ತಲ್ಲಣ ಸೃಷ್ಟಿಸಿದ ಬಾಂಬ್ ಬೆದರಿಕೆ ಕರೆಗಳು; ಆರ್ಥಿಕ ನಷ್ಟದತ್ತ ವೈಮಾನಿಕ ಸಂಸ್ಥೆಗಳು
ಶನಿವಾರ ಒಂದೇ ದಿನ 30 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿರುವುದು ಭದ್ರತಾ ಸಿಬ್ಬಂದಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೇ ಮಾರ್ಗ ಬದಲಾವಣೆ,ತುರ್ತು ಭೂಸ್ಪರ್ಶ ಕ್ರಮಗಳಿಂದ ವಿಮಾನಯಾನ ಸಂಸ್ಥೆಗಳು ತೀವ್ರ ನಷ್ಟಕ್ಕೆ ಒಳಗಾಗುತ್ತಿವೆ.
ಕಳೆದ ಒಂದು ವಾರದಿಂದ ಬರುತ್ತಿರುವ ಹುಸಿ ಬಾಂಬ್ ಬೆದರಿಕೆಗಳಿಂದ ಭಾರತೀಯ ವಿಮಾನಯಾನ ಸಂಸ್ಥೆಗಳು ಆರ್ಥಿಕವಾಗಿ ನಷ್ಟದತ್ತ ಸಾಗುತ್ತಿವೆ. ಶನಿವಾರ ಒಂದೇ ದಿನ 30 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿರುವುದು ಭದ್ರತಾ ಸಿಬ್ಬಂದಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೇ ಮಾರ್ಗ ಬದಲಾವಣೆ,ತುರ್ತು ಭೂಸ್ಪರ್ಶ ಕ್ರಮಗಳಿಂದ ವಿಮಾನಯಾನ ಸಂಸ್ಥೆಗಳು ತೀವ್ರ ನಷ್ಟಕ್ಕೆ ಒಳಗಾಗುತ್ತಿವೆ ಎಂದು ಹೇಳಲಾಗಿದೆ.
ದೇಶಿಯ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ವಿಸ್ತಾರಾ ಏರ್‌ಲೈನ್ಸ್, ಇಂಡಿಗೋ, ಆಕಾಶ ಏರ್, ಸ್ಪೈಸ್ ಜೆಟ್, ಸ್ಟಾರ್ ಏರ್ ಮತ್ತು ಅಲಯನ್ಸ್ ಏರ್ ವಿಮಾನಗಳು ಶನಿವಾರ ಬಾಂಬ್ ಬೆದರಿಕೆ ಸ್ವೀಕರಿಸಿವೆ. ಆಶ್ಚರ್ಯವೆಂದರೆ ಒಂದು ವಾರದಲ್ಲಿ ಒಟ್ಟು 70 ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳು ಬಾಂಬ್ ಬೆದರಿಕೆ ಸ್ವೀಕರಿಸಿವೆ. ಆದರೆ, ಈ ಎಲ್ಲವೂ ಹುಸಿ ಬೆದರಿಕೆಗಳೆಂಬುದು ದೃಢಪಟ್ಟಿವೆ.
ವಿಮಾನದ ಶೌಚಾಲಯದಲ್ಲಿ ಬೆದರಿಕೆ ಪತ್ರ
ಬಾಂಬ್ ಬೆದರಿಕೆ ಸ್ವೀಕರಿಸಿದ ಬಳಿಕ ಭದ್ರತಾ ಸಿಬ್ಬಂದಿ ಶಿಷ್ಟಾಚಾರದಂತೆ ವಿಮಾನ ಹಾಗೂ ಪ್ರಯಾಣಿಕರ ತಪಾಸಣಾ ಕಾರ್ಯ ನಡೆಸುತ್ತಿದ್ದಾರೆ. ವಿಸ್ತಾರಾ ಏರ್ ವಿಮಾನದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಶೌಚಾಲಯದಲ್ಲಿ ಬಾಂಬ್ ಬೆದರಿಕೆಯ ಪತ್ರ ದೊರೆತಿರುವುದು ಕಳವಳ ಸೃಷ್ಟಿಸಿದೆ. ಹಾಗಾಗಿ ಇನ್ನು ಮುಂದೆ ಪ್ರಯಾಣಿಕರ ಕಟ್ಟುನಿಟ್ಟಿನ ತಪಾಸಣೆಗೆ ನಿರ್ಧರಿಸಲಾಗಿದೆ ಎಂದು ಇಂಡಿಯನ್ ಏರ್‌ಲೈನ್ಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಿದ ಆಕಾರ್ ಏರ್ ಸಂಸ್ಥೆಯ QP 1323( ಬೆಂಗಳೂರು-ಗುವಾಹಟಿ), QP 1373 (ಬಗ್ದೋಗ್ರಾ- ಬೆಂಗಳೂರು), QP 1385 (ಮುಂಬೈ-ಬಾಗ್ದೋಗ್ರಾ) QP 1405 (ಹೈದರಾಬಾದ್- ದೆಹಲಿ) ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿದ್ದರಿಂದ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಅದೇ ರೀತಿ ಇಂಡಿಗೋ ವಿಮಾನಯಾನದ 6E17 (ಮುಂಬೈ- ಇಸ್ತಾಂಬುಲ್), 6E11 (ದೆಹಲಿ- ಇಸ್ತಾಂಬುಲ್), 6E184 (ಜೋಧ್‌ಪುರ -ದೆಹಲಿ), 6E108 (ಹೈದರಾಬಾದ್-ಚಂಡೀಗಢ) ಮತ್ತು 6E58 (ಜೆಡ್ಡಾ-ಮುಂಬೈ) ವಿಮಾನಗಳಿಗೂ ಬೆದರಿಕೆ ಬಂದಿತ್ತು.
