Saif Ali Khan hospitalised: ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ: ಆಸ್ಪತ್ರೆಗೆ ದಾಖಲು
Saif Ali Khan hospitalised: ಮನೆಗೆ ನುಗ್ಗಿದ ದುಷ್ಕರ್ಮಿ ಸತತ ಆರು ಬಾರಿ ನಟ ಸೈಫ್ ಅಲಿಖಾನ್‌ಗೆ ಚಾಕುವಿನಿಂದ ಇರಿದಿದ್ದಾನೆ. ಆರೋಪಿಯು ಕಳ್ಳತನಕ್ಕಾಗಿ ನುಗ್ಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆದಿದೆ. ಅವರ ಮನೆಗೆ ಮಧ್ಯರಾತ್ರಿ ವೇಳೆ ನುಗ್ಗಿದ ದುಷ್ಕರ್ಮಿಯೊಬ್ಬರ ಸತತ ಆರು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ದರೋಡೆಗೆ ಬಂದವ ಕೃತ್ಯ ಎಸಗಿದ್ದಾನೆ ಎಂಬುದಾಗಿ ಆರಂಭಿಕ ಮಾಹಿತಿ ನೀಡಲಾಗಿದೆ.
ಮುಂಬೈನ ಪಶ್ಚಿಮ ಬಾಂದ್ರಾದಲ್ಲಿರುವ ಅವರ ನಿವಾಸಕ್ಕೆ ಮಧ್ಯರಾತ್ರಿ 2.30ರ ಸುಮಾರಿಗೆ ನುಗ್ಗಿ ದುಷ್ಕರ್ಮಿ ಹರಿತ ಚಾಕುವಿನಿಂದ ದಾಳಿ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವೇಳೆ ಮನೆಯಲ್ಲಿದ್ದವರು ಎಚ್ಚರಗೊಂಡ ನಂತರ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.
‘ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಕೂಡಾ ತನಿಖೆಗೆ ಕೈಜೋಡಿಸಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಹಲ್ಲೆಗೊಳಗಾಗಿದ್ದ ಸೈಫ್ ಅಲಿ ಖಾನ್ ಅವರನ್ನು ಮುಂಜಾನೆ 3.30ಕ್ಕೆ ಆಸ್ಪತ್ರೆಗೆ ಕರೆತರಲಾಯಿತು. ಸೈಫ್ ಅವರಿಗೆ ೬ ಕಡೆ ಚಾಕುವಿನಿಂದ ಆಳವಾಗಿ ಇರಿಯಲಾಗಿದೆ. ಬೆನ್ನುಮೂಳೆ ಸೇರಿದಂತೆ ಆರು ಭಾಗಗಳಲ್ಲಿ ಗಾಯಗಳಾಗಿವೆ. ಸದ್ಯ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ’ ಎಂದು ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮನಿ ಹೇಳಿದ್ದಾರೆ.
ಕರೀನಾ ಕಪೂರ್ ಮನೆಯಲ್ಲಿ ಇರಲಿಲ್ಲವೇ?
ಚಾಕು ಇರಿತದ ಘಟನೆ ನಡೆಯುವ ವೇಳೆ ಕರಿನಾ ಕಪೂರ್ ಮನೆಯಲ್ಲಿ ಇರಲಿಲ್ಲವೇ ಎಂಬ ಪ್ರಶ್ನೆಗಳು ಹುಟ್ಟಿವೆ., ಅವರ ಸಹೋದರಿ ಕರಿಷ್ಮಾ ಕಪೂರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಅದರಲ್ಲಿ ಕರೀನಾ ಕಪೂರ್ ಬುಧವಾರ ರಾತ್ರಿ 'ಗರ್ಲ್ಸ್ ನೈಟ್ ಔಟ್' ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಅದರಲ್ಲಿ , ವೀರ್ ದಿ ವೆಡ್ಡಿಂಗ್ ನಿರ್ಮಾಪಕಿ ರಿಯಾ ಕಪೂರ್ ಮತ್ತು ಅವರ ವೀರ್ ದಿ ವೆಡ್ಡಿಂಗ್ ಸಹನಟ ಸೋನಮ್ ಕಪೂರ್ ಇದ್ದರು.
ಆದರೆ, ದುಷ್ಕರ್ಮಿಯ ದಾಳಿಯ ಸಮಯದಲ್ಲಿ ಅವರು ಬಾಂದ್ರಾ ಮನೆಯಲ್ಲಿದ್ದರು. ಕರೀನಾ ಮತ್ತು ಮಕ್ಕಳಾದ ತೈಮೂರ್ ಮತ್ತು ಜೆಹ್ ಸೇರಿದಂತೆ ಕುಟುಂಬವು ಮನೆಯಲ್ಲಿತ್ತು ಎಂದು ನಟನ ಮೂಲಗಳು ತಿಳಿಸಿವೆ. ಸೈಫ್ ತನ್ನ ಕುಟುಂಬವನ್ನು ರಕ್ಷಿಸಲು ಹೋಗಿ ಚಾಕು ಇರಿತಕ್ಕೆ ಒಳಗಾಗಿದ್ದಾರೆ ಎಂದೂ ಹೇಳಿದ್ದಾರೆ.