ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ: ಫೆ.17-18ಕ್ಕೆ
ಹೊಸದಿಲ್ಲಿ, ಫೆ.16- ಬಿಜೆಪಿ ರಾಷ್ಟ್ರೀಯ ಮಂಡಳಿ ಫೆ.17-18ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯ ಕಾರ್ಯಸೂಚಿಯನ್ನು ಮಂಡಿಸುವ ನಿರೀಕ್ಷೆಯಿದೆ,
ಶನಿವಾರ ಪ್ರಾರಂಭವಾಗಲಿರುವ ಸಭೆಯಲ್ಲಿ ಸುಮಾರು 11,500 ಸದಸ್ಯರು ಭಾಗವಹಿಸಲಿದ್ದಾರೆ. ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಸಭೆಯನ್ನು ಉದ್ಘಾಟಿಸಲಿದ್ದು, ಮೋದಿ ಅವರು ಭಾನುವಾರ ಸಮಾರೋಪ ಭಾಷಣ ಮಾಡಲಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಚಾರದ ವಿಶಾಲ ರೂಪರೇಶೆಗಳನ್ನುವಿವರಿಸುವ ಸಾಧ್ಯತೆಯಿದೆ ಮತ್ತು 370 ಸ್ಥಾನಗಳನ್ನು ಗೆಲ್ಲುವ ಗುರಿ ಸಾಧಿಸಲು ಸದಸ್ಯರನ್ನು ಉತ್ತೇಜಿಸಲು ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ.
ಸಭೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬಿಜೆಪಿ ಪ್ರತಿನಿಧಿಗಳ ಅತಿದೊಡ್ಡ ಸಭೆಯಾಗಲಿದೆ. 1995ರಲ್ಲಿ ಪಕ್ಷ ಮುಂಬೈನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹತ್ತಾರು ಸಾವಿರ ಜನರು ಭಾಗವಹಿಸಿದ್ದರು. ಮುಖ್ಯಮಂತ್ರಿಗಳು, ರಾಜ್ಯ ಸಚಿವರು, ರಾಜ್ಯಾಧ್ಯಕ್ಷರು ಮತ್ತು ದೇಶಾದ್ಯಂತದ ಸಂಘಟನಾ ಮುಖಂಡರು ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
2014 ಮತ್ತು 2019 ರ ಲೋಕಸಭೆ ಚುನಾವಣೆಗಳಿಗೆ ವಾರಗಳ ಮೊದಲು ದಿಲ್ಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಂಡಳಿ ಸಭೆಗಳಲ್ಲಿ, 3000 ಮಂದಿ ಹಾಜರಿದ್ದರು. ಮೂರನೇ ಬಾರಿ ಅಧಿಕಾರ: ಜವಾಹರಲಾಲ್ ನೆಹರೂ ನಂತರ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಂಡ ಮೊದಲ ಪ್ರಧಾನಿಯಾಗಲು ಮೋದಿ ಸಿದ್ಧತೆ ನಡೆಸಿದ್ದಾರೆ. ಪರಿಷತ್ತಿನಲ್ಲಿ ಎರಡು ನಿರ್ಣಯಗಳನ್ನು ಅಂಗೀಕರಿಸುವ ಸಾಧ್ಯತೆಯಿದೆ ಎಂದು ಪಕ್ಷದ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಗುರುವಾರ ಹೇಳಿದ್ದರು.
ಹಣಕಾಸು ಸಚಿವೆ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕತೆ ಕುರಿತ ಶ್ವೇತಪತ್ರ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಇಂಡಿಯ ಒಕ್ಕೂಟದಲ್ಲಿನ ಅವ್ಯವಸ್ಥೆ, ಯಶಸ್ವಿ ಜಿ20 ಶೃಂಗಸಭೆ ಮತ್ತಿತರ ವಿಷಯಗಳು ಸಭೆ ಮತ್ತು ನಿರ್ಣಯಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಚುನಾವಣೆ ಬಾಂಡ್‌ಗಳ ಅಮಾನ್ಯತೆ ತೀರ್ಪು, ರೈತರ ಪ್ರತಿಭಟನೆ ಬಗ್ಗೆ ಆಡಳಿತ ಪಕ್ಷ ಪ್ರತಿಕ್ರಿಯಿಸುತ್ತದೆಯೇ ಎಂಬ ಪ್ರಶ್ನೆಯಿದೆ.