Parliament Session | ಸಂಸತ್ತಿನಲ್ಲಿ ಆಡಳಿತ, ವಿಪಕ್ಷಗಳ ತಳ್ಳಾಟ-ನೂಕಾಟ; ಸಂಸದರಿಗೆ ಗಾಯ
ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ ಇಂಡಿಯಾ ಒಕ್ಕೂಟದ ಸದಸ್ಯರು ಸಂಸತ್ತಿನ ಎದುರು ಪ್ರತಿಭಟನೆ ನಡೆಸುವ ವೇಳೆ ಆಡಳಿತ ಪಕ್ಷದ ಸಂಸದರು ಮುಖಾಮುಖಿಯಾಗಿ ತಳ್ಳಾಟ- ನೂಕಾಟ ನಡೆದಿದೆ. ಈ ವೇಳೆ ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜಿನ ಖರ್ಗೆ, ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಸೇರಿ ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಗುರುವಾರವೂ ಸಂಸತ್ ಕಲಾಪ ಬಲಿಯಾಯಿತು. ಅಮಿತ್ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಸದಸ್ಯರು ಸಂಸತ್ ಒಳಗೆ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದಾಗ ಗದ್ದಲ ಏರ್ಪಟ್ಟಿತು. ಈ ವೇಳೆ ಎರಡೂ ಕಡೆಯ ಸದಸ್ಯರ ಮಧ್ಯೆ ತಳ್ಳಾಟ, ನೂಕಾಟ ನಡೆದು ಕೆಲವು ಸಂಸದರು ಗಾಯಗೊಂಡರು.
ಘಟನೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಸೇರಿ ಕೆಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬೇಡ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಅಮಿತ್ ಶಾ ದೇಶದ ಜನರ ಕ್ಷಮೆಯಾಚಿಸಬೇಕು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸುವ ವೇಳೆ ಈ ಘಟನೆ ಜರುಗಿದೆ.
ಪರಸ್ಪರ ಆರೋಪಗಳ ವಿನಿಮಯ
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರತಾಪ ಚಂದ್ರ ಸಾರಂಗಿ ಅವರನ್ನು ತಳ್ಳಿದ್ದರಿಂದ ಅವರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಈ ಆರೋಪವನ್ನು ರಾಹುಲ್ ಗಾಂಧಿ ತಳ್ಳಿಹಾಕಿದ್ದಾರೆ. ಬಿಜೆಪಿ ಸದಸ್ಯರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಳಗೆ ಬೀಳಿಸಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಸಂಸತ್ತಿನಲ್ಲಿ ನಡೆದ ಗದ್ದಲದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, "ನಾನು ಸಂಸತ್ತಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದೆ. ಬಿಜೆಪಿ ಸಂಸದರು ನನ್ನನ್ನು ತಡೆದು, ತಳ್ಳಿದರು. ಬೆದರಿಕೆ ಹಾಕಿದರು. ಜೊತೆಗೆ ನಮ್ಮ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ತಳ್ಳಿ ಗುಂಡಾವರ್ತನೆ ಪ್ರದರ್ಶಿಸಿದರು ಎಂದು ಆರೋಪಿಸಿದ್ದಾರೆ.
ಸೂಕ್ತ ಕ್ರಮದ ಭರವಸೆ
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ್ ಜೋಶಿ ಅವರುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿರುವ ಪ್ರತಾಪ್ ಚಂದ್ರ ಸಾರಂಗಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಸಂಸತ್ತು ಕುಸ್ತಿ ವೇದಿಕೆಯಲ್ಲ. ಸಂಸದರ ವಿರುದ್ಧ ರಾಹುಲ್ ಗಾಂಧಿ ಶಕ್ತಿ ಪ್ರದರ್ಶನ ಮಾಡಬಾರದು. ತಳ್ಳಾಟ ನೂಕಾಟದ ವಿಡಿಯೋಗಳನ್ನು ಪರಿಶೀಲಿಸುತ್ತಿದ್ದು, ಆರೋಪ ನಿಜವಾದರೆ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಸ್ವೀಕರ್‌ಗೆ ಕಾಂಗ್ರೆಸ್ ದೂರು
ಕಾಂಗ್ರೆಸ್ ಸಂಸದರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದರ ಅಶಿಸ್ತಿನ ವರ್ತನೆ ಮತ್ತು ಸಂಸತ್ತಿಗೆ ಪ್ರವೇಶಿಸದಂತೆ ತಡೆದ ಕುರಿತು ದೂರು ಸಲ್ಲಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಬಿಜೆಪಿ ಸಂಸದರು ದೂಡಿದ್ದಾರೆ. ಇದರಿಂದ ಅವರು ನಿಯಂತ್ರಣ ಕಳೆದುಕೊಂಡು ನೆಲದ ಮೇಲೆ ಬಿದ್ದರು. ಖರ್ಗೆ ಅವರು ಈಗಾಗಲೇ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಡಳಿತ ಹಾಗೂ ವಿಪಕ್ಷ ಸದಸ್ಯರ ಗದ್ದಲದಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಶಾ ವಿರುದ್ಧ ನಿಲುವಳಿ ಸೂಚನೆ
ಇದಕ್ಕೂ ಮೊದಲು, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟದ ಸಂಸದರು ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸಂವಿಧಾನ ಶಿಲ್ಪಿಯ ಬಗ್ಗೆ ಹಗುರವಾಗಿ ಮಾತನಾಡಿದ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸಂಸದರು ಕೂಡ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಅವಮಾನಿಸಿದೆ. ಅದಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಇನ್ನು ಅಂಬೇಡ್ಕರ್ ಕುರಿತು ರಾಜ್ಯಸಭೆಯಲ್ಲಿ ಅಮಿತ್ ಶಾ ನೀಡಿದ ಹೇಳಿಕೆ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ನಿಲುವಳಿ ಸೂಚನೆ ಮಂಡಿಸಿದರು.