ವಿಮಾನಯಾನ ಸಂಸ್ಥೆಗಳ ಎಕ್ಸ್ ಖಾತೆ ನಿಷ್ಕ್ರಿಯ
ಗಮನಾರ್ಹ ಸಂಖ್ಯೆಯಲ್ಲಿ ವಿಮಾನಗಳಿಗೆ ಬೆದರಿಕೆ ಸಂದೇಶ, ಕರೆ ಬರುತ್ತಿರುವ ಕಾರಣ ವಿಮಾನಯಾನ ಸಂಸ್ಥೆಗಳು ತನ್ನ ಎಕ್ಸ್ ಖಾತೆಯನ್ನು ನಿಷ್ಕ್ರಿಯಗೊಳಿಸಿವೆ. ಏಕೆಂದರೆ ಬಹುತೇಕ ಬೆದರಿಕೆಗಳು ಇದೇ ಜಾಲತಾಣದ ಮೂಲಕ ಬರುತ್ತಿರುವುದರಿಂದ ಈ ಉಪಕ್ರಮ ಅನುಸರಿಸಿವೆ. ಈ ಮಧ್ಯೆ ನಾಗರಿಕ ವಿಮಾನಯಾನ ಸಚಿವಾಲಯವು ಹುಸಿ ಬಾಂಬ್ ಬೆದರಿಕೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಾದ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ. ಬೆದರಿಕೆ ಹಾಕುವವರನ್ನು ಪತ್ತೆ ಹಚ್ಚಿ ನೊ-ಫ್ಲೈ ಪಟ್ಟಿಗೆ(ವಿಮಾನಯಾನ ನಿರ್ಬಂಧ) ಸೇರಿಸಲು ತೀರ್ಮಾನಿಸಿದೆ.
ಇನ್ನೊಂದೆಡೆ ನವದೆಹಲಿಯಲ್ಲಿ ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ(ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ) ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು, ಭದ್ರತಾ ಕ್ರಮಗಳನ್ನು ಬಿಗಿಗೊಳಿಸುವ ಸಂಬಂಧ ಮಾತುಕತೆ ನಡೆಸಿದೆ.
ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ಸಂಕಷ್ಟ
ಹುಸಿ ಬಾಂಬ್ ಬೆದರಿಕೆಗಳಿಂದ ವಿಮಾನಯಾನ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿವೆ ಎಂದು ಉದ್ಯಮ ತಜ್ಞರು ವಿಶ್ಲೇಷಿಸಿದ್ದಾರೆ.
ಮಾರ್ಗಮಧ್ಯೆ ದಿಢೀರನೇ ಬಾಂಬ್ ಬೆದರಿಕೆ ಸ್ವೀಕರಿಸುವುದರಿಂದ ವಿಮಾನಗಳನ್ನು ಸಮೀಪದ ನಿಲ್ದಾಣಗಳಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಗಿರುತ್ತದೆ. ಇದರಿಂದ ಸಾಕಷ್ಟು ಇಂಧನ ಖರ್ಚಾಗಲಿದೆ. ಅಂತಿಮವಾಗಿ ವಿಮಾನಯಾನ ಸಂಸ್ಥೆಗಳು ನಷ್ಟಕ್ಕೆ ಒಳಗಾಗಬಕಾಗುತ್ತದೆ ಎಂದು ಹೇಳಿದ್ದಾರೆ.
ಏರ್ ಇಂಡಿಯಾ ಬೋಯಿಂಗ್ -777 ರಂದು ಮುಂಬೈನಿಂದ ನ್ಯೂಯಾರ್ಕ್ ನಿಲ್ದಾಣಕ್ಕೆ 16 ಗಂಟೆಗಳ ತಡೆರಹಿತ ಹಾರಾಟ ನಡೆಸಲು 130 ಟನ್ ಜೆಟ್ ಇಂಧನ ತುಂಬಿಸಲಾಗಿತ್ತು. ಟೇಕಾಫ್ ಆದ ಕೆಲ ಗಂಟೆಗಳಲ್ಲೇ ಬಾಂಬ್ ಬೆದರಿಕೆ ಸ್ವೀಕರಿಸಿತು. ಆಗ ಎರಡು ಗಂಟೆಗಳಲ್ಲಿ ನವದೆಹಲಿ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲು ನಿರ್ಧರಿಸಲಾಯಿತು.
ಪ್ರಯಾಣಿಕರು, ಸರಕು ಸಹಿತ 340-350 ಟನ್ ತೂಕದ ವಿಮಾನ ತುರ್ತು ಭೂಸ್ಪರ್ಶ ಮಾಡಿಸುವುದು ಸವಾಲಾಗಿತ್ತು. ಏಕೆಂದರೆ ಗರಿಷ್ಠ ಲ್ಯಾಂಡಿಂಗ್ ತೂಕ 250 ಟನ್ ಇರುವುದರಿಂದ ದೊಡ್ಡ ಸವಾಲು ಎದುರಾಗಿತ್ತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಯಲು ಸುಮಾರು 100 ಟನ್ ಇಂಧನ ಅನವಶ್ಯಕವಾಗಿ ಖರ್ಚಾಯಿತು. 1 ಕೋಟಿ ರೂ. ಮೌಲ್ಯದ ಇಂಧನ ವ್ಯರ್ಥವಾಯಿತು ಎಂದು ಹಿರಿಯ ಪೈಲಟ್ ಒಬ್ಬರು ತಿಳಿಸಿದ್ದಾರೆ. ಅಂದರೆ ಪ್ರತಿ ಟನ್ ಇಂಧನದ ಮೇಲೆ ಸುಮಾರು 1 ಲಕ್ಷ ರೂ. ಆರ್ಥಿಕ ನಷ್ಟ ಎದುರಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಅದೇ ರೀತಿ ದೇಶಿಯ ವಿಮಾನಗಳು ಪ್ರತಿ ಬಾಂಬ್ ಬೆದರಿಕೆಯಿಂದ 6.32 ಲಕ್ಷದಿಂದ 7.15 ಲಕ್ಷದವರೆಗೆ ನಷ್ಟ ಅನುಭವಿಸಲಿವೆ ಎಂದು ಉದ್ಯಮ ವಲಯದ ತಜ್ಞರು ಹೇಳುತ್ತಾರೆ.
ಹೆಚ್ಚುವರಿ ಮಾರ್ಷಲ್‌ಗಳ ನಿಯೋಜನೆ
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನಗಳಲ್ಲಿ ಹೆಚ್ಚುವರಿ ಏರ್ ಮಾರ್ಷಲ್‌ಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರ ಯೋಜಿಸಿದೆ.
ಬೆದರಿಕೆ ಹಾಕುವವರ ವಿರುದ್ಧ ದಂಡನಾತ್ಮಕ ಕಾನೂನು ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಅಲ್ಲದೇ ಆರೋಪಿಗಳಿಗೆ ಜೀವಮಾನ ಪೂರ್ತಿ ವಿಮಾನಯಾನ ಸೇವೆ ನಿರ್ಬಂಧಿಸಲು ಯೋಜಿಸಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋದಿಂದ ಪ್ರಸ್ತಾವನೆ ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಿಗೆ ಐದು ವರ್ಷ ಸಜೆ
ಹುಸಿ ಬಾಂಬ್ ಬೆದರಿಕೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ಸಹ ವಿಮಾನಯಾನ ಭದ್ರತಾ ಬ್ಯೂರೊ ಸಂಸ್ಥೆ ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ. ಏರ್‌ಕ್ರಾಫ್ಟ್ ಕಾಯ್ದೆ 1934 ಮತ್ತು ಏರ್‌ಕ್ರಾಫ್ಟ್ ನಿಯಮ 1937 ಗೆ ತಿದ್ದುಪಡಿ ತಂದು ಕಾನೂನು ಬಿಗಿಗೊಳಿಸಲು ಗೃಹ ಸಚಿವಾಲಯದ ಅಧಿಕಾರಿಗಳು ಕಾನೂನು, ನ್ಯಾಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಸಮಾಲೋಚನಾ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.