುತ್ತದೆಯೇ?,ʼ ಎಂದು ಪ್ರಶ್ನಿಸಿದರು.

ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಸಂಸದೆ ವಾಗ್ದಾಳಿ: ನವದೆಹಲಿಯ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್, ವಿದ್ಯಾರ್ಥಿಗಳ ಸಾವಿಗೆ ಎಎಪಿಯ ಸಂಪೂರ್ಣ ನಿರಾಸಕ್ತಿ ಕಾರಣ. ಘಟನೆಯ ತನಿಖೆಗೆ ಗೃಹ ಸಚಿವಾಲಯದ ಅಡಿಯಲ್ಲಿ ತನಿಖಾ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು.

ʻಆಮ್ ಆದ್ಮಿ ಪಕ್ಷದ ಕ್ರಿಮಿನಲ್ ನಿರ್ಲಕ್ಷ್ಯ ಈ ವಿದ್ಯಾರ್ಥಿಗಳ ಸಾವಿಗೆ ಕಾರಣ. ಭ್ರಷ್ಟಾಚಾರದಲ್ಲಿ ಮುಳುಗಿರುವ ದೆಹಲಿ ಸರ್ಕಾರದ ವಿರುದ್ಧ ತನಿಖೆ ನಡೆಸಬೇಕು. ದೆಹಲಿಯಲ್ಲಿ ಚರಂಡಿಗಳನ್ನು ಏಕೆ ಸ್ವಚ್ಛಗೊಳಿಸುತ್ತಿಲ್ಲ?,ʼ ಎಂದು ಶೂನ್ಯ ವೇಳೆಯಲ್ಲಿ ಪ್ರಶ್ನಿಸಿದರು.

'ವಾಣಿಜ್ಯೀಕರಣ'ದ ಬಗ್ಗೆ ಕಾಳಜಿ: ರಾಜ್ಯಸಭಾಧ್ಯಕ್ಷ ಜಗದೀಪ್ ಧನಖರ್ ಅವರು ಕೋಚಿಂಗ್ ಕೇಂದ್ರಗಳ ವಾಣಿಜ್ಯೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ದೆಹಲಿ ಘಟನೆ ಕುರಿತು ಅಲ್ಪಾವಧಿ ಚರ್ಚೆಗೆ ಅವಕಾಶ ನೀಡಿದರು.

ʻತರಬೇತಿ ನೀಡುವಿಕೆ ವಾಣಿಜ್ಯ ವ್ಯವಹಾರವಾಗಿದೆ. ಪ್ರತಿದಿನ ದಿನಪತ್ರಿಕೆಯನ್ನು ಕೈಗೆತ್ತಿಕೊಂಡಾಗ, ಮೊದಲ ಅಥವಾ ಎರಡು ಪುಟಗಳಲ್ಲಿ ಇಂಥ ಕೋಚಿಂಗ್‌ ಕೇಂದ್ರಗಳ ಜಾಹೀರಾತು ಇರುತ್ತದೆ. ದಿಲ್ಲಿ ದುರಂತ ಸಂಬಂಧ ರಾಜ್ಯಸಭೆಯಲ್ಲಿ ಅಲ್ಪಾವಧಿ ಚರ್ಚೆ ಅಥವಾ ಗಮನ ಸೆಳೆಯುವ ಸೂಚನೆ ನೀಡುವುದು ಸೂಕ್ತವೆಂದು ಭಾವಿಸುತ್ತೇನೆ. ಈ ಬಗ್ಗೆ ತಮ್ಮ ಕೊಠಡಿಯಲ್ಲಿ ಎಲ್ಲಾ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸುತ್ತೇನೆ,ʼ ಎಂದು ಹೇಳಿದರು.

ಇದಕ್ಕೂ ಮುನ್ನ, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಒಪ್ಪಂದದ ಕೊರತೆಯಿಂದ ಪ್ರಕರಣ ಕುರಿತು ಚರ್ಚೆಗೆ ಅವಕಾಶ ನೀಡುವ ನಿರ್ಧಾರವನ್ನು ಧನಖರ್ ಮುಂದೂಡಿದರು.

ಬಿಜೆಪಿಯ ಸುಧಾಂಶು ತ್ರಿವೇದಿ, ರಾಮಚಂದ್ರ ಜಾಂಗ್ರಾ, ಸುರೇಂದ್ರ ಸಿಂಗ್ ನಗರ್, ಎಎಪಿಯ ಸ್ವಾತಿ ಮಲಿವಾಲ್ ಮತ್ತು ಸಿಪಿಐ (ಎಂ)ನ ಜಾನ್ ಬ್ರಿಟಾಸ್ ಸೇರಿದಂತೆ ಹಲವು ಸದಸ್ಯರು ನಿಯಮ 267 ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿದರು.

ಆದರೆ, ಪ್ರತಿಪಕ್ಷ ಕಾಂಗ್ರೆಸ್ ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಧನಖರ್ ತಿಳಿಸಿದರು. ಸಮಸ್ಯೆ ಕುರಿತು ಅಲ್ಪಾವಧಿ ಚರ್ಚೆ ಅಥವಾ ವಿಷಯದ ಬಗ್ಗೆ ಗಮನ ಸೆಳೆಯುವ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಲು ವಿರೋಧ ಪಕ್ಷದ ಹಿರಿಯ ನಾಯಕರ ಸಲಹೆಯನ್ನು ಪಡೆಯುವುದಾಗಿ ಅವರು ಸ್ಪಷ್ಟಪಡಿಸಿದರು.

176 ಅಥವಾ 180 ನಿಯಮಗಳ ಅಡಿಯಲ್ಲಿ ಅಲ್ಪಾವಧಿಯ ಚರ್ಚೆ ಅಥವಾ ಗಮನ ಸೆಳೆಯುವ ಪ್ರಸ್ತಾಪವನ್ನು ಪರಿಗಣಿಸಲು ಧನಖರ್ ಪ್ರಸ್ತಾಪಿಸಿದರು. ಶೂನ್ಯ ಸಮಯದ ನಂತರ ಪಕ್ಷದ ನಾಯಕರನ್ನು ಸಂಪರ್ಕಿಸುವುದಾಗಿ ಹೇಳಿದರು.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ʻಯಾವುದೇ ನಿಯಮದ ಅಡಿಯಲ್ಲಾದರೂʼ ತುರ್ತು ಚರ್ಚೆಯನ್ನು ಬೆಂಬಲಿಸುವುದಾಗಿ ಹೇಳಿದರು. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಣಿಪುರ ಮತ್ತು ನೀಟ್ ವಿಷಯದ ಬಗ್ಗೆಯೂ ಚರ್ಚೆ ಅವಕಾಶ ಕೇಳಿದರು.ಆ ವಿಷಯ ಪ್ರಸ್ತುತ ತಮ್ಮ ಮುಂದೆ ಇಲ್ಲ ಎಂದು ಸಭಾಪತಿ ಹೇಳಿದರು.

Read More
Next Story