Badlapur sexual abuse: ಬಾಂಬೆ ಹೈಕೋರ್ಟಿನಲ್ಲಿ ಇಂದು ವಿಚಾರಣೆ
ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ ಪಟ್ಟಣದ ಶಾಲೆಯಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಘಟನೆ ಕುರಿತು ಬಾಂಬೆ ಹೈಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠವು ಇಂದು(ಗುರುವಾರ) ವಿಚಾರಣೆ ನಡೆಸಲಿದೆ.
ಶಿಶುವಿಹಾರದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅಟೆಂಡರ್ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಖಂಡಿಸಿ, ಮಂಗಳವಾರ ಬದ್ಲಾಪುರ ದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಅಧಿಕಾರಿಗಳು ಬುಧವಾರ ಪಟ್ಟಣದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 72 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನ್ಯಾಯಾಲಯ ಆರೋಪಿಯ ಪೊಲೀಸ್ ಕಸ್ಟಡಿಯನ್ನು ಆಗಸ್ಟ್ 26 ರವರೆಗೆ ವಿಸ್ತರಿಸಿದೆ.
ಪ್ರಕರಣದ ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿ ಆರ್ತಿ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ, ಶಾಲೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣದ ಶೀಘ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳ ಲಾಗುವುದು ಎಂದು ಹೇಳಿದ್ದಾರೆ.
ಶಾಲೆಯ ಆಡಳಿತ ಮಂಡಳಿಯು ಪ್ರಾಂಶುಪಾಲರು, ತರಗತಿ ಶಿಕ್ಷಕಿ ಮತ್ತು ಮಹಿಳಾ ಅಟೆಂಡರ್ ನ್ನು ಅಮಾನತುಗೊಳಿಸಿದೆ. ಸರ್ಕಾರ ಕರ್ತವ್ಯಲೋಪದ ಆರೋಪದ ಮೇಲೆ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಗೊಳಿಸಿದೆ.
ಅಧಿಕಾರಿಗಳು ಬಾಲಕಿಯರ ಪೋಷಕರನ್ನು ಬದ್ಲಾಪುರ ಪೊಲೀಸ್ ಠಾಣೆಯಲ್ಲಿ 11 ಗಂಟೆ ಕಾಲ ಕಾಯುವಂತೆ ಮಾಡಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.