ಕುವೈತ್ ಅಗ್ನಿ ದುರಂತ: ಕೊಚ್ಚಿಗೆ ಆಗಮಿಸಿದ  31 ಮೃತದೇಹ
x

ಕುವೈತ್ ಅಗ್ನಿ ದುರಂತ: ಕೊಚ್ಚಿಗೆ ಆಗಮಿಸಿದ 31 ಮೃತದೇಹ

31 ಶವಗಳಲ್ಲಿ 23 ಕೇರಳಿಯರು, ಏಳು ತಮಿಳಿಗರು ಮತ್ತು ಕರ್ನಾಟಕದ ಒಬ್ಬರು ಇದ್ದಾರೆ; ಉಳಿದ 14 ಶವಗಳನ್ನು ದೆಹಲಿಗೆ ಕಳುಹಿಸಲಾಯಿತು.


ಕುವೈತ್ ಅಗ್ನಿ ದುರಂತದಲ್ಲಿ ಮಡಿದ 23 ಕೇರಳಿಗರು ಸೇರಿದಂತೆ 31 ಭಾರತೀಯರ ಪಾರ್ಥಿವ ಶರೀರಗಳು ಕೊಚ್ಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ (ಜೂನ್ 14) ಆಗಮಿಸಿದವು.

23 ಕೇರಳೀಯರು, 7 ತಮಿಳಿಗರು ಮತ್ತು ಕರ್ನಾಟಕದ ಒಬ್ಬರು ಸೇರಿದಂತೆ 45 ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯು ಪಡೆ(ಐಎಎಫ್)ಯ ವಿಮಾನ ಐಎಎಫ್‌ ಸಿ30ಜೆ, ಬೆಳಗ್ಗೆ 10.30 ರ ಸುಮಾರಿಗೆ ಕೊಚ್ಚಿಗೆ ಬಂದಿಳಿಯಿತು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಚಿವರು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ದೇಶಕ್ಕೆ ವಿಪತ್ತು: ವಿಜಯನ್- ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯನ್, 'ಹೊರದೇಶದಲ್ಲಿ ನೆಲೆಸಿರುವವರು ಕೇರಳದ ಜೀವನಾಡಿಯಾಗಿದ್ದು, ಹಲವರು ಬೆಂಕಿಯಿಂದ ಸಾವಿಗೀಡಾಗಿರುವುದು ದುರದೃಷ್ಟಕರ. ಮೃತರ ಕುಟುಂಬಗಳಿಗೆ ಇದು ತುಂಬಲಾರದ ನಷ್ಟ. ಕುವೈತ್ ಸರ್ಕಾರ ಇಂಥ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕಿದೆ. ಭಾರತ ಸರ್ಕಾರ ಉತ್ತಮ ರೀತಿಯಲ್ಲಿ ಮಧ್ಯಪ್ರವೇಶಿಸಿದೆ,ʼ ಎಂದು ಹೇಳಿದರು.

ʻಕುವೈತ್‌ ಸರ್ಕಾರ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಲಿದೆ. ಭಾರತ ಸರ್ಕಾರವು ಕುವೈತ್‌ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಮೃತಪಟ್ಟವರು ಜೀವನೋಪಾಯಕ್ಕಾಗಿ ಅಲ್ಲಿಗೆ ಹೋಗಿದ್ದರು. ಈ ಕುಟುಂಬಗಳಿಗೆ ಆರ್ಥಿಕ ನೆರವು ಅಗತ್ಯವಿದೆ,ʼ ಎಂದು ಹೇಳಿದರು.

ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಮಾತನಾಡಿ, ʻವಿದೇಶದಲ್ಲಿ ಕಠಿಣ ಶ್ರಮ ವಹಿಸಿ ಕೆಲಸ ಮಾಡಿ, ದೇಶ ಕಟ್ಟಲು ನೆರವಾಗುವವರನ್ನು ಗೌರವಿಸಲಾಗುತ್ತದೆ. ಈ ದುರಂತ ಅತ್ಯಂತ ನೋವಿನದು,ʼ ಎಂದು ಹೇಳಿದರು.

ಗೌರವ ಸಲ್ಲಿಕೆ: ವಿದೇಶಾಂಗ ವ್ಯವಹಾರಗಳ ಕೇಂದ್ರ ಸಚಿವ ಕೀರ್ತಿವರ್ಧನ್ ಸಿಂಗ್ ಮತ್ತು ತಮಿಳುನಾಡು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಸಚಿವ ಗಿಂಗಿ ಕೆ.ಎಸ್. ಮಸ್ತಾನ್ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪೊಲೀಸರು ಗೌರವ ವಂದನೆ ಸಲ್ಲಿಸಿದರು.

ಉಳಿದ 14 ಶವಗಳನ್ನು ಅದೇ ವಿಮಾನದಲ್ಲಿ ದೆಹಲಿಗೆ ಕಳುಹಿಸಲಾಗಿದೆ ಎಂದು ಸಿಐಎಎಲ್ ತಿಳಿಸಿದೆ.

Read More
Next Story