
ಕಲಬುರಗಿ ಜಿಲ್ಲಾಧಿಕಾರಿಯನ್ನು 'ಪಾಕಿಸ್ತಾನಿ' ಎಂದು ಕರೆದ ಬಿಜೆಪಿ ಎಂಎಲ್‌ಸಿ ರವಿಕುಮಾರ್ ವಿರುದ್ಧ ಪ್ರಕರಣ ದಾಖಲು
ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ನೀಡಿದ ವಿವಾದಾತ್ಮಕ ಹೇಳಿಕೆಗಳನ್ನು ಕರ್ನಾಟಕದ ಐಎಎಸ್ ಅಧಿಕಾರಿಗಳ ಸಂಘವು ತೀವ್ರವಾಗಿ ಖಂಡಿಸಿದೆ.
ಕಲಬುರಗಿ ಜಿಲ್ಲಾಧಿಕಾರಿ (ಡಿಸಿ) ಫೌಝಿಯಾ ತರನ್ನಂ ಅವರನ್ನು "ಪಾಕಿಸ್ತಾನಿ" ಎಂದು ಕರೆದ ಆರೋಪದ ಮೇಲೆ ಕರ್ನಾಟಕದ ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ವಿವಾದಾತ್ಮಕ ಹೇಳಿಕೆಯನ್ನು ರವಿಕುಮಾರ್ ಅವರು ಮೇ 24ರಂದು ಬಿಜೆಪಿ ಪ್ರತಿಭಟನೆಯ ವೇಳೆ ನೀಡಿದ್ದರು.
ಪ್ರತಿಭಟನೆಯ ಸಂದರ್ಭದಲ್ಲಿ ಎಂಎಲ್‌ಸಿ ರವಿಕುಮಾರ್, ಐಎಎಸ್ ಅಧಿಕಾರಿ ಫೌಝಿಯಾ ತರನ್ನಂ ಅವರು ಕಾಂಗ್ರೆಸ್ ಪಕ್ಷದ ಸೂಚನೆಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. "ಈಕೆ ಪಾಕಿಸ್ತಾನದಿಂದ ಬಂದವರಂತಿದ್ದಾರೆ" ಎಂದು ಅವರು ವ್ಯಂಗ್ಯವಾಗಿ ಹೇಳಿದ್ದರು. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಆರಂಭವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅದನ್ನು ಖಚಿತಪಡಿಸಿದ್ದಾರೆ.
ಐಎಎಸ್ ಅಧಿಕಾರಿಗಳ ಸಂಘದಿಂದ ತೀವ್ರ ಖಂಡನೆ
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಐಎಎಸ್ ಅಧಿಕಾರಿಗಳ ಸಂಘವು ರವಿಕುಮಾರ್ ಅವರು ಬೇಷರತ್ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. "ಫೌಝಿಯಾ ತರನ್ನಂ ನಿಷ್ಕಳಂಕ ಖ್ಯಾತಿಯ ಐಎಎಸ್ ಅಧಿಕಾರಿಯಾಗಿದ್ದು, ಅವರ ಸಾರ್ವಜನಿಕ ಸೇವೆ ಮತ್ತು ರಾಜ್ಯಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾದದ್ದು. ರವಿಕುಮಾರ್ ಅವರ ಹೇಳಿಕೆಗಳು ಆಧಾರರಹಿತ, ಅನ್ಯಾಯಯುತ ಮತ್ತು ಸಂಪೂರ್ಣವಾಗಿ ತರ್ಕರಹಿತವಾಗಿವೆ. ಇಂತಹ ಪ್ರಚೋದನಕಾರಿ ಮತ್ತು ಸುಳ್ಳು ಹೇಳಿಕೆಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಘನತೆಯನ್ನು ಕೆಡಿಸುವುದು ಮಾತ್ರವಲ್ಲದೇ, ಅವರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತವ," ಎಂದು ಹೇಳಿದರು.