ದೆಹಲಿ ಆಸ್ಪತ್ರೆ ಬೆಂಕಿ: 5 ಶಿಶುಗಳ ಶವ ಹಸ್ತಾಂತರ
ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಸಾವಿಗೀಡಾದ ಐದು ನವಜಾತ ಶಿಶುಗಳ ಶವಗಳನ್ನು ಮರಣೋತ್ತರ ಪರೀಕ್ಷೆ ನಂತರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಇನ್ನೆರಡು ಶಿಶುಗಳ ಶವವನ್ನು ಆನಂತರ ಪೋಷಕರಿಗೆ ನೀಡಲಾಗುವುದು. ಶನಿವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಐದು ಶಿಶುಗಳು ಗಾಯಗೊಂಡಿವೆ. ಒಂದು ಮಗು ಬೆಂಕಿ ಹೊತ್ತಿಕೊಳ್ಳುವ ಮೊದಲೇ ಮೃತಪಟ್ಟಿತ್ತು.
ಪರವಾನಗಿ ಇರಲಿಲ್ಲ: ವಿವೇಕ್ ವಿಹಾರ್‌ನ ನವಜಾತ ಶಿಶುಗಳ ಆಸ್ಪತ್ರೆಯ ಪರವಾನಗಿ ಮುಗಿದಿದ್ದರೂ, ಕಾರ್ಯನಿರ್ವಹಿಸುತ್ತಿತ್ತು. ಅರ್ಹ ವೈದ್ಯರು ಇರಲಿಲ್ಲ ಅಥವಾ ಅಗ್ನಿಶಾಮಕ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಆಸ್ಪತ್ರೆ ಮಾಲೀಕ ಡಾ.ನವೀನ್ ಖಿಚಿ ಹಾಗೂ ಕರ್ತ ವ್ಯದಲ್ಲಿದ್ದ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಪೊಲೀಸರು ಅವರ ಕಸ್ಟಡಿಗೆ ಕೋರುವ ಸಾಧ್ಯತೆಯಿದೆ.
ಸಚಿವರ ಸಭೆ: ಅವಘಡಕ್ಕೆ ನಿಖರ ಕಾರಣ ತಿಳಿಯಲು ಫಾರೆನ್ಸಿಕ್ ತಂಡಗಳು ಮತ್ತು ವಿದ್ಯುತ್ ವಿಭಾಗದ ಇನ್ಸ್‌ಪೆಕ್ಟರ್ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರು ದುರಂತದ ಬಗ್ಗೆ ಚರ್ಚಿಸಲು ಸೋಮವಾರ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ. ಉಷ್ಣ ಅಲೆಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.