ಬಿಜೆಪಿಯ ಸುಳ್ಳಿನ ಪರ್ವತ ಶೀಘ್ರದಲ್ಲೇ ಕುಸಿಯಲಿದೆ: ಆಮ್‌ ಆದ್ಮಿ ಪಾರ್ಟಿ
x

ಬಿಜೆಪಿಯ 'ಸುಳ್ಳಿನ ಪರ್ವತ' ಶೀಘ್ರದಲ್ಲೇ ಕುಸಿಯಲಿದೆ: ಆಮ್‌ ಆದ್ಮಿ ಪಾರ್ಟಿ


ಸಂಸದ ಸಂಜಯ್ ಸಿಂಗ್‌ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿರುವುದರಿಂದ ಉತ್ತೇಜನಗೊಂಡಿರುವ ಆಮ್ ಆದ್ಮಿ ಪಕ್ಷ (ಎಎಪಿ), ʻಪ್ರಜಾಪ್ರಭುತ್ವದ ದೊಡ್ಡ ದಿನʼ. ಪಕ್ಷದ ಇತರ ನಾಯಕರು ಶೀಘ್ರ ಜೈಲಿನಿಂದ ಹೊರಬರುತ್ತಾರೆ ಮತ್ತು ಬಿಜೆಪಿಯ ʻಸುಳ್ಳಿನ ಪರ್ವತʼ ಮುಂದಿನ ದಿನಗಳಲ್ಲಿ ಕುಸಿಯಲಿದೆ ಎಂದು ಹೇಳಿದೆ.

ಇಡೀ ಮದ್ಯ ಹಗರಣ ಪ್ರಕರಣವು ಸಾಕ್ಷಿಗಳು ಮತ್ತು ಅನುಮೋದಕರ ʻಸುಲಿಗೆʼ ಹೇಳಿಕೆಗಳನ್ನು ಆಧರಿಸಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಆದೇಶ ಬಹಿರಂಗಪಡಿಸಿದೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಪ್‌ ನಾಯಕರು ಹೇಳಿದರು. ʻಇದು ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ದಿನ; ಸಂತೋಷ ಮತ್ತು ಭರವಸೆಯ ಕ್ಷಣʼ ಎಂದು ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ʻಸತ್ಯಮೇವ ಜಯತೇʼ: ಸಚಿವೆ ಅತಿಶಿ ಮಾತನಾಡಿ, ಎರಡು ವರ್ಷಗಳಿಂದ ಎಎಪಿ ನಾಯಕರನ್ನು ನಕಲಿ ಪ್ರಕರಣಗಳಲ್ಲಿ ಗುರಿಯಾಗಿಸಿಕೊಂಡು, ಬಂಧಿಸಲಾಗುತ್ತಿದೆ. ನ್ಯಾಯಾಲಯದ ವಿಚಾರಣೆಯಲ್ಲಿ ಎರಡು ಪ್ರಮುಖ ವಿಷಯಗಳು ಜನರ ಮುಂದೆ ಬಂದಿವೆ - ಹಣದ ಜಾಡು ಎಲ್ಲಿದೆ ಎಂದು ಸುಪ್ರೀಂ ಕೋರ್ಟ್ ಕೇಳಿದಾಗ ಇಡಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ; ಮತ್ತು, ಸಂಪೂರ್ಣ ಪ್ರಕರಣ ಕೇಜ್ರಿವಾಲ್ ವಿರುದ್ಧ ಹೇಳಿಕೆ ನೀಡಬೇಕೆಂದು ಒತ್ತಡಕ್ಕೊಳಗಾದ ಅನುಮೋದಕರ ಮಾತುಗಳನ್ನು ಆಧರಿಸಿದೆʼ ಎಂದು ಹೇಳಿದರು.

ಸಿಂಗ್‌ಗೆ ಜಾಮೀನು ಸಿಕ್ಕ ಕೆಲವೇ ನಿಮಿಷಗಳಲ್ಲಿ ಅತಿಶಿ ಎಕ್ಸ್‌ನಲ್ಲಿ ʻಸತ್ಯಮೇವ ಜಯತೆʼ ಎಂದು ಪೋಸ್ಟ್‌ ಮಾಡಿದ್ದಾರೆ.

ಇಡಿ ಆಕ್ಷೇಪಿಸಲಿಲ್ಲ: ಸಿಂಗ್‌ ಕಳೆದ ವರ್ಷ ಅಕ್ಟೋಬರ್ 4 ರಂದು ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿದ್ದರು. ಅವರಿಗೆ ಜಾಮೀನು ನೀಡಲು ಇಡಿ ಆಕ್ಷೇಪಿಸದ ಕಾರಣ ಜಾಮೀನು ನೀಡಲಾಗಿದೆ. ಅವರಿಂದ ಹಣ ವಶಪಡಿಸಿಕೊಂಡಿಲ್ಲ ಮತ್ತು ಅದರ ಕುರುಹು ಕಂಡುಬಂದಿಲ್ಲ ಎಂದು ಗಮನಿಸಿದ ಸುಪ್ರೀಂ ಕೋರ್ಟ್, ಅವರ ಬಿಡುಗಡೆಗೆ ಆದೇಶ ನೀಡಿದೆ.

ಎಎಪಿ ನಾಯಕ ತಮ್ಮ ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸಬಹುದು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡುವಂತಿಲ್ಲ. ವಿಚಾರಣೆ ಅವಧಿಯಲ್ಲಿ ಸಿಂಗ್ ಜಾಮೀನಿನ ಮೇಲೆ ಹೊರಗಿರುತ್ತಾರೆ. ಜಾಮೀನಿಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ವಿಶೇಷ ನ್ಯಾಯಾಲಯ ನಿಗದಿಪಡಿಸುತ್ತದೆ ಎಂದು ಹೇಳಿದೆ. ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್‌ ಬಿಡುಗಡೆ ನೀಡಿದ ಕೂಡಲೇ, ಭಾರದ್ವಾಜ್ ಮತ್ತು ರಾಘವ್ ಚಡ್ಡಾ ಸೇರಿದಂತೆ ಪಕ್ಷದ ಹಲವು ನಾಯಕರು ʼಜೈ ಬಜರಂಗ್‌ ಬಲಿʼ ಎಂದು ನಾಮಸ್ಮರಣೆ ಮಾಡಿದರು.

ʻನ್ಯಾಯಾಂಗ ವ್ಯವಸ್ಥೆಯ ಅಣಕʼ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಎಪಿ ನಾಯಕ ಜಾಸ್ಮಿನ್ ಶಾ, ʻಅಬಕಾರಿ ನೀತಿ ಪ್ರಕರಣದಲ್ಲಿ ಆಪ್‌ ನಾಯಕರಿಗೆ ಏಕೆ ಜಾಮೀನು ಸಿಗುತ್ತಿಲ್ಲ ಎಂದು ಬಿಜೆಪಿ ಕೇಳುತ್ತಿತ್ತು. ಈಗ ಸಂಜಯ್ ಸಿಂಗ್‌ಗೆ ಜಾಮೀನು ಲಭ್ಯವಾಗಿರುವುದರಿಂದ, ದೇಶ ಮತ್ತು ಅದರ ನ್ಯಾಯಾಂಗ ವ್ಯವಸ್ಥೆಯನ್ನು ಅಪಹಾಸ್ಯ ಮಾಡಿದ್ಧೇಕೆ ಎಂಬುದಕ್ಕೆ ಬಿಜೆಪಿ ಉತ್ತರಿಸಬೇಕು ... ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನ ಸತ್ಯದ ಪರವಾಗಿ ನಿಂತಿದೆ ಎಂದು ಹೆಮ್ಮೆಪಡಬೇಕು. ಕೆಲವೇ ದಿನಗಳಲ್ಲಿ ಸುಳ್ಳಿನ ಗುಡ್ಡ ಕುಸಿಯಲಿದೆʼ ಎಂದು ಶಾ ಹೇಳಿದರು.

ಪೂರ್ತಿ ಸಂತೋಷವಾಗಿಲ್ಲ: ಸಿಂಗ್ ಪತ್ನಿಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್ ಅವರ ಪತ್ನಿ ಅನಿತಾ, ಮೂವರು ಸಹೋದರರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಇನ್ನೂ ಸೆರೆಯಲ್ಲಿ ಇರುವುದರಿಂದ, ಪತಿಯ ಬಿಡುಗಡೆಯಿಂದ ಪೂರ್ತಿ ಸಂತೋಷವಾಗಿಲ್ಲ ಎಂದು ಹೇಳಿದರು.ಸಿಂಗ್ ಅವರ ಜಾಮೀನನ್ನು ʻಸತ್ಯದ ವಿಜಯʼ ಎಂದು ಬಣ್ಣಿಸಿದ ಅನಿತಾ, ʻಪ್ರಕರಣದಲ್ಲಿ ಬಂಧಿತರಾದ ಎಲ್ಲಾ ನಾಯಕರನ್ನು ಮುಕ್ತ ಗೊಳಿಸಿದಾಗ ಎಎಪಿ ಸಂಭ್ರಮಿಸುತ್ತದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆʼ ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಬಂಧಿಸಿದ್ದು, ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಮನೀಶ್ ಸಿಸೋಡಿಯಾ ತಿಹಾರ್ ಜೈಲಿನಲ್ಲಿ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೂಡ ಸೆರೆಮನೆಯಲ್ಲಿದ್ದಾರೆ.

Read More
Next Story