ಎಎಪಿಯಿಂದ ʻಕೇಸರಿ ಮುಕ್ತ ಭಾರತʼ : ಕೇಜ್ರಿವಾಲ್‌
x
ಅರವಿಂದ್ ಕೇಜ್ರಿವಾಲ್

ಎಎಪಿಯಿಂದ ʻಕೇಸರಿ ಮುಕ್ತ ಭಾರತʼ : ಕೇಜ್ರಿವಾಲ್‌

ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಿದ ಅರವಿಂದ್ ಕೇಜ್ರಿವಾಲ್


ದೇಶದಲ್ಲಿ ಆಮ್‌ ಆದ್ಮಿ ಪಾರ್ಟಿಯು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಇದೇ ಕಾರಣದಿಂದ ಆಮ್‌ ಆದ್ಮಿ ಪಾರ್ಟಿಯನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ದೆಹಲಿಯ ವಿಧಾನಸಭೆಯಲ್ಲಿ ಶನಿವಾರ ವಿಶ್ವಾಸ ಮತಯಾಚನೆ ನಿರ್ಣಯ ಮಂಡಿಸಿ ಮಾತನಾಡಿದರು. ʻಈ ವರ್ಷ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೂ, 2029 ರ ಚುನಾವಣೆಯಲ್ಲಿ ಕೇಸರಿ ಪಕ್ಷದಿಂದ ದೇಶವನ್ನು ಎಎಪಿ "ಮುಕ್ತಗೊಳಿಸಲಿದೆ" ಎಂದು ಸವಾಲು ಹಾಕಿದರು. ನಮ್ಮ ಸರ್ಕಾರಕ್ಕೆ ಸದನದಲ್ಲಿ ಬಹುಮತವಿದೆ. ಆದರೆ, ಬಿಜೆಪಿ ನಮ್ಮ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ. ಇದೇ ಕಾರಣದಿಂದಾಗಿ ನಾವು ವಿಶ್ವಾಸ ಮತಯಾಚನೆ ಮಾಡಬೇಕಾಯಿತು ಎಂದಿದ್ದಾರೆ.

ದೆಹಲಿ ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ವಿಶ್ವಾಸ ಮತಯಾಚನೆ ನಿರ್ಣಯವನ್ನು ಅಂಗೀಕರಿಸಲಾಯಿತು. ಮತದಾನದ ಸಮಯದಲ್ಲಿ ಎಎಪಿಯ 62 ಶಾಸಕರ ಪೈಕಿ 54 ಮಂದಿ ಹಾಜರಿದ್ದರು. ಯಾವುದೇ ಆಪ್ ಶಾಸಕರು ಪಕ್ಷಾಂತರ ಮಾಡಿಲ್ಲ ಎಂದು ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ. ಇಬ್ಬರು ಶಾಸಕರು ಜೈಲಿನಲ್ಲಿದ್ದಾರೆ. ಕೆಲವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಇನ್ನು ಕೆಲವರು ಪ್ರಯಾಣದಲ್ಲಿ ಇದ್ದಾರೆ ಎಂದಿದ್ದಾರೆ. ಅಲ್ಲದೇ ಎಎಪಿ ಶಾಸಕರನ್ನು ಹೇಗೆ ಸಂಪರ್ಕಿಸಿದರು ಮತ್ತು ಪಕ್ಷವನ್ನು ಬದಲಾಯಿಸಲು ಹಣದ ಆಮಿಷವೊಡ್ಡಿದರು ಎಂದು ಅವರು ವಿವರಿಸಿದರು.

ನನ್ನನ್ನು ಬಂಧಿಸುವ ಮೂಲಕ ಎಎಪಿಯನ್ನು ಮುಗಿಸಬಹುದು ಎಂದು ಬಿಜೆಪಿ ಭಾವಿಸಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ʻನೀವು ನನ್ನನ್ನು ಬಂಧಿಸಬಹುದು. ಆದರೆ, ಕೇಜ್ರಿವಾಲ್ ಆಲೋಚನೆಗಳನ್ನು ಹೇಗೆ ಮುಗಿಸುತ್ತೀರಿ? ಸೇವಾ ಇಲಾಖೆ ಮತ್ತು ಅಧಿಕಾರಿಗಳ ಮೇಲೆ ನಿಯಂತ್ರಣ ವಿಧಿಸುವ ಮೂಲಕ ಬಿಜೆಪಿ ದೆಹಲಿ ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸುತ್ತಿದೆʼ ಎಂದು ಆರೋಪಿಸಿದರು.

ʻಅವರು ರಾಮಭಕ್ತರೆಂದು ಹೇಳಿಕೊಳ್ಳುತ್ತಾರೆ. ಆದರೆ, ನಮ್ಮ ಆಸ್ಪತ್ರೆಗಳಲ್ಲಿ ಬಡವರಿಗೆ ಔಷಧಿ ನೀಡುವುದನ್ನು ನಿಲ್ಲಿಸಿದ್ದಾರೆ. ಬಡವರಿಗಾಗಿ ಔಷಧಿಗಳನ್ನು ನಿಲ್ಲಿಸುವಂತೆ ಭಗವಂತ ಶ್ರೀ ರಾಮ ಕೇಳಿದ್ದಾರೆಯೇ? ಈ ಹಿಂದೆ ನನ್ನ ಮೇಲೆ ದಾಳಿ ಮಾಡಲಾಗಿತ್ತು. ಕಪಾಳಮೋಕ್ಷವೂ ಆಗಿತ್ತು. ಇಷ್ಟೇ ಅಲ್ಲದೇ ಮಸಿ ಎರಚಿದ್ದರು. ಈಗ ಬಂಧಿಸಲು ಬಯಸುತ್ತಿದ್ದಾರೆʼ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

Read More
Next Story