
ಬಾರ್ಡರ್-ಗವಾಸ್ಕರ್ ಟ್ರೋಫಿ: 5 ಟೆಸ್ಟ್‌ಗಳ ಸರಣಿ ನವೆಂಬರ್‌ನಲ್ಲಿ
ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ಮತ್ತು ಆಸ್ಟ್ರೇಲಿಯ 2024ರ ಅಂತ್ಯದಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಲಿವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮಾ.25ರಂದು ಪ್ರಕಟಿಸಿದೆ.
ಭಾರತ ಮತ್ತು ಆಸ್ಟ್ರೇಲಿಯ ನಾಲ್ಕು ಪಂದ್ಯಗಳ ಬದಲು ಐದು ಟೆಸ್ಟ್‌ಗಳ ಸರಣಿಯನ್ನು ಆಡುತ್ತಿರುವುದು ಇದೇ ಮೊದಲು. 2024-25ರ ಸರಣಿಯ ಪೂರ್ಣ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಕ್ರಿಕೆಟ್ ಆಸ್ಟ್ರೇಲಿಯ ಎಕ್ಸ್ ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ʻಮೊದಲ ಬಾರಿಗೆ ಆಸ್ಟ್ರೇಲಿಯ ಮತ್ತು ಭಾರತ ಐದು ಟೆಸ್ಟ್ ಗಳ ಸರಣಿಯಲ್ಲಿ ಸೆಣೆಸಲಿವೆʼ ಎಂದಿದೆ. ಬಿಸಿಸಿಐ ಮತ್ತು ಸಿಎ ಜಂಟಿಯಾಗಿ ವಿಷಯವನ್ನು ಪ್ರಕಟಿಸಿವೆ.
ʻಬಿಸಿಸಿಐ ಟೆಸ್ಟ್ ಕ್ರಿಕೆಟ್‌ನ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲಿದೆ. ಐದು ದಿನಗಳ ಟೆಸ್ಟ್ ಅನ್ನುಹೆಚ್ಚು ಗೌರವಿಸುತ್ತೇವೆʼ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಉಭಯ ತಂಡಗಳ ನಡುವಿನ ಹಿಂದಿನ ನಾಲ್ಕು ಸರಣಿಗಳಲ್ಲಿ ಭಾರತ 2018-19 ಮತ್ತು 2020-21ರಲ್ಲಿ ಗೆಲುವು ಸಾಧಿಸಿದೆ. ಆದರೆ, ಕಳೆದ ವರ್ಷ ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಬಳಗವು ಭಾರತವನ್ನು ಸೋಲಿಸಿತು.
ಐದು ಪಂದ್ಯಗಳ ಸರಣಿಯ ಆರಂಭಿಕ ಟೆಸ್ಟ್ ಪರ್ತ್‌ನಲ್ಲಿ ನಡೆಯಲಿದೆ. ವರ್ಷದ ನವೆಂಬರ್ ಅಂತ್ಯದಲ್ಲಿ ಸರಣಿ ಪ್ರಾರಂಭವಾಗುವ ಸಾಧ್ಯತೆಯಿದೆ. ʻಎರಡು ಶ್ರೇಷ್ಠ ಕ್ರಿಕೆಟ್ ರಾಷ್ಟ್ರಗಳ ನಡುವೆ ಪೈಪೋಟಿ ಮತ್ತು ಉತ್ಸಾಹ ತರುವ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಐದು ಟೆಸ್ಟ್‌ಗಳಿಗೆ ವಿಸ್ತರಿಸಿರುವುದು ನಮಗೆ ಸಂತೋಷ ತಂದಿದೆʼ ಎಂದು ಸಿಎ ಅಧ್ಯಕ್ಷ ಮೈಕ್ ಬೈರ್ಡ್ ಹೇಳಿದ್ದಾರೆ